Malenadu Mitra
ರಾಜ್ಯಶಿವಮೊಗ್ಗ

ಸಾಹಿತ್ಯ ಸಂಸ್ಕೃತಿಯ ಆತಂಕಗಳಿಗೆ ಪರಿಹಾರ ಬೇಕಿದೆ ,ಶಿವಮೊಗ್ಗ ಸಾಹಿತ್ಯ ಸಮ್ಮೇಳನದಲ್ಲಿ ಡಾ.ಪ್ರಶಾಂತ್ ನಾಯಕ್ ಅಭಿಮತ

ಶಿವಮೊಗ್ಗ: ಇತ್ತೀಚಿನ ವರ್ಷಗಳಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಮತ್ತು ವಿಚಾರಗೋಷ್ಠಿಗಳಲ್ಲಿ ಸಾಹಿತ್ಯ ಮತ್ತು ಸಂಸ್ಖೃತಿಯ ಆತಂಕಗಳ ಬಗ್ಗೆಯೇ ಚರ್ಚೆಯಾಗುತ್ತಿದೆ. ಇದು ಇಂದಿನ ಸಮಾಜ ಸಂವೇದನಾಶೀಲತೆ ಕಳೆದುಕೊಳ್ಳುತ್ತಿದೆ ಎಂಬುದನ್ನು ತೋರಿಸುತ್ತಿದೆ ಎಂದು ಕುವೆಂಪು ವಿವಿ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಪ್ರಶಾಂತ ನಾಯಕ್ ಹೇಳಿದರು.

ಶಿವಮೊಗ್ಗ ಸಾಹಿತ್ಯ ಗ್ರಾಮದಲ್ಲಿ ಶುಕ್ರವಾರ ಮುಕ್ತಾಯಗೊಂಡ ಶಿವಮೊಗ್ಗ ಜಿಲ್ಲಾ ೧೮ ನೇ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಸಾಹಿತ್ಯ ಮತ್ತು ಸಂಸ್ಕೃತಿಗೆ ಎದುರಾಗಿರುವ ಆತಂಕಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಚಿಂತಿಸುವ ಮತ್ತು ಕಾರ್ಯೋನ್ಮುಖವಾಗುವ ಅಗತ್ಯವಿದೆ. ಮೊಬೈಲ್ ಮೇನಿಯಾಕ್ಕೆ ಬಿದ್ದ ಯುವ ಸಮೂಹ ಸಾಹಿತ್ಯದ ಓದು ಮತ್ತು ಸಮ್ಮೇಳನಗಳಿಂದ ವಿಮುಖರಾಗಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ನಮ್ಮ ಬಾಲ್ಯದಲ್ಲಿ ತಂದೆ-ತಾಯಿ, ಮಕ್ಕಳ ಅಭ್ಯಾಸದ ಬಗ್ಗೆ ನಿಗಾ ಇಡುತಿದ್ದರು. ಆದರೆ ಇಂದು ಮಕ್ಕಳ ಓದಿನಿಂದ ತಮ್ಮ ಧಾರಾವಾಹಿ ವೀಕ್ಷಣೆಗೆ ತೊಂದರೆಯಾಗದಿರಲಿ ಎಂಬ ಮನಸ್ಥಿತಿಗೆ ನಮ್ಮ ಮಧ್ಯಮ ವರ್ಗದ ಕುಟುಂಬದ ಮಹಿಳೆಯರು ಬಂದಿದ್ದಾರೆ. ದೂರದರ್ಶನದ ಧಾರಾವಾಹಿ ಮತ್ತು ರಿಯಲಿಟಿ ಶೊಗಳಿಂದಾಗಿ ಸಾಹಿತ್ಯದ ಓದು ಕಡಿಮೆಯಾಗಿದೆ. ಹಿಂದೆ ಮಧ್ಯಮ ವರ್ಗದ ಕುಟುಂಬದ ಮಹಿಳೆಯರು ಕಾದಂಬರಿ ಓದುತಿದ್ದರು. ಆದರೆ ಈಗ ಯಂತ್ರನಾಗರಿಕತೆ ನಮ್ಮನ್ನು ಹೃದಯಹೀನರನ್ನಾಗಿಸಿದೆ. ಯಂತ್ರಗಳನ್ನು ನಾವು ನಿಯಂತ್ರಿಸಬೇಕೆ ವಿನಾ ಅವುಗಳು ನಮ್ಮನ್ನು ಇದೇ ರೀತಿ ನಿಯಂತ್ರಿಸುತ್ತಾ ಹೋದರೆ ಮುಂದೆ ಸಾಹಿತ್ಯ, ಸಂಸ್ಕೃತಿ ಎಲ್ಲಕ್ಕೂ ಅಪಾಯವಿದೆ ಎಂದು ಪ್ರಶಾಂತ್ ನಾಯಕ್ ಹೇಳಿದರು.
ಅಂಕಗಳ ಹಿಂದೆ:

ಮಕ್ಕಳನ್ನು ಅಂಕಗಳ ಹಿಂದೆ ಓಡಿಸುವ ಪೋಷಕರು, ಅವರನ್ನು ಮನುಷ್ಯರನ್ನಾಗಿ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ಎಲ್ಲರೂ ಡಾಕ್ಟರ್, ಎಂಜನಿಯರುಗಳಾಗಬೇಕೆಂಬ ಧಾವಂತವಿದೆ. ಕನ್ನಡ ಯಾರಿಗೂ ಬೇಕಾಗಿಲ್ಲ. ಸಾಹಿತ್ಯ ಸಮ್ಮೇಳನದಲ್ಲಿ ಭಾಷೆಯ ಬಗ್ಗೆ ನಿಷ್ಕರ್ಶೆಗಳು ನಡೆಯುತ್ತವೆ. ಆದರೆ ನಮ್ಮ ಮಕ್ಕಳಿಗೆ ಕನ್ನಡವನ್ನು ಕಲಿಸುವಲ್ಲಿ ಶಿಕ್ಷಕರು ವಿಫಲರಾಗಿದ್ದೇವೆ ಎಂಬ ಭಾವನೆ ಬರುತ್ತಿದೆ. ಕನ್ನಡ ಸಾಹಿತ್ಯ ಪರಂಪರೆ ಸಹೃದಯತೆಯನ್ನು ಕಾಪಾಡಿಕೊಂಡು ಬಂದಿತ್ತು. ಹಿಂದಿನ ಪುರಾಣ ಕತೆಗಳಲ್ಲಿ ಎಲ್ಲಿಯೂ ಕಳನಾಯಕರ ಸೃಷ್ಟಿಯಾಗಿರಲಿಲ್ಲ ಅದಕ್ಕೆ ಬದಲಾಗಿ ಪ್ರತಿನಾಯಕರನ್ನು ಸೃಷ್ಟಿಸಲಾಗಿತ್ತು. ವಾಲ್ಮೀಕಿಯ ರಾಮಾಯಣದಲ್ಲಿ ರಾವಣನದ್ದು ಪ್ರತಿನಾಯಕನ ಪಾತ್ರವಾಗಿತ್ತು. ಮಹಾಭಾರತದಲ್ಲಿ ಕರ್ಣ, ದುರ್ಯೋದನರದ್ದು ಪ್ರತಿನಾಯಕರ ಪಾತ್ರವೇ ಆಗಿತ್ತು. ಅಂದು ಇಂತಹ ಸಾಹಿತ್ಯ ರಚನೆಯಾಗಿತ್ತು. ಅದು ಸಮಾಜದಲ್ಲಿ ಒಂದು ಮಾನವೀಯತೆಯನ್ನು, ಸಹೃದಯತೆಯನ್ನು ಬಿತ್ತಿತ್ತು. ಇಂದು ಸಿನೆಮಾ, ಧಾರಾವಾಹಗಳ ಪಾತ್ರಸೃಷ್ಠಿಯನ್ನು ಗ್ರಹಿಸಿದ ಪ್ರತಿ ಮನೆಯಲ್ಲಿಯೂ ವಿಲನ್‌ಗಳಿದ್ದಾರೆ ಎಂಬುದು ಸಾಹಿತ್ಯದ ಆತಂಕ ಎಂದು ಪ್ರಶಾಂತ್ ನಾಯಕ್ ಹೇಳಿದರು.

ಸಮ್ಮೇಳನಾಧ್ಯಕ್ಷ ಡಾ.ಪದ್ಮಪ್ರಸಾದ್ ಮಾತನಾಡಿ, ಶಿವಮೊಗ್ಗದ ಈ ಸಾಹಿತ್ಯ ಸಮ್ಮೇಳನ ಸಾರ್ಥಕವಾಗಿದೆ. ಅಧಿಕಾರಸ್ಥ ರಾಜಕಾರಣಿಗಳು ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಬಾರದಿರುವುದು ನೋವಾಗಿದೆ. ಆದರೆ ಇಲ್ಲಿ ವಿಭಿನ್ನ ವಿಚಾರಗಳ ಚರ್ಚೆಗೆ ಅವಕಾಶವಾಯಿತು. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆಯಾಯಿತು. ಮುಳುಗಿದ ಮಲೆನಾಡು ಗೋಷ್ಠಿ ಇಲ್ಲಿನ ಸಮಸ್ಯೆಯನ್ನು ತೆರೆದಿಟ್ಟಿದೆ. ಹೋರಾಟದ ನಾಡು ಶಿವಮೊಗ್ಗದಲ್ಲಿ ಚಳವಳಿಗಳು ಮತ್ತೆ ಬಲಗೊಳ್ಳಬೇಕೆನಿಸುತ್ತದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಡಾ.ಕೆ.ಜಿ.ವೆಂಕಟೇಶ್, ಲವ ,ಎಲ್ಲಾ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರುಗಳು, ಸಾಹಿತಿಗಳು, ಚಿಂತಕರು ಉಪಸ್ಥಿತರಿದ್ದರು. ದಾನಿಗಳನ್ನು ಸನ್ಮಾನಿಸಲಾಯಿತು. ನೃಪತುಂಗ ಸಮ್ಮೇಳನ ನಿರ್ಣಯಗಳನ್ನು ಸಭೆಗೆ ಮಂಡಿಸಿದರು. ಕೆ.ಎಸ್.ಹುಚ್ಚರಾಯಪ್ಪ ಸ್ವಾಗತಿಸಿದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ನಾಮಫಲಕಗಳಿಗೆ ಬಣ್ಣ ಬಳಿದರೆ ಸಾಲದು, ಮನಸುಗಳಿಗೆ ಬಣ್ಣ ಬಳಿಯಬೇಕಿದೆ. ಮಾಹಿತಿ ತಂತ್ರಜ್ಞಾನ ಬರೀ ಮಾಹಿತಿಯನ್ನು ಕೊಡುತ್ತದೆಯೇ ವಿನಾ, ಜ್ಞಾನವನ್ನು ಕೊಡುವುದಿಲ್ಲ.ಪುಸ್ತಕ ಓದಿನಿಂದ ಮಾತ್ರ ಜ್ಞಾನ ಸಿಗುತ್ತದೆ ಮಕ್ಕಳನ್ನು ಈ ದಿಸೆಯಲ್ಲಿ ತಯಾರುಮಾಡಬೇಕಿದೆ.


ಡಾ. ಪ್ರಶಾಂತ್ ನಾಯಕ್, ಪ್ರಾಧ್ಯಾಪಕರು, ಕುವೆಂಪು ವಿವಿ ಕನ್ನಡ ವಿಭಾಗ.

Ad Widget

Related posts

ಶರಾವತಿ ಸಂತ್ರಸ್ತರ ಪುನರ್‌ವಸತಿಗೆ ಮದನ್‌ಗೋಪಾಲ್ ವರದಿ ಜಾರಿಯಾಗಲಿ : ಮಲೆನಾಡು ರೈತ ಹೋರಾಟ ಸಮಿತಿ ಆಗ್ರಹ

Malenadu Mirror Desk

ಸಕ್ರೆಬೈಲಿನಲ್ಲಿ ವಿಶ್ವ ಆನೆಗಳ ದಿನಾಚರಣೆ, ಆನೆಗಳಿಗೆ ಸಿಂಗಾರ, ಅರಣ್ಯ ಸಂರಕ್ಷಣೆ ಜಾಥಾ

Malenadu Mirror Desk

ಭದ್ರಾವತಿ 24 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನ ಬಂದಿದ್ದು ಹೇಗೆ ಗೊತ್ತಾ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.