ಶಿವಮೊಗ್ಗ: ಶರಾವತಿ ಹಿನ್ನೀರು ಸಂತ್ರಸ್ಥರು ಸಾಗುವಳಿ ಮಾಡಿಕೊಂಡಿರುವ ಕೆಪಿಸಿ ವ್ಯಾಪ್ತಿಗೊಳಪಟ್ಟ ಭೂಮಿಯನ್ನು ಮರಳಿ ಅರಣ್ಯ ಇಲಾಖೆಗೆ ಸೇರಿಸುವ ಪ್ರಶ್ನೆಯೇ ಇಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ಹೇಳಿದರು.
77 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಧ್ಯಮದವರ ಪ್ರಶ್ನೆಗೆ ಮೇಲಿನ ಉತ್ತರ ನೀಡಿದರು.
ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣವಾದಾಗಲೇ ಹಿನ್ನೀರು ಸಂತ್ರಸ್ಥರು ಅಳಿದುಳಿದ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿದ್ದಾರೆ. ಜಲಾಶಯ ನಿರ್ಮಾಣದಿಂದ ಕೆಪಿಸಿಗೆ ಅಗತ್ಯವಿದ್ದ ಭೂಮಿ ಬಳಕೆಯಾಗಿದೆ. ಯೋಜನೆಯಿಂದ ಸಂತ್ರಸ್ತರಾದ ರೈತರು ಆರುದಶಕಗಳಿಂದ ಅಲ್ಲಿಯೇ ವಾಸಿಸುತ್ತಿದ್ದಾರೆ. ಆ ಜನರಿಗೆ ಸರ್ಕಾರ ತೊಂದರೆ ಕೊಡುವುದಿಲ್ಲ. ಅವರ ಸಾಗುವಳಿ ಭೂಮಿಯನ್ನು ಕಾನೂನು ಪರಿಮಿತಿಯಲ್ಲಿ ಮಂಜೂರು ಮಾಡಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು.
ಕೆಪಿಸಿ ಭೂಮಿಯನ್ನು ಅರಣ್ಯ ಇಲಾಖೆಗೆ ಸೇರಿಸಿ ಎಂದು ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ ಅವರು ಅರಣ್ಯ ಸಚಿವರಿಗೆ ಪತ್ರ ಬರೆದಿರುವುದನ್ನು ಸಚಿವರ ಗಮನ ಸೆಳೆದಾಗ, ಯಾರೊ ಪತ್ರ ಬರೆದ ಮಾತ್ರಕ್ಕೆ ರೈತರಿಗೆ ತೊಂದರೆ ಕೊಡಲಾಗದು. ಈ ಪ್ರಕರಣ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಕಾರಣ ಅರಣ್ಯ ಇಲಾಖೆಯೊಂದಿಗೆ ಸಂಪರ್ಕಿಸಿ ಸೂಕ್ತ ಪರಿಹಾರ ಮಾಡಲಾಗುವುದು. ಈ ಬಗ್ಗೆ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳುವುದಾಗಿ ಸಚಿವರು ಹೇಳಿದರು.
ಸುಪ್ರೀಂ ಕೋರ್ಟಿಗೆ ವರದಿ:
ಶರಾವತಿ ಮುಳುಗಡೆ ಸಂತ್ರಸ್ಥರ ಭೂಮಿಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಸರ್ವೆ ಮಾಡಿದ್ದು, ಘನ ನ್ಯಾಯಾಲಯಕ್ಕೆ ವರದಿ ಸಲ್ಲಿಸುವುದು ಬಾಕಿ ಇದೆ. ನ್ಯಾಯಾಲಯದ ಮುಂದಿನ ವಿಚಾರಣೆ ಸಂದರ್ಭ ವರದಿ ಸಲ್ಲಿಸಲು ಎಲ್ಲ ಸಿದ್ಧತೆಯನ್ನು ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಇದೇ ವೇಳೆ ಮುಳುಗಡೆ ಸಂತ್ರಸ್ತರ ಬಿಟ್ಟು ಹೋದ ಭೂಮಿಯ ವಿಚಾರವಾಗಿ ನಮ್ಮ ವಕೀಲರು ನ್ಯಾಯಾಲಯದ ಗಮನ ಸೆಳೆಯಲಿದ್ದಾರೆ. ಆರು ದಶಕಗಳಿಂದ ಕಗ್ಗಂಟಾಗಿರುವ ಸಮಸ್ಯೆಯನ್ನು ಒಂದೇ ಬಾರಿ ಅಥವಾ ತುರ್ತಾಗಿ ಪರಿಹರಿಸುವುದು ಕಷ್ಟವಾಗುತ್ತದೆ. ಆದರೆ ನಮ್ಮ ಸರಕಾರ ಚುನಾವಣೆ ಪೂರ್ವದಲ್ಲಿ ಮಾತುಕೊಟ್ಟಂತೆ ಆದ್ಯತೆಯಾಗಿ ತೆಗೆದುಕೊಂಡಿದೆ. ಇದೇ ರೀತಿ ಅರಣ್ಯ ಹಕ್ಕು ಕಾಯಿದೆ ಜಾರಿಗೆ ಅಡ್ಡಿಯಾಗಿರುವ 75 ವರ್ಷಗಳ ದಾಖಲೆ ಕೊಡುವ ಷರತ್ತನ್ನು ಸಡಿಲಿಸರುವ ವಿಚಾರದಲ್ಲಿಯೂ ಮುಖ್ಯಮಂತ್ರಿಗಳ ಜತೆ ಮಾತನಾಡಲಾಗಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲಾಗುವುದು. ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿದ ಬಳಿಕ ಚಕ್ರಾ, ವಾರಾಹಿ, ತುಂಗಾ ಡ್ಯಾಂನಿಂದ ಸಂತ್ರಸ್ತರಾದವರ ಸಮಸ್ಯೆಗಳೂ ಒಂದೊಂದಾಗಿ ಬಗೆಹರಿಯುತ್ತವೆ ಎಂದು ಮಧುಬಂಗಾರಪ್ಪ ಭರವಸೆ ನೀಡಿದರು.
ವಿಮಾನ ನಿಲ್ದಾಣ ನೈಟ್ ಲ್ಯಾಂಡಿಂಗ್:
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸಾಧನ ಅಳವಡಿಸಲು ರಾಜ್ಯ ಸರ್ಕಾರದಿಂದ ಆಗಬೇಕಾದ ಕೆಲಸದ ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ. ಕಾಮಗಾರಿ ಮತ್ತು ಟೆಂಡರ್ ಇತ್ಯಾದಿ ಪ್ರಕ್ರಿಯೆಗಳಿಗೆ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಜ್ಯದ ಜನರ ತೆರಿಗೆ ಹಣವನ್ನೇ ಬಳಕೆ ಮಾಡಿದ್ದು, ಇದು ಸಂಪೂರ್ಣ ರಾಜ್ಯದ ಯೋಜನೆಯಾಗಿದೆ. ಅಧಿಕಾರಿಗಳ ಸಭೆ ಕರೆದ ಮಾತ್ರಕ್ಕೆ ಎಲ್ಲವೂ ಪೂರ್ಣಗೊಳ್ಳುವುದಿಲ್ಲ ಎಂದು ಸಚಿವರು ಹೇಳಿದರು.
ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆ ಮತ್ತು ನನ್ನ ಇಲಾಖೆಗೆ ಏನು ಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಫೆ.2 ರಂದು ಈ ಸಂಬಂಧ ಸಿಎಂ ಸಭೆ ಕರೆದಿದ್ದಾರೆ. ಅಲ್ಲಿ ಅಧಿಕಾರಿಗಳು ಸಿದ್ದ ಪಡಿಸಿರುವ ಪ್ರಸ್ತಾವನೆಯನ್ನು ಸಿಎಂ ಗೆ ಸಲ್ಲಿಸಲಾಗುವುದು. ಚಂದ್ರಗುತ್ತಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದು, ಅಲ್ಲಿನ ಅಭಿವೃದ್ಧಿಗೂ ಅನುದಾನ ಬಿಡುಗಡೆ ಮಾಡಲಾಗಿದೆ. ಅರಣ್ಯ ಇಲಾಖೆಯಿಂದ ಭೂಮಿ ಹಸ್ತಾಂತರ ಪ್ರಕ್ರಿಯೆ ಮುಗಿದಿದೆ. ಇನ್ನು ಮುಂದೆ ಅಲ್ಲಿ ಕಾಮಗಾರಿಗಳು ಆರಂಭವಾಗಲಿವೆ ಎಂದು ಮಧುಬಂಗಾರಪ್ಪ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೇಮಂತ್ ಕುಮಾರ್, ರಕ್ಷಣಾಧಿಕಾರಿ ಬಿ.ನಿಖಿಲ್, ಹೆಚ್ಚುವರಿ ಜಿಲ್ಲಾಧಿಕಾರಿ ಅಭಿಷೇಕ್ ಇದ್ದರು.
ಅಕ್ರಮ ಚಟುವಟಿಕೆ ವಿರುದ್ಧ ಕ್ರಮ
ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಾದಕ ವಸ್ತುಗಳ ಜಾಲವನ್ನು ಮಟ್ಟಾ ಹಾಕಬೇಕು. ನಮ್ಮ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸಬೇಕಿದೆ. ಯಾವುದೇ ಅಕ್ರಮ ದಂಧೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಕ್ತವಾಗಿದ್ದಾರೆ. ಅದೇ ರೀತಿ ಮಣ್ಣು, ಮರಳು ಹಾಗೂ ಕಲ್ಲುಕ್ವಾರಿಗಳಲ್ಲಿನ ಅಕ್ರಮ ಚಟವಟಿಕೆಗಳನ್ನು ನಿಯಂತ್ರಣಕ್ಕೆ ಸೂಚನೆ ನೀಡಲಾಗಿದೆ. ರೈತರು ತೋಟಕ್ಕೆ ಮಣ್ಣು ತರುವುದು ಮತ್ತು ಮಣ್ಣು ಮಾರಾಟ ಮಾಡುವವರನ್ನು ಒಂದೇ ರೀತಿ ನೋಡಲಾಗದು. ರೈತರಿಗೆ ತೊಂದರೆ ಕೊಡದೆ ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಅಧಿಕಾರಿಗಳು ಸೂಚನೆ ನೀಡಲಾಗಿದೆ ಎಂದು ಮಧುಬಂಗಾರಪ್ಪ ಹೇಳಿದರು.
ಮಕ್ಕಳಲ್ಲಿ ದೇಶ ಭಕ್ತಿ
ನಮ್ಮ ಸರ್ಕಾರ ಸಂವಿಧಾನ ಪೀಠಿಕೆಯ ಪಠಣ ಜಾರಿಗೆ ತಂದ ಮೇಲೆ ಮಕ್ಕಳಲ್ಲಿ ಸಂವಿಧಾನದ ಮೇಲಿನ ಗೌರವ ಮತ್ತು ಅರಿವು ಹೆಚ್ಚಾಗಿದೆ. ದೇಶ ಸ್ವತಂತ್ರವಾಗಲು ಎಷ್ಟು ಜನರ ತ್ಯಾಗ, ಬಲಿದಾನವಾಗಿದೆ ಎಂಬುದನ್ನು ಮಕ್ಕಳಿಗೆ ಹೇಳಿಕೊಡಬೇಕು. ಇಲ್ಲವಾದರೆ ಇತಿಹಾಸವನ್ನೇ ಮರೆಯುವ ಸಂಭವ ಇದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ, ದೇಶದ ಬಗ್ಗೆ ಗೌರವ ಮತ್ತು ಒಂದು ಭಾವನಾತ್ಮಕ ಸಂಬಂಧ ಮಕ್ಕಳಲ್ಲಿ ಮೂಡಬೇಕಿದೆ. ಈ ನೆಲೆಯಲ್ಲಿ ಶಿಕ್ಷಣ ಇಲಾಖೆ ಸಾಕಷ್ಟು ಕೆಲಸ ಮಾಡಿದೆ. ಒಂದು ದೊಡ್ಡ ಇಲಾಖೆಯನ್ನು ಸುಸೂತ್ರ ಮತ್ತು ಯಶಸ್ವಿಯಾಗಿ ಮುನ್ನಡೆಸಿರುವ ತೃಪ್ತಿ ನನಗಿದೆ. ಮುಖ್ಯಮಂತ್ರಿಗಳ ನನ್ನ ಮೇಲೆ ಇಟ್ಟ ಭರವಸೆಗೆ ಚ್ಯುತಿ ಬಾರದಂತೆ ಕೆಲಸ ಮಾಡಿದ್ದೇನೆ ಎಂದು ಮಧುಬಂಗಾರಪ್ಪ ಹೇಳಿದರು.
ರಾಜ್ಯದಲ್ಲಿ ಮೊದಲು 500 ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಲು ನಿರ್ಣಯ ಮಾಡಲಾಗಿತ್ತು. ಆದರೆ ಈಗ 900 ಶಾಲೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಮುಂದಿನ ತಿಂಗಳು ಯೋಜನೆಗೆ ಚಾಲನೆ ಸಿಗಲಿದೆ ಎಂದು ಸಚಿವರು ಹೇಳಿದರು.
ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರು ರಾಷ್ಟ್ರ ಗೀತೆಗೆ ಅವಮಾನ ಮಾಡಿದರೆಂದು ನಮ್ಮ ಪಕ್ಷದ ಶಾಸಕರು ಗೌರ್ನರ್ ನಡೆಯನ್ನು ವಿರೋಧಿಸಿದ್ದಾರೆ. ಆದರೆ ವಿರೋಧ ಪಕ್ಷದವರು ನಮ್ಮ ಪಕ್ಷದ ನಾಯಕರ ಬಗ್ಗೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ರಾಜ್ಯಪಾಲರು ಅಧಿವೇಶನದಲ್ಲಿ ಕಾನೂನು ಬದ್ಧವಾಗಿ ನಡೆದುಕೊಂಡಿಲ್ಲ ಎಂಬ ಕಾರಣಕ್ಕೆ ನಮ್ಮ ನಾಯಕರು ಆಕ್ಷೇಪ ಮಾಡಿದ್ದಾರೆ. ಈ ವಿಚಾರದಲ್ಲಿ ಕಾನೂನು ಹೋರಾಟವನ್ನು ಸರ್ಕಾರ ಮಾಡಲಿದೆ.
-ಮಧುಬಂಗಾರಪ್ಪ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ


