Malenadu Mitra
ರಾಜ್ಯ ಶಿವಮೊಗ್ಗ ಸಾಗರ ಸೊರಬ

ಶಿವಮೊಗ್ಗ ಲೋಕಸಭೆ ಕ್ಷೇತ್ರ ಅಡವಿಯಂತೆ ನಿಗೂಢ…ಗ್ಯಾರಂಟಿ, ಅಭಿವೃದ್ಧಿ, ಹಿಂದುತ್ವ, ಅನುಕಂಪದ ಅಲೆ..

ಲೋಕ ಸಮರದಲ್ಲಿ ದೇಶದ ಗಮನ ಸೆಳೆದ ಕ್ಷೇತ್ರ ಶಿವಮೊಗ್ಗ. ಮಲೆನಾಡಾದರೂ ಸುಡುವ ಬಿಸಿಲಲ್ಲಿ ಪ್ರಚಾರದ ಭರಾಟೆಯೂ ಜೋರಾಗಿಯೇ ನಡೆದಿದೆ. ಕಳೆದ ನಾಲ್ಕು ಚುನಾವಣೆಯಲ್ಲಿ ಮುಖಾಮುಖಿಯಾಗಿದ್ದ ಮಾಜಿ ಸಿಎಂ ಬಂಗಾರಪ್ಪ ಮತ್ತು ಯಡಿಯೂರಪ್ಪ ನಡುವಿನ ರಾಜಕೀಯ ಕದನ ಈಗಲೂ ಮುಂದುವರಿದಿದೆ. ಹಿಂದಿನ ಎರಡು ಚುನಾವಣೆಯಲ್ಲಿ ಎರಡು ಕುಟುಂಬಗಳ ನಡುವೆ ನೇರ ಹಣಾಹಣಿ ಇದ್ದರೆ, ಈ ಬಾರಿ ರಣಾಂಗಣಕ್ಕೆ ಕೊಂಚ ಟ್ವಿಸ್ಟ್‌ ಸಿಕ್ಕಿದ್ದು, ಹಿಂದೂ ಹುಲಿ ಕೆ.ಎಸ್‌.ಈಶ್ವರಪ್ಪ ಪಕ್ಷೇತರವಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿಯ ನಿಷ್ಟಾವಂತ ನಾಯಕರಾಗಿದ್ದ ಈಶ್ವರಪ್ಪ ಅವರು ಮೋದಿ ಜಪ ಮಾಡುತ್ತಲೇ ಬಿಜೆಪಿ ಅಭ್ಯರ್ಥಿ ವಿರುದ್ಧ ಬಂಡಾಯ ಎದ್ದಿರುವ ಕಾರಣಕ್ಕೆ ಶಿವಮೊಗ್ಗ ಕ್ಷೇತ್ರ ರಾಷ್ಟ್ರಮಟ್ಟದಲ್ಲಿಯೂ ಗಮನ ಸೆಳೆದಿದೆ. ಈ ಮೂವರಲ್ಲದೆ ಇನ್ನೂ 23 ಅಭ್ಯರ್ಥಿಗಳು ಅಖಾಡದಲ್ಲಿದ್ದಾರೆ.
ಮಲೆನಾಡು, ಅರೆಮಲೆನಾಡು ಹಾಗೂ ಕರಾವಳಿ ಭಾಗವನ್ನೂ ಒಳಗೊಂಡ ಈ ಕ್ಷೇತ್ರದಲ್ಲಿ ಈ ಬಾರಿ ಅಭಿವೃದ್ಧಿ, ಹಿಂದುತ್ವ, ರಾಷ್ಟ್ರೀಯತೆ ಮತ್ತು ಅನುಕಂಪಗಳೂ ಕೆಲಸ ಮಾಡುವ ಸಾಧ್ಯತೆ ಇದೆ. ಒಟ್ಟು 8 ವಿಧಾನಸಭೆ ಕ್ಷೇತ್ರಗಳಲ್ಲಿ ನಾಲ್ಕು ಬಿಜೆಪಿ,ಮೂರು ಕಾಂಗ್ರೆಸ್‌ ಹಾಗೂ ಒಬ್ಬರು ಜೆಡಿಎಸ್‌ ಶಾಸಕರಿದ್ದಾರೆ. ಸತತ ಮೂರು ಬಾರಿ ಸಂಸದರಾಗಿರುವ ಬಿ.ವೈ.ರಾಘವೇಂದ್ರ ಅವರು ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕಾಂಗ್ರೆಸ್‌ನಿಂದ ಗೀತಾ ಶಿವರಾಜ್‌ ಕುಮಾರ್‌ ಅಭ್ಯರ್ಥಿಯಾಗಿದ್ದಾರೆ.


ಕ್ಷೇತ್ರದಲ್ಲಿ ಈಡಿಗರು, ಲಿಂಗಾಯತರು, ಮುಸ್ಲಿಂ, ಬ್ರಾಹ್ಮಣರು ಹಾಗೂ ಪರಿಶಿಷ್ಟ ಜಾತಿ ಮತ್ತು ವರ್ಗದ ಮತದಾರರು ಅತಿ ಹೆಚ್ಚು ಸಂಖ್ಯೆಯಲ್ಲಿದ್ದು, ತಮಿಳರು, ಒಕ್ಕಲಿಗರು,ಕುರುಬರು. ಅತೀ ಹಿಂದುಳಿದ ವರ್ಗದ ಮತದಾರರು ನಿರ್ಣಾಯಕ ಹಂತದಲ್ಲಿದ್ದಾರೆ. ಅಭಿವೃದ್ಧಿ ಮತ್ತು ರಾಷ್ಟ್ರೀಯತೆಯ ಮೇಲೆ ಚುನಾವಣೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆಯಾದರೂ, ಈ ಚುನಾವಣೆಯಲ್ಲಿ ಜಾತಿಯ ಪ್ರಭಾವ ಖಂಡಿತಾ ಇರಲಿದೆ. ಯಾವುದೇ ಒಂದು ಜಾತಿಯ ಮತಗಳು ಒಂದೇ ಕಡೆ ಕ್ರೋಢೀಕರಣ ಆಗುತ್ತವೆ ಎಂಬ ವಾತಾವರಣ ಇಲ್ಲವಾದರೂ, ಪ್ರಬಲ ಜಾತಿಗಳ ಒಲವು-ನಿಲುವೇ ಫಲಿತಾಂಶದ ತಕ್ಕಡಿಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹೇಳಬಹುದು.


ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಅವರು ಲಿಂಗಾಯತ ಸಮುದಾಯದವರಾಗಿದ್ದು, ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಪುತ್ರಿ ಗೀತಾ ಅವರು ಈಡಿಗ, ಪ್ರಬಲ ಸ್ಪರ್ಧಿ ಈಶ್ವರಪ್ಪ ಕುರುಬ ಸಮಾಜವನ್ನು ಪ್ರತಿನಿಧಿಸುತ್ತಿದ್ದಾರೆ. ರಾಘವೇಂದ್ರ ಅವರು ಅಭಿವೃದ್ಧಿ ಮತ್ತು ರಾಷ್ಟ್ರೀಯತೆಯ ಮೇಲೆ ಚುನಾವಣೆ ನಡೆಯಲಿದೆ ಎಂದು ಬಲವಾಗಿ ಪ್ರತಿಪಾದಿಸುತಿದ್ದಾರೆ. ರಾಜ್ಯದ ಆಡಳಿತ ಪಕ್ಷ ಕಾಂಗ್ರೆಸ್‌ ನಾಯಕರು ಗ್ಯಾರಂಟಿ ಯೋಜನೆಗಳು, ಕೇಂದ್ರದ ಆಡಳಿತ ವಿರೋಧಿ ಅಲೆ ಮತ್ತು ಬಂಗಾರಪ್ಪ ಅವರ ಕೊನೆಯ ಸೋಲಿಗೆ ನ್ಯಾಯಕೊಡುವ ಚುನಾವಣೆ ಇದೆಂದು ಹೇಳುತ್ತಿದ್ದಾರೆ. ಮೋದಿ ಅಲೆ, ಹಿಂದುತ್ವ ಮತ್ತು ರಾಜ್ಯ ಬಿಜೆಪಿಯನ್ನು ಒಂದು ಕುಟುಂಬದ ಹಿಡಿತದಿಂದ ಪಾರುಮಾಡುವ ಅಜೆಂಡಾ ಮುಂದಿಟ್ಟುಕೊಂಡು ಈಶ್ವರಪ್ಪ ಅವರು ಮತದಾರರ ಮುಂದೆ ನಿಂತಿದ್ದಾರೆ.

ಬಿಜೆಪಿಗಿರುವ ಲಾಭ-ನಷ್ಟ
ಸಂಸದ ರಾಘವೇಂದ್ರ ಅವರು ಕ್ಷೇತ್ರಕ್ಕೆ ಹಲವು ಯೋಜನೆಗಳನ್ನು ತಂದಿದ್ದಾರೆ. ಹೆದ್ದಾರಿ, ಸಿಗಂದೂರು ಸೇತುವೆ, ರೈಲ್ವೆ ಯೋಜನೆಗಳು,ವಿಮಾನ ನಿಲ್ದಾಣ ಸೇರಿದಂತೆ ಹಲವು ಕೆಲಸಗಳಲ್ಲಿ ಅವರ ಪಾತ್ರ ಇದೆ. ಸದಾ ಜನರಿಗೆ ಸಿಗುವ ವ್ಯಕ್ತಿ. ಈಗಾಗಲೇ ಮೂರು ಬಾರಿ ಸಂಸದರಾಗಿ ಅನುಭವ ಹೊಂದಿದ್ದಾರೆ. ಯಡಿಯೂರಪ್ಪ ಪುತ್ರರಾಗಿರುವ ಅವರಿಗೆ ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಕೈಹಿಡಿಯಲಿವೆ. ಪ್ರಧಾನ ಮಂತ್ರಿ ಮೋದಿ ಅವರ ಜನಪ್ರಿಯತೆ, ಕೇಂದ್ರ ಸರಕಾರದ ಕೆಲಸಗಳು ತಮ್ಮ ಪರ ಇವೆ. ಪ್ರಬಲ ಲಿಂಗಾಯತ ಸಮುದಾಯದ ಬೆಂಬಲ, ಬುಡಮಟ್ಟದಿಂದಲೂ ಗಟ್ಟಿಯಾಗಿರುವ ಪಕ್ಷದ ಸಂಘಟನೆ, ನಾಲ್ಕು ಮಂದಿ ಶಾಸಕರು, ಒಬ್ಬ ಶಾಸಕರೂ ಸೇರಿದಂತೆ ಜೆಡಿಎಸ್‌ ಬೆಂಬಲ ಗೆಲುವಿನ ದಡ ಸೇರಿಸುತ್ತದೆ ಎಂಬ ಅಚಲ ನಂಬಿಕೆ ಅವರದ್ದಾಗಿದೆ.

ಮೂರು ಅವಧಿಯಿಂದ ಬಿಜೆಪಿಯ ಸಂಸದರಾಗಿದ್ದರೂ, ಮಲೆನಾಡಿನ ರೈತರ ಭೂಮಿಯ ಹಕ್ಕುದಾರಿಕೆಗೆ ಸಂಬಂಧಿಸಿದ ಸಮಸ್ಯೆಗಳು ಇತ್ಯರ್ಥವಾಗಿಲ್ಲ. ಡಬಲ್‌ ಎಂಜಿನ್‌ ಸರಕಾರ ಇದ್ದರೂ ಶರಾವತಿ ಸಂತ್ರಸ್ತರ ಸಮಸ್ಯೆಗೆ ತಾತ್ವಿಕ ಪರಿಹಾರ ಸಿಕ್ಕಿಲ್ಲ. ನಾಲ್ಕು ದಶಕಗಳ ಕಾಲ ಬೆನ್ನಿಗಿದ್ದಿ ಬಿಜೆಪಿ ಪೈರ್‌ ಬ್ರಾಂಡ್‌ ಈಶ್ವರಪ್ಪ ಬಂಡಾಯ ರಾಘವೇಂದ್ರ ಅವರಿಗೆ ಕೊಚ ತೊಡರುಗಾಲಾಗುವ ಸಾಧ್ಯತೆ ಇದೆ. ಹಿಂದುತ್ವ ಮತ್ತು ಮೋದಿಯವರನ್ನು ಹೃದಯದಲ್ಲಿಟ್ಟುಕೊಂಡಿದ್ದೇನೆ ಎಂದು ಈಶ್ವರಪ್ಪ ಅವರು ಯಡಿಯೂರಪ್ಪ ಕುಟುಂಬ ಟೀಕೆ ಮಾಡುತ್ತಿರುವುದು ಸಹಜವಾಗಿಯೇ ಬಿಜೆಪಿಗೆ ಮುಜುಗರವಾಗಿದ್ದು, ಈ ಅಂಶ ಮತಗಳಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು.


ಕಾಂಗ್ರೆಸ್‌ನ ಗೀತಾಗೆ ಸರಕಾರದ ಬಲ:
ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಅವರಿಗೆ ಆಡಳಿತ ಪಕ್ಷದ ಬಲವಿದೆ. ನುಡಿದಂತೆ ನಡೆದು ಜಾರಿ ಮಾಡಿರುವ ಗ್ಯಾರಂಟಿ ಯೋಜನೆಗಳು ಜೀವಾಳವಾಗಿವೆ.. ಸಚಿವ ಹಾಗೂ ಸೋದರ ಮಧುಬಂಗಾರಪ್ಪ ಅವರ ಬೆಂಬಲ. ಕ್ಷೇತ್ರದಲ್ಲಿರುವ ಬಂಗಾರಪ್ಪ ಅವರು ತಂದಿರುವ ಶಾಶ್ವತ ಯೋಜನೆಗಳು, ಅವರ ಪರವಾಗಿರುವ ಅನುಕಂಪದ ಅಲೆ, ಪ್ರಬಲ ಜಾತಿಯಾದ ಈಡಿಗರು, ಅಲ್ಪಸಂಖ್ಯಾತರ ಬೆಂಬಲ ಗೀತಾ ಬೆನ್ನಿಗಿದೆ. ಪತಿ ಡಾ.ಶಿವರಾಜ್‌ ಕುಮಾರ್‌ ಅವರ ಸ್ಟಾರ್‌ ವ್ಯಾಲ್ಯೂ ಮತ್ತು ಜನುಮದ ಜೋಡಿಗಾಗಿ ಶಿವಣ್ಣ ಕ್ಷೇತ್ರದ್ಯಾಂತ ಮತ ಜೋಳಿಗೆ ಹಿಡಿದು ಜನರನ್ನು ತಲುಪಿರುವುದು ಕಾಂಗ್ರೆಸ್‌ ಅಭ್ಯರ್ಥಿಗೆ ಪೂರಕ ಅಂಶವಾಗಿದೆ. ಶರಾವತಿ ಸಂತ್ರಸ್ತರು ಸೇರಿದಂತೆ ಭೂಮಿಗೆ ಸಂಬಂಧಿಸಿದ ಹೋರಾಟಗಳಲ್ಲಿ ಮಧುಬಂಗಾರಪ್ಪ ಅವರು ಮುಂಚೂಣಿಯಲ್ಲಿರುವುದು ಗೀತಾ ಅವರಿಗೆ ಸಹಕಾರಿಯಾಗಲಿದೆ. ಹಿಂದೆಂದಿಗಿಂತಲೂ ಈ ಬಾರಿ ಕಾಂಗ್ರೆಸ್‌ನಲ್ಲಿರುವ ಒಗ್ಗಟ್ಟು ಕೂಡಾ ಪಾಸಿಟಿವ್‌ ಆದ ಅಂಶವಾಗಿದೆ.


ಗೀತಾ ಚುನಾವಣೆಗೆ ಮಾತ್ರ ಬರುವವರು. ಇಲ್ಲಿನ ಹೋರಾಟಗಳಲ್ಲಿ ಜತೆಯಾಗಿಲ್ಲ. ಅವರಿಗೆ ಸ್ಥಳೀಯ ಸಮಸ್ಯೆಗಳ ಬಗ್ಗೆ ಆಳವಾದ ಅರಿವಿಲ್ಲ. ಸೋದರ ಕುಮಾರ ಬಂಗಾರಪ್ಪ ಸೇರಿದಂತೆ ಈಡಿಗರ ಪ್ರಮುಖ ನಾಯಕರಾದ ಹರತಾಳು ಹಾಲಪ್ಪ ಗೀತಾ ವಿರುದ್ಧವಾಗಿ ಪ್ರಚಾರ ಮಾಡುತ್ತಿರುವುದು ನಕಾರಾತ್ಮಕ ಅಂಶಗಳಾಗಿವೆ.

ಈಶ್ವರಪ್ಪರ ಬಲಾಬಲ:

ಮಾಜಿ ಡಿಸಿಎಂ ಈಶ್ವರಪ್ಪ ಸಾಮಾನ್ಯ ಜನರಿಗೂ ಸಿಗುವ ವ್ಯಕ್ತಿ. ಹಿಂದುತ್ವದ ಪ್ರತಿಪಾದಕರಾಗಿರುವ ಅವರೂ, ನರೇಂದ್ರ ಮೋದಿಯವರನ್ನ ಮತ್ತೆ ಪ್ರಧಾನಿ ಮಾಡುವ ಬಯಕೆ ಹೊಂದಿದ್ದಾರೆ. ಬಿಜೆಪಿಯಲ್ಲಿನ ಕುಟುಂಬ ರಾಜಕಾರಣವನ್ನು ವಿರೊಧಿಸುತ್ತಿರುವ ಕಾರಣ ಅಸದೃಶ ಮತದಾರರ ಬೆಂಬಲ ಇದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಬಿಜೆಪಿಯಿಂದ ಅನ್ಯಾಯವಾಗಿದೆ ಎಂಬ ಅನುಕಂಪದ ಜತೆಗೆ ಕುರುಬರು, ತಮಿಳು ಸಮುದಾಯ ಸೇರಿದಂತೆ ಚಿಕ್ಕಪುಟ್ಟ ಜಾತಿಗಳ ಬೆಂಬಲ ಈಶ್ವರಪ್ಪ ಬೆನ್ನಿಗಿದೆ. ಬಿಜೆಪಿ ಮತ್ತು ಪರಿವಾರದ ಜನರು ತಮ್ಮ ಪರವಾಗಿದ್ದಾರೆ ಎಂದು ಹೇಳುವ ಈಶ್ವರಪ್ಪರಿಗೆ ಅವರ ಫೈರ್‌ ಬ್ರಾಂಡ್‌ ಖ್ಯಾತಿಯ ಮಾತುಗಳು ಒಂದು ಬಲವಾದ ಶಕ್ತಿಯೇ ಆಗಿದೆ.
ಬಿಜೆಪಿ ಮತ್ತು ಪರಿವಾರ ಜತೆಗಿದ್ದರೆ ಮಾತ್ರ ಈಶ್ವರಪ್ಪ ನಾಯಕರು, ಯಡಿಯೂರಪ್ಪ ಕುಟುಂಬದ ವಿರೋಧಿ ನಡೆ ಅವರಿಗೆ ಹಿನ್ನಡೆಯಾಗಬಹುದೆಂಬ ಎಂಬ ಒಂದು ಅನುಮಾನವೂ ಇದೆ.


ಚುನಾವಣೆ ವಿಷಯಗಳು
ಶರಾವತಿ ಸಂತ್ರಸ್ತರ ಸಮಸ್ಯೆ, ಬಗರ್‌ ಹುಕುಂ ಹಕ್ಕುಪತ್ರ, ಕಸ್ತೂರಿ ರಂಗನ್‌ ವರದಿ ಜಾರಿ, ಮುಳುಗುತ್ತಿರುವ ವಿಐಎಸ್‌ಎಲ್‌, ಮುಳುಗಿರುವ ಎಂ.ಪಿಎಂ, ಅಡಕೆ ಬೆಳೆಯ ರೋಗ, ಮಂಗನಕಾಯಿಲೆ


ಸ್ಟಾರ್‌ ಕ್ಯಾಂಪೇನ್‌

ಲೋಕಸಭೆ ಚುನಾವಣೆಯಾದರೂ ವಿಧಾನ ಸಭೆ ಚುನಾವಣೆಯಂತೆಯೇ ಪ್ರಚಾರ ಕಾರ್ಯಗಳು ನಡೆದಿವೆ. ಕಾಂಗ್ರೆಸ್‌ನ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿಎಂ,ಡಿಸಿಎಂ ಜತೆಗೆ ಸಿನೆಮಾ ತಾರೆಯರೂ ಭರ್ಜರಿ ಪ್ರಚಾರ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಬಿ.ಎಲ್.ಸಂತೋಷ್‌, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಆರ್‌.ಅಶೋಕ್‌, ಅಣ್ಣಾಮಲೈ ಸೇರಿದಂತೆ ಹಲವು ಗಣ್ಯರು ಮತಶಿಕಾರಿ ಮಾಡಿ ಹೋಗಿದ್ದಾರೆ.

ಸೆನ್ಸಿಟಿವ್‌ ಪಾಯಿಂಟ್:‌
ಲೋಕಸಮರ ತುಂಬಾ ಸೂಕ್ಷ್ಮವಾಗಿದ್ದು, ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆ ಇದ್ದರೂ, ಗ್ಯಾರಂಟಿ ಫಲಾನುಭವಿಗಳು ಮತ್ತು ಹಿಂದುತ್ವದ ಮತಗಳು ಒಂದು ರೀತಿ ಅದೃಶ್ಯವಾಗಿಯೇ ಇವೆ. ರಾಷ್ಟ್ರೀಯ ಪಕ್ಷಗಳ ಓಟಕ್ಕೆ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಪಡೆಯುವ ಮತಗಳು ನಿರ್ಣಾಯಕವಂತೂ ಆಗಲಿವೆ. ಮಾಗಿದ ರಾಜಕಾರಣಿ ಈಶ್ವರಪ್ಪ ಅವರು ನಾನೇ ಗೆಲ್ಲುವೆ ಎಂದು ಹೇಳುತ್ತಿದ್ದಾರೆ. ಫಲಿತಾಂಶ ಏನೇ ಆದರೂ ಅವರ ಪಾತ್ರ ಮಹತ್ವದ್ದಾಗಿರುತ್ತದೆ ಎಂದಷ್ಟೇ ಹೇಳಬಹುದು. ಒಂದು ವೇಳೆ ರಾಷ್ಟ್ರೀಯತೆ, ಹಿಂದುತ್ವಗಳು ಪಕ್ಕಕ್ಕೆ ಸರಿದರೆ ಜಾತಿಯ ಮೇಲಾಟ ನಡೆದರೂ ಅಚ್ಚರಿಯಿಲ್ಲ.

Ad Widget

Related posts

ಲಿಂಗನಮಕ್ಕಿಗೆ 1807 ಅಡಿ, ಭದ್ರಾ ಡ್ಯಾಮ್ ತುಂಬಲು 3 ಅಡಿ ಬಾಕಿ

Malenadu Mirror Desk

34 ಕೊಳಚೆ ಪ್ರದೇಶಗಳ 5531 ಕುಟುಂಬಗಳಿಗೆ ಹಕ್ಕುಪತ್ರ

Malenadu Mirror Desk

ಶಿವಮೊಗ್ಗ ಎಂಬ ಚಳವಳಿಗಳ ಬೀಜದ ಹೊಲ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.