Malenadu Mitra
ಜಿಲ್ಲೆಶಿವಮೊಗ್ಗಹೊಸನಗರ

ವಿಧಿ ನೀನೆಷ್ಟು ಕ್ರೂರಿ, ಈ ಸಾವು ನ್ಯಾಯವೇ…?

ವಾಯುಪಡೆಯಲ್ಲಿದ್ದ ಹೊಸನಗರದ ಯೋಧ ಸಾವು:

ಶಿವಮೊಗ್ಗ: ವಿಧಿ ನೀನೆಷ್ಟು ಕ್ರೂರ ಎಂದು ಆ ಕುಟುಂಬ ಶಾಪ ಹಾಕುತ್ತಿದೆ. ಮನೆಯಲ್ಲಿ ಮೋಟಾರ್‌ ಸೈಕಲ್‌ ಕೂಡಾ ಇಲ್ಲದ ಹೊತ್ತಿನಲ್ಲಿ ಏರ್‌ ಫೋರ್ಸ್‌ಗೆ ಸೇರಿ ದಿಗಂತದೆತ್ತರಕ್ಕೆ ಹಾರುವ ಅವಕಾಶ ಗಿಟ್ಟಿಸಿದ್ದ ಆತ, ಅದೇ ಆಕಾಶದಿಂದ ನೆಲಕ್ಕೆ ಬಿದ್ದು ಜೀವ ತೆತ್ತಿದೆ. ಮಗನ ಸಾಧನೆಗೆ ಸಂಭ್ರಮ ಪಡುತಿದ್ದ ಕುಟುಂಬದ ಆಕ್ರಂದನ ಆಕಾಶಕ್ಕೆ ಮುಟ್ಟಿದೆ. ಮನೆಗೆ ಮೇಟಿಯಂತಿದ್ದ ಮಗನ ಕಳೇಬರಕ್ಕಾಗಿ ಇಡೀ ಊರೇ ಕಾಯುತ್ತಿದೆ.
ಇದು ಉತ್ತರ ಪ್ರದೇಶದ ಆಗ್ರಾದಲ್ಲಿ ನಿನ್ನೆ ಪ್ಯಾರಾಚೂಟ್‌ ತರಬೇತಿ ವೇಳೆ ಸಾವಿಗೀಡಾಗಿರುವ ಹೊಸನಗರ ತಾಲೂಕು ಸಂಕೂರಿನ ಗೋರಗದ್ದೆಯ ಜಿ.ಎಸ್.‌ ಮಂಜುನಾಥ್‌(36) ಅವರ ಕುಟುಂಬದ ಸನ್ನಿವೇಶ. ವಾಯುಪಡೆಯ ವಾರೆಂಟ್‌ ಅಧಿಕಾರಿಯಾಗಿದ್ದ ಮಂಜುನಾಥ್‌ ತರಬೇತಿ ವೇಳೆ ಇತರೆ 11 ಮಂದಿಯೊಂದಿಗೆ ವಿಮಾನದಿಂದ ಜಿಗಿದಿದ್ದರು. 11 ಮಂದಿ ಪ್ಯಾರಾಚೂಟ್‌ ಮೂಲಕ ಸುರಕ್ಷಿತವಾಗಿ ಲ್ಯಾಂಡ್‌ ಆಗಿದ್ದರು. ತರಬೇತುದಾರರಾಗಿದ್ದ ಮಂಜುನಾಥ್‌ ಅವರ ಪ್ಯಾರಾಚೂಟ್‌ ತೆರೆದುಕೊಳ್ಳದ ಕಾರಣ ಅವರು ಸುಮಾರು 1500 ಅಡಿ ಎತ್ತರದಿಂದ ನೆಲಕ್ಕೆ ಬಿದ್ದಿದ್ದರು. ನಾಪತ್ತೆಯಾಗಿದ್ದ ಮಂಜುನಾಥ್‌ ಅವರನ್ನು ಹುಡುಕಿದಾಗ ಜಮೀನೊಂದರಲ್ಲಿ ಗಾಯಗೊಂಡು ಬಿದ್ದಿದ್ದರು. ತಕ್ಷಣ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಿದ್ದರೂ ಅದು ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ನಮ್ಮ ಕ್ಷೇತ್ರದ ಯೋಧನ ಸಾವು ತುಂಬಾ ನೋವು ತಂದಿದೆ. ಅವರ ಕುಟುಂಬದ ಜತೆಗೆ ನಾವಿರುತ್ತೇವೆ. ವಾಯುಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್‌ ಯುವಜನರಿಗೆ ಸ್ಫೂರ್ತಿ.ಅವರ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳುವೆ.

-ಬೇಳೂರು ಗೋಪಾಲಕೃಷ್ಣ,

ಶಾಸಕರು, ಸಾಗರ 

ಯವಕರಿಗೆ ಸ್ಫೂರ್ತಿಯಾಗಿದ್ದ ಮಂಜುನಾಥ್:

ಸಂಕೂರು ಸಮೀಪದ ಮಸಗಲ್ಲಿ ಹೈಸ್ಕೂಲ್‌ನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಉನ್ನತ ದರ್ಜೆಯಲ್ಲಿ ಪಾಸಾಗಿದ್ದ ಮಂಜುನಾಥ್, ಹೊಸನಗರ ಕಾಲೇಜಿನಲ್ಲಿ ಪಿಯುಸಿ ಅಭ್ಯಾಸ ಮಾಡುತ್ತಿದ್ದಾಗಲೇ ವಾಯುಪಡೆಗೆ ನೇಮಕವಾಗಿದ್ದರು. ಸರ್ವಿಸ್‌ನಲ್ಲಿರುವಾಗಲೇ ಪದವಿಯನ್ನೂ ಪಡೆದುಕೊಂಡಿದ್ದ ಮಂಜುನಾಥ್‌ ವಾಯುಪಡೆಯಲ್ಲಿ ತರಬೇತುದಾರರಾಗಿ ಬಡ್ತಿ ಹೊಂದಿ ಉತ್ತಮ ಅಧಿಕಾರಿ ಎಂದು ಹೆಸರು ಗಳಿಸಿದ್ದರು. ಹೊಸನಗರ ತಾಲೂಕಿನಲ್ಲಿ ವಾಯುಪಡೆಗೆ ಸೇರಿದ್ದ ಕೆಲವೇ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದ ಮಂಜುನಾಥ್‌ ವಾಯುಪಡೆಗೆ ಸೇರಿದ ಬಳಿಕ ಸಂಕೂರು ಸುತ್ತಮುತ್ತ ಹದಿನೈದಕ್ಕೂ ಹೆಚ್ಚು ಯುವಕರು ಭಾರತೀಯ ಸೇನೆಯ ವಿವಿಧ ವಿಭಾಗಗಳಿಗೆ ಆಯ್ಕೆಯಾಗಿದ್ದರು. ಯುವಕರಿಗೆ ಸ್ಫೂರ್ತಿಯಾಗಿದ್ದ ಮಂಜುನಾಥ್‌ ಅವರ ಅಕಾಲಿಕ ಸಾವು ಇಡೀ ಊರಲ್ಲಿ ಶೋಕತಪ್ತ ವಾತಾವರಣವನ್ನು ಸೃಷ್ಟಿಸಿದೆ. ಮಂಜುನಾಥ್‌ ಅವರು ಪತ್ನಿ, ತಂದೆ ಸುರೇಶ್‌, ತಾಯಿ ನಾಗರತ್ನ, ಇಬ್ಬರೂ ಸೋದರಿಯರು ಹಾಗೂ ಒಬ್ಬ ಸೋದರನನ್ನು ಅಗಲಿದ್ದಾರೆ.

ಕಸಬಾ ಹೋಬಳಿಯಲ್ಲಿ ಹಲವು ಹುಡುಗರು ಸೇನೆಗೆ ಸೇರುವಲ್ಲಿ ಮಂಜುನಾಥ್‌ ಪ್ರೇರಕ ಶಕ್ತಿಯಾಗಿದ್ದರು. ಅವರ ನಿಧನ ಆಘಾತ ತಂದಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.

-ಕಲಗೋಡು ರತ್ನಾಕರ್‌, ಜಿ.ಪಂ.ಮಾಜಿ ಅಧ್ಯಕ್ಷ

ಅಸ್ಸಾಂ ಹುಡುಗಿಯ ವಿವಾಹ:

ವಾಯುಪಡೆಯ ಅಧಿಕಾರಿಯಾಗಿ ಅಸ್ಸಾಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುನಾಥ್‌, ಅಸ್ಸಾಂ ನಿವಾಸಿ ಕಲ್ಪಿತಾ ಅವರನ್ನು ವಿವಾಹವಾಗಿದ್ದರು. ಎನ್‌ಸಿಸಿ ಕೆಡೆಟ್‌ ಆಗಿದ್ದ ಕಲ್ಪಿತಾ ಅವರನ್ನು ಪ್ರೇಮಿಸಿ ಕುಟುಂಬದ ಎಲ್ಲರ ಒಪ್ಪಿಗೆಯಂತೆ ವಿವಾಹವಾಗಿದ್ದ ಮಂಜುನಾಥ್‌ಗೆ ಮಕ್ಕಳಿರಲಿಲ್ಲ. ಆರು ತಿಂಗಳ ಹಿಂದೆ ಸಂಕೂರಿನಲ್ಲಿ ಕಟ್ಟಿದ್ದ ನೂತನ ಮನೆಯ ಮನೆಹಬ್ಬಕ್ಕೆ ಮಂಜುನಾಥ್‌ ದಂಪತಿ ಬಂದು ಹೋಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಭಾರತೀಯ ವಾಯುಸೇನೆ ಅಧಿಕಾರಿಯಾಗಿ ಎಳೆಯ ವಯಸ್ಸಿನಲ್ಲಿಯೇ ಉತ್ತಮ ಹೆಸರು ಗಳಿಸಿದ್ದ ಮಂಜುನಾಥ್‌ ಅಕಾಲಿಕ ಮರಣ ಆಘಾತ ತಂದಿದೆ. ನಮ್ಮ ಭಾಗದ ಅನೇಕ ಹುಡುಗರು ಸೇನೆ ಸೇರಲು ಮಂಜುನಾಥ್‌ ಸ್ಪೂರ್ತಿಯಾಗಿದ್ದ. ದೇಶ ಸೇವೆಗಾಗಿ ಹೋಗಿದ್ದ ನಮ್ಮೂರಿನ ಯೋಧ ಇನ್ನಿಲ್ಲ ಎಂಬ ಸುದ್ದಿ ಇಡೀ ಊರಿಗೆ ನೋವು ತಂದಿದೆ. ಮಂಜುನಾಥ್‌ ಸಜ್ಜನಿಕೆಯ ಹುಡುಗನಾಗಿದ್ದ. ಅವನು ಇಂದಿನ ಯುವಪೀಳಿಗೆಗೆ ಒಂದು ಮಾದರಿ ವ್ಯಕ್ತಿಯಾಗಿದ್ದ.

-ಹಾಲಪ್ಪ ಸಂಕೂರು, ಉಪನ್ಯಾಸಕ, ಅಮೃತ ಕಾಲೇಜು.

ಮಂಜುನಾಥ್‌ ಮೃತದೇಹ ಭಾನುವಾರ ಮುಂಜಾನೆ ಹೊಸನಗರ ತಲುಪುವ ನಿರೀಕ್ಷೆಯಿದೆ. ಬೆಳಗ್ಗೆ 8 ಗಂಟೆಗೆ ಹೊಸನಗರ ಮಾವಿನ ಕೊಪ್ಪ ವೃತ್ತದಿಂದ ತಾಲೂಕು ಕಚೇರಿ ಮಾರ್ಗವಾಗಿ ಹುತಾತ್ಮ ಯೋಧನ ಅಂತಿಮ ಯಾತ್ರೆ ನಡೆಯಲಿದ್ದು, ಭಾನುವಾರವೇ ಸಂಕೂರು ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಹೊಸನಗರ ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

Ad Widget

Related posts

ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ: ವೈವಿಧ್ಯಮಯ ಕಾರ್ಯಕ್ರಮ

Malenadu Mirror Desk

ಒಕ್ಕಲಿಗರ ಯುವ ವೇದಿಕೆಯಿಂದ ಆಹಾರ ವಿತರಣೆ

Malenadu Mirror Desk

ಶಿವಮೊಗ್ಗ ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರ ಕಚೇರಿ ಆರಂಭ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.