ಶಿವಮೊಗ್ಗ, ಆ.೧೩: ಪಕ್ಷದ ನಾಯಕತ್ವ ಒಪ್ಪಿಗೆ ನೀಡಿದರೆ ಹಾವೇರಿ ಲೋಕ ಸಭೆ ಕ್ಷೇತ್ರದಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಕೆ.ಇ.ಕಾಂತೇಶ್ ಸ್ಪರ್ಧಿಸಲಿದ್ದಾನೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವಪ್ಪ ಹೇಳಿದ್ದಾರೆ.
ಭಾನುವಾರು ಹಾವೇರಿ ಜಿಲ್ಲೆ ಸಿಂಧಗಿಯ ಶಾಂತವೀರ ಪಟ್ಟಾಧ್ಯಕ್ಷರ ಗದ್ದುಗೆಯಲ್ಲಿ ಶತರುದ್ರಾಭಿಷೇಕ ಮತ್ತು ರುದ್ರಹವನದಲ್ಲಿ ಕುಟುಂಬ ಸಮೇತ ಭಾಗಿವಹಿಸಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಲೋಕಕಲ್ಯಾಣಾರ್ಥವಾಗಿ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾವೇರಿ ಜಿಲ್ಲೆಯಲ್ಲಿ ನಮ್ಮ ಕುಟುಂಬಕ್ಕೆ ನಿಕಟ ಸಂಪರ್ಕ ಇದೆ. ಕಾಂತೇಶ್ ಇಲ್ಲಿ ಶಾಲೆ ಮತ್ತು ಕಾಲೇಜು ನಡೆಸುತ್ತಿದ್ದಾನೆ. ಇಲ್ಲಿನ ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಹಾವೇರಿ ಲೋಕ ಸಭೆ ಕ್ಷೇತ್ರ ವ್ಯಾಪ್ತಿಯ ಅನೇಕ ಮಠಾಧೀಶರೂ ಕೂಡಾ ನಮ್ಮ ಕುಟುಂಬದ ಮೇಲೆ ಆಶೀರ್ವಾದ ಇರುವುದಾಗಿ ಹೇಳಿದ್ದಾರೆ.
ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರು ಸಹಮತ ನೀಡಿದರೆ, ಕಾಂತೇಶ್ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾನೆ. ಸ್ಥಳೀಯ ಬಿಜೆಪಿ ಮುಖಂಡರು ವಿವಿಧ ಸಮಾಜಗಳ ಮುಖಂಡರು ಲೋಕಸಭೆಗೆ ಸ್ಪರ್ಧೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ ಪಕ್ಷದ ನಾಯಕತ್ವ ಹೇಳಿದಂತೆ ನಾವು ನಡೆಯುತ್ತೇವೆ ಎಂದು ಈಶ್ವರಪ್ಪ ಹೇಳಿದರು.
ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡುವ ಇಚ್ಚೆ ಹೊಂದಿದ್ದ ಈಶ್ವರಪ್ಪ ಅವರಿಗೆ ಕೊನೇ ಕ್ಷಣದಲ್ಲಿ ಟಿಕೆಟ್ ನಿರಾಕರಿಸಿದ್ದಲ್ಲದೆ, ಚುನಾವಣೆ ಕಣದಿಂದ ನಿವೃತ್ತಿ ಘೋಷಣೆ ಮಾಡಲು ಸೂಚಿಸಲಾಗಿತ್ತು. ತiಗಲ್ಲದಿದ್ದರೆ, ಮಗನಿಗಾದರೂ ಟಿಕೆಟ್ ಸಿಗಬಹುದೆಂದು ಈಶ್ವರಪ್ಪ ಮಾಡಿದ್ದ ಪ್ರಯತ್ನ ಕೈಗೂಡಿರಲಿಲ್ಲ. ಈಗ ತಮ್ಮ ಪುತ್ರ ಕಾಂತೇಶ್‌ಗೆ ಲೋಕಸಭೆ ಚುನಾವಣೆಯಲ್ಲಿ ಕಣಕ್ಕಿಳಿಸುವ ಮೂಲಕ ರಾಜಕೀಯ ನೆಲೆ ಮಾಡಿಕೊಳ್ಳಲು ಈಶ್ವರಪ್ಪ ಮುಂದಾಗಿದ್ದಾರೆ. ಪ್ರತಿಮಠಾಧೀಶರನ್ನೂ ಭೇಟಿ ಮಾಡುತ್ತಿರುವ ಅವರು ತಮ್ಮ ಪುತ್ರನ ಪರ ಆಶೀರ್ವಾದ ಬೇಡುತ್ತಿದ್ದಾರೆ.