Malenadu Mitra
ರಾಜ್ಯಶಿವಮೊಗ್ಗ

ಶಿವಮೊಗ್ಗ ಹಿಂದೂಮಹಾಸಭಾ ಗಣಪತಿ ಅದ್ಧೂರಿ ರಾಜಬೀದಿ ಉತ್ಸವ , ಸಹಸ್ರಾರು ಸಂಖ್ಯೆಯಲ್ಲಿ ನೆರೆದ ಭಕ್ತರು, ಕುಣಿದು ಸಂಭ್ರಮಿಸಿದ ಮಹಿಳೆಯರು, ಯುವಕರು

ಎಲ್ಲೆಂದರಲ್ಲಿ ಕೇಸರಿ, ಮಂಗಳ ವಾದ್ಯ, ಚಂಡೆಮೇಳ, ಡೊಳ್ಳು ಕುಣಿತ, ಕಹಳೆ, ಮಕ್ಕಳು, ಯುವಕರು, ಮಹಿಳೆಯರೆನ್ನದೆ ಎಲ್ಲರಿಂದಲೂ ತಂಡೋಪತಂಡವಾಗಿ ನೃತ್ಯ, ಪ್ರತಿ ಸರ್ಕಲ್‌ನಲ್ಲಿಯೂ ಅಳವಡಿಸಿರುವ ಡಿಜೆಗೆ ಹೆಜ್ಜೆಹಾಕುವ ಯುವಕರ ದಂಡು ಇದು ಶಿವಮೊಗ್ಗ ನಗರದಲ್ಲಿ ಶುಕ್ರವಾರ ಹಿಂದೂ ಮಹಾ ಸಭಾ ಗಣಪತಿ ವಿಸರ್ಜನಾ ಪೂರ್ವ ರಾಜಬೀದಿ ಉತ್ಸವದಲ್ಲಿ ಕಂಡು ಬಂದ ದೃಶ್ಯ. ನಗರದ ಕೋಟೆ ಶ್ರೀ ಭೀಮೇಶ್ವರ ದೇವಾಲಯದಲ್ಲಿ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣಪತಿಯ ಮೆರವಣಿಗೆ ಬೆಳಗ್ಗೆಯಿಂದ ತಡರಾತ್ರಿವರೆಗೂ ವೈಭವ ದೃಶ್ಯಾವಳಿಗಳು ಜನರ ಕಣ್ಮನ ಸೆಳೆದವು. ಮಹಿಳೆರೂ ಕೂಡಾ ವಾದ್ಯಗಳಿಗೆ ತಕ್ಕಂತೆ ಹೆಜ್ಜೆ ಹಾಕಿದ್ದು, ಆಕರ್ಷೀಣೀಯವಾಗಿತ್ತು.
ಶುಕ್ರವಾರ ಬೆಳಿಗ್ಗೆ ಸ್ವಾಮಿಗೆ ಮಹಾ ಮಂಗಳಾರತಿ ಪೂಜೆ ನೆರವೇರಿಸುವುದರೊಂದಿಗೆ ರಾಜಬೀದಿ ಉತ್ಸವ ಆರಂಭವಾಯಿತು. ಹರಿಗೆಯ ಕೆ.ಕೆ.ಗೌಡ ಕುಟುಂಬದವರಿಂದ ೭೫ ಕೆ.ಜಿ. ತೂಕದ ಸೇಬಿನ ಹಾರ ಸಮರ್ಪಿಸಲಾಯಿತು. ಹಿಂದೂ ಮಹಾಸಭಾ ಸಂಘಟನೆಯ ಅಧ್ಯಕ್ಷ ಆರ್. ಸುರೇಶ್ ಕುಮಾರ್, ಮಾಜಿ ಸಚಿವ ಶಾಸಕರಾದ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ , ಕೆ.ಇ.ಕಾಂತೇಶ್, ಜ್ಯೋತಿಪ್ರಕಾಶ್, ಡಿ.ಎಸ್. ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನ ಕುಮಾರ್, ಎಂ.ಬಿ. ಭಾನುಪ್ರಕಾಶ್, ಆರ್‌ಎಸ್‌ಎಸ್ ವಿಭಾಗೀಯ ಪ್ರಮುಖ ಪಟ್ಟಾಭಿರಾಮ್, ಪ್ರಮುಖರಾದ ಎಂ.ಶ್ರೀಕಾಂತ್, ಹೆಚ್.ಎಸ್. ಸುಂದರೇಶ್, ಎಸ್. ದತ್ತಾತ್ರಿ, ಎಸ್.ಎನ್. ಚನ್ನಬಸಪ್ಪ , ಮಹಾನಗರ ಪಾಲಿಕೆ ಸದಸ್ಯರು ಹಿಂದೂ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.
ಕೊರೊನ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ಅದ್ಧೂರಿ ಮೆರವಣಿಗೆ ನಡೆದಿರಲಿಲ್ಲ. ಈ ಬಾರಿ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲು ಸಮಿತಿ ತೀರ್ಮಾನಿಸಿ ಅದರಂತೆ ಸಕಲ ತಯಾರಿಯನ್ನೂ ನಡೆಸಿತ್ತು. ಅದಕ್ಕೆ ಪೂರಕವೆಂಬಂತೆ ರಾಜಬೀದಿ ಉತ್ಸವ ಸಾಗುವ ದಾರಿಯಲ್ಲಿ ವಿವಿಧ ಅಲಂಕಾರ ಮಾಡಲಾಗಿತ್ತು.

ಚಿತ್ತಾಕರ್ಷಕ ರಂಗೋಲಿ
ಗಣಪತಿಯ ರಾಜಬೀದಿ ಉತ್ಸವ ಸಾಗುವ ಎಸ್.ಪಿಎಂ. ರಸ್ತೆ, ರಾಮಣ್ಣ ಶ್ರೇಷ್ಟಿ ಪಾರ್ಕ್ ಬಳಿ ಮನೆ ಮುಂದೆ ರಂಗೋಲಿ ಹಾಕಿ ಚಿತ್ತಾಕರ್ಷಕ ಬಣ್ಣ ಹಾಕಲಾಗಿತ್ತು. ಮಾರ್ಗದುದ್ದಕ್ಕೂ ಅಪಾರ ಸಂಖ್ಯೆಯ ಜನ ವೀಕ್ಷಿಸಲು ಕಾಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಬಜರಂಗದಳ, ವಿಶ್ವ ಹಿಂದು ಪರಿಷತ್, ಹಿಂದು ಮಹಾಸಭಾ ಸೇರಿದಂತೆ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು, ಅಪಾರ ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಭಗವಾಧ್ವಜ ಹಿಡಿದು ಯುವಕರು ಜೈ ಶ್ರೀ ರಾಮ ಘೋಷಣೆ ಕೂಗುತ್ತಿದ್ದರು. ನಗರ ಮಾತ್ರವಲ್ಲದೆ ಹೊರ ಜಿಲ್ಲೆ ಮತ್ತು ಗ್ರಾಮಾಂತರ ಪ್ರದೇಶಗಳಿಂದಲೂ ಸಹಸ್ರಾರು ಜನರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.
ಎಸ್‌ಪಿಎಂ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿಬಜಾರ್, ಶಿವಪ್ಪನಾಯಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಬಿ.ಹೆಚ್.ರಸ್ತೆ, ಅಶೋಕವೃತ್ತ, ನೆಹರೂ ರಸ್ತೆ, ಗೋಪಿವೃತ್ತ, ದುರ್ಗಿಗುಡಿ, ಮಹಾವೀರ ವೃತ್ತ, ಬಾಲರಾಜ್ ಅರಸು ರಸ್ತೆ ಸೇರಿದಂತೆ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಕೇಸರಿ ಬಾವುಟ, ಬ್ಯಾನರ್, ಬಂಟಿಂಗ್ಸ್ ರಾರಾಜಿಸುತ್ತಿವೆ. ಪ್ರಮುಖ ವೃತ್ತಗಳನ್ನು ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿದೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ತಳಿರು ತೋರಣಗಳು ಕೇಸರಿ ಬಾವುಟಗಳನ್ನು ಕಟ್ಟಲಾಗಿದೆ.


ಅಮೀರ್ ಅಹಮ್ಮದ್ ವೃತ್ತದಲ್ಲಿ ವೀರ ಸಾವರ್ಕರ್ ಬೃಹತ್ ಫ್ಲೆಕ್ಸ್ ಹಾಕಲಾಗಿತ್ತು. ಇಡೀ ವೃತ್ತ ಕೇಸರಿ ಮಯವಾಗಿದೆ. ನೆಹರೂ ರಸ್ತೆಯಲ್ಲಿ ಭಗತ್‌ಸಿಂಗ್, ಸ್ವಾಮಿ ವಿವೇಕಾನಂದ, ಅಂಬೇಡ್ಕರ್, ರಾಣಾ ಪ್ರತಾಪ್ ಸಿಂಹ, ಸರ್ದಾರ್ ವಲ್ಲಭ ಬಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಪುರಂದರ ದಾಸರು, ಝಾನ್ಸಿರಾಣಿ ಲಕ್ಷ್ಮೀ ಬಾಯಿ ಸೇರಿದಂತೆ ಅನೇಕ ಮಹನೀಯರ ಕಟೌಟ್‌ಗಳನ್ನು ಹಾಕಲಾಗಿದೆ.
ಶಿವಪ್ಪನಾಯಕ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಆಂಜನೆಯ ಕಟೌಟ್ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಸ್ಥಾಪಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಇದು ಒಂದು ಕಡೆಯಾದರೆ ಮತ್ತೊಂದು ಕಡೆ ಗಣಪತಿ ಸಾಗುವ ರಸ್ತೆಯಲ್ಲಿ ಯುವಕರ ನೃತ್ಯ ಗಮನಸೆಳೆಯುವಂತಿತ್ತು. ಯುವತಿಯರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡು ಡ್ಯಾನ್ಸ್ ಮಾಡಿದ್ದು ವಿಶೇಷವಾಗಿತ್ತು.

ಪುನಿತ್ ರಾಜ್‌ಕುಮಾರ್ ಭಾವಚಿತ್ರ

ಮೆರವಣಿಗೆಯ ಮಾರ್ಗ ಉದ್ದಕ್ಕೂ ಭಕ್ತರು, ಯುವಕರು, ಸಾರ್ವಜನಿಕರಿಗೆ ಅಲ್ಲಲ್ಲಿ ವಿವಿಧ ಸಂಘ ಸಂಸ್ಥೆಗಳಿಂದ ಲಘು ಉಪಹಾರ, ಪಾನೀಯ, ಸಿಹಿ ವಿತರಿಸಿದರು. ಗಣಪತಿಯ ರಾಜಬೀದಿ ಉತ್ಸವಕ್ಕೆ ಸ್ವಾಗತ ಕೋರುವ ಫೆಕ್ಸ್‌ಗಳನ್ನು ಮಾರ್ಗದುದ್ದಕ್ಕೂ ಪುನಿತ್ ರಾಜ್‌ಕುಮಾರ್ ಭಾವಚಿತ್ರ ಹಾಕಲಾಗಿದೆ. ಮಾರ್ಗದುದ್ದಕ್ಕೂ ವಿವಿಧ ಸಂಘಟನೆಗಳವರು ಗಣಪತಿಗೆ ಬೃಹತ್ ಹಾರಗಳನ್ನು ಸಮರ್ಪಿಸಿದರು.

ಪೊಲೀಸ್ ಇಲಾಖೆ ನಗರದ ಎಲ್ಲೆಡೆ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಸಿಸಿ ಟಿವಿ, ದಿವ್ಯದೃಷ್ಠಿ ಕಣ್ಗಾವಲು ಹಾಗೂ ಡ್ರೋನ್ ಕ್ಯಾಮೆರಾಗಳಲ್ಲಿ ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸಲಾಗಿದೆ. ಎಎ ಸರ್ಕಲ್‌ನಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಆರ್‌ಎಎಫ್ ತುಕಡಿಗಳನ್ನು ನಿಯೋಜಿಸಲಾಗಿದೆ. ನಗರದಲ್ಲಿ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.

ಸುಮಾರು ಮೂರು ದಶಕಗಳಿಂದ ಹಿಂದೂಮಹಾಸಭಾ ಗಣಪತಿಯ ರಾಜಬೀದಿ ಉತ್ಸವದಲ್ಲಿ ಸಾರಥಿಯಾಗಿರುವ ಧನಂಜಯ ಅವರೇ ಈ ಬಾರಿಯೂ ಟ್ರ್ಯಾಕ್ಟರ್ ಚಾಲನೆ ಮಾಡಿದರು.

Ad Widget

Related posts

ಶಿವಮೊಗ್ಗ ಸಿಮ್ಸ್ ನಲ್ಲೂ ಬ್ಲಾಕ್ ಫಂಗಸ್ ಗೆ ಚಿಕಿತ್ಸೆ

Malenadu Mirror Desk

ಯಾವತ್ತೂ ನೊಂದವರ ಪರ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಅಭಿಪ್ರಾಯ

Malenadu Mirror Desk

ಶಿವಮೊಗ್ಗದಲ್ಲಿ ಯುವಕನ ಬರ್ಬರ ಹತ್ಯೆ , ಮೆಗ್ಗಾನ್ ಆಸ್ಪತ್ರೆ ಬಳಿ ಜಮಾಯಿಸಿದ ಜನ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.