ಖೇಲೋ ಇಂಡಿಯಾಕ್ಕೆ ವಿಶೇಷ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆ ಮಾಡಲು ಸಹ್ಯಾದ್ರಿ ಕಾಲೇಜ್ ಕ್ಯಾಂಪಸ್‍ನ ಜಾಗವನ್ನು ಕೊಡಲು ಮುಂದಾಗಿರುವ ಸಂಸದರ ಮತ್ತು ಜಿಲ್ಲಾಡಳಿತದ ಕ್ರಮದ ವಿರುದ್ಧ ಸಹ್ಯಾದ್ರಿ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘ, ಪ್ರಗತಿಪರರು ಮತ್ತು ವಿವಿಧ ಸಂಘಗಳ ಮುಖಂಡರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸೋಮವಾರ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಕಾಲೇಜಿನ ಹಳೆಯ ವಿದ್ಯಾರ್ಥಿಗಳು, ಯಾವುದೇ ಕಾರಣಕ್ಕೂ ಸಹ್ಯಾದ್ರಿ ಕಾಲೇಜಿನಲ್ಲಿ ವಿಶೇಷ ಕ್ರೀಡಾ ತರಬೇತಿ ಕೇಂದ್ರ ಸ್ಥಾಪನೆ ಮಾಡಬಾರದು ಹಾಗೆ ಮಾಡಲು ಹೊರಟರೆ ಜಿಲ್ಲೆಯಲ್ಲಿ ಮತ್ತೊಂದು ಬಹುದೊಡ್ಡ ಆಂದೋಲನ ರೂಪಿಸುವ ಪರಿಸ್ಥಿತಿ ಬರುತ್ತದೆ ಎಂದಿರುವ ವಿವಿಧ ಮುಖಂಡರು, ಶಿವಮೊಗ್ಗ ಸಂಸದರಿಗೆ ಸಹ್ಯಾದ್ರಿ ಕಾಲೇಜಿನ ಜಾಗವೇ ಬೇಕೆಂಬ ಹಠ ಯಾಕೆ ಎಂದು ಪ್ರಶ್ನಿಸಿದ್ದಾರೆ.
ಸಹ್ಯಾದ್ರಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹಾಗೂ ಡಿಎಸ್‍ಎಸ್ ಮುಖಂಡ ಎಂ. ಗುರುಮೂರ್ತಿ ಮಾತನಾಡಿ, ಇಂತಹ ಕೋವಿಡ್ ಸಂದರ್ಭದಲ್ಲೂ ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್‍ನಲ್ಲಿ ಸಾಯಿ ಮತ್ತು ಖೇಲೋ ಇಂಡಿಯಾ ಘಟಕ ಸ್ಥಾಪನೆಗಾಗಿ ಸಭೆ ಕರೆಯಲಾಗಿದೆ. ಯಾವುದೇ ನಿರ್ಣಯವನ್ನು ತೆಗೆದುಕೊಳ್ಳುವಾಗ ಅಭಿಪ್ರಾಯ ಕೇಳಬೇಕೆಂಬ ಸೌಜನ್ಯವೂ ಈ ಸರ್ಕಾರಕ್ಕಿಲ್ಲ. ಹೀಗಾಗಿ ಸುಮಾರು 18.4 ಎಕರೆ ಜಾಗವನ್ನು ಬಿಟ್ಟುಕೊಡುವಂತೆ ಜಿಲ್ಲಾಧಿಕಾರಿಗಳೆ ಕುವೆಂಪು ವಿವಿಗೆ ಪತ್ರ ಬರೆದಿದ್ದಾರೆ. ಇದು ಕದ್ದುಮುಚ್ಚಿ ಮಾಡುವ ದ್ರೋಹವಾಗಿದೆ ಎಂದು ಟೀಕಿಸಿದರು.

ರೈತ ನಾಯಕ ಕೆ.ಟಿ.ಗಂಗಾಧರ್ ಮಾತನಾಡಿ, ಸಹ್ಯಾದ್ರಿ ಕಾಲೇಜಿಗೆ ತನ್ನದೇ ಆದ ಇತಿಹಾಸವಿದೆ. ಅಲ್ಲಿನ ಆವರಣದಲ್ಲಿ ಓಡಾಡುವುದೇ ಒಂದು ಸಂಭ್ರಮ. ಲಕ್ಷಾಂತರ ಜನರು ಇಲ್ಲಿ ಓದಿದ್ದಾರೆ. ಕನ್ನಡದ ಅಸ್ಮಿತೆಯ ಸಂಕೇತ ಸಹ್ಯಾದ್ರಿಕಾಲೇಜ್. ನಿಮ್ಮಕ್ರೀಡಾ ಕೆಲಸಕ್ಕೆ ನಾವು ಅಡ್ಡ ಬರುವುದಿಲ್ಲ. ಆದರೆ ಸಹ್ಯಾದ್ರಿ ಕಾಲೇಜಿನಲ್ಲಿ ಬೇಡ ಎಂದರು.
ನಿವೃತ್ತ ಪ್ರಾಧ್ಯಾಪಕರುಗಳಾದ ಡಾ.ಸಣ್ಣರಾಮ ಹಾಗೂ ಡಾ.ರಾಜೇಂದ್ರಚೆನ್ನಿ ಮಾತನಾಡಿ, ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ರವರು ಸಹ್ಯಾದ್ರಿ ಕಾಲೇಜಿನ ಸ್ಥಾಪನೆಗಾಗಿ 100 ಎಕರೆ ಜಾಗ ಕೊಟ್ಟಿದ್ದರು. ಇದು ಶೈಕ್ಷಣಿಕ ಉದ್ದೇಶಕ್ಕೆ ಮಾತ್ರ. ಇಲ್ಲಿ ಕ್ರೀಡಾ ಸಮುಚ್ಚಯವಾಗುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಒಂದು ಭವ್ಯ ಪರಂಪರೆಯನ್ನು ನಾಶಪಡಿಸಲು ಹೊರಟಿರುವುದು ಖಂಡನೀಯ. ಕನ್ನಡದ ಪ್ರಜ್ಞೆಯಾಗಿರುವ ಈ ಕಾಲೇಜನ್ನು ಇರುವ ಸ್ಥಿತಿಯಲ್ಲೇ ಬಿಡಿ. ಇಲ್ಲಿ ಅವೈಜ್ಞಾನಿಕವಾದ ಯಾವ ಯೋಜನೆಗಳು ಬೇಡ. ಕಾಲೇಜನ್ನು ವಿರೂಪಗೊಳಿಸಬೇಡಿ ಎಂದರು.

ವಕೀಲ ಕೆ.ಪಿ ಶ್ರೀಪಾಲ್ ಮಾತನಾಡಿ, ಕುವೆಂಪ ವಿವಿ ಕುಲಪತಿಗಳು ಒಂದು ರೀತಿಯಲ್ಲಿ ದುರ್ಬಲರೇ ಆಗಿದ್ದಾರೆ. ಏಕಾಏಕೀ ನಿರ್ಧಾರ ಕೈಗೊಂಡಿದ್ದಾರೆ. ಈ ಕಾಲೇಜಿನಲ್ಲಿ ಸುಮಾರು 6500 ಸಾವಿರ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಮೂರು ಕಾಲೇಜಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಒಂದು ವಿಶ್ವವಿದ್ಯಾನಿಲಯವನ್ನೇ ಸ್ವತಂತ್ರವಾಗಿ ನಿರ್ವಹಿಸುವಷ್ಟು ಶಕ್ತಿ ಈ ಕಾಲೇಜಿಗಿದೆ. ಮುಂದಿನ ದಿನಗಳಲ್ಲಿ ಬೇರೆ ಬೇರೆ ಕಾರಣಕ್ಕಾಗಿ ಇಲ್ಲಿ ಜಾಗಬೇಕಾಗುತ್ತದೆ. ಆದ್ದರಿಂದ ಒಂದಿಂಚು ಜಾಗವನ್ನು ನಾವು ಬಿಡುವುದಿಲ್ಲ. ಇದಕ್ಕೆ ವಿದ್ಯಾರ್ಥಿಗಳ ವಿರೋಧವಿದೆ ಎಂದರು.
ಗೋಷ್ಠಿಯಲ್ಲಿ ವಿದ್ಯಾರ್ಥಿ ಪ್ರಶಾಂತ್, ರಂಗನಾಥ್, ಪಿ.ವಿ.ವಿಶ್ವನಾಥ್ ಕಾಶಿ ಸೇರಿದಂತೆ ಹಲವರಿದ್ದರು.

ಏ.16 ರಂದು ಏಕಾಏಕಿ ಕೋವಿಡ್ ಸಂದರ್ಭದಲ್ಲೂ ಸಭೆ ಕರೆದು ಸಹ್ಯಾದ್ರಿ ಕಾಲೇಜಿನ 18.4 ಎಕರೆ ಜಾಗವನ್ನು ಬಿಟ್ಟುಕೊಡಲು ನಿರ್ಣಯ ತೆಗೆದುಕೊಂಡಿರುವುದು ಸರಿಯಲ್ಲ. ಈ ಬಗ್ಗೆ ಕಾಲೇಜಿನ ಪ್ರಾಂಶುಪಾಲರುಗಳನ್ನು ಕರೆದು ಮಾತನಾಡಿಯೂ ಇಲ್ಲ. ಆದ್ದರಿಂದ ಮತ್ತೆ ಸಭೆ ಕರೆದು ನಿರ್ಣಯ ವಾಪಸ್ಸು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ. -ಶ್ರೀಪಾಲ್

ನಗರದ ಸುತ್ತಮುತ್ತ ಬೇಕಾದಷ್ಟು ಜಾಗವಿದೆ. ನಿಮ್ಮದೇ ಆದ ನೂರಾರು ಎಕರೆ ಜಾಗದಲ್ಲಿ ಒಂದಿಷ್ಟು ಜಾಗವನ್ನು ಲೀಸ್ ಮೇಲೆ ಖಾಸಗಿ ಕಂಪನಿಗೆ ಕೊಟ್ಟು ಉದಾರತೆ ಮೆರೆಯಿರಿ. ಪೆಸಿಟ್ ಕಾಲೇಜಿನಲ್ಲಿ ಬೇಕಾದಷ್ಟು ಜಾಗವಿದೆ. ಬಿಆರ್‍ಪಿ ಜಂಕ್ಷನ್ ಹತ್ತಿರವೂ ನೂರಾರು ಎಕರೆ ಜಾಗವಿದೆ ಅಲ್ಲಿ ಕೊಡಿ ಅಲ್ಲೂ ಕೊಡಲು ಮನಸ್ಸಾಗದಿದ್ದರೆ ಸೂಡಾದ ಜಾಗ ಸುಮಾರು 80 ಎಕರೆಯಷ್ಟು ಸಹ್ಯಾದ್ರಿ ಕಾಲೇಜಿನ ಆಸುಪಾಸಿನಲ್ಲಿದೆ. ಇಲ್ಲವೆ ಸಕ್ಕರೆ ಕಾರ್ಖಾನೆ ಈಗ ಮುಚ್ಚಿದೆ. ಅದರ ಎದುರು ಇರುವ ಖಾಲಿ ಜಾಗದಲ್ಲಿ ಊರಿನ ಕಸ ಹಾಕುತ್ತಿದ್ದಾರೆ ಅದನ್ನು ಬಳಸಿಕೊಳ್ಳಿ. -ಎಂ. ಗುರುಮೂರ್ತಿ
ಇಂದು ಕುಲಪತಿಗಳ ಸಭೆ
ಸಹ್ಯಾದ್ರಿ ವಾಣಿಜ್ಯ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಗೆ ಕುವೆಂಪು ವಿವಿ ಕಲಪತಿ ಪ್ರೊ.ಬಿ.ವಿ.ವೀರಭದ್ರಪ್ಪ ಅವರು ಮೂರು ಕಾಲೇಜುಗಳ ಅಧ್ಯಾಪಕರು ಹಾಗೂ ಅತಿಥಿ ಉಪನ್ಯಾಸಕರ ಸಭೆ ಕರೆದಿದ್ದಾರೆ. ಸಹ್ಯಾದ್ರಿ ಕ್ಯಾಂಪಸ್ ಹಸ್ತಾಂತರ ಸಂಬಂದ ಜಿಲ್ಲಾಧಿಕಾರಿಗಳು ಬರೆದ ಪತ್ರದ ಕುರಿತಾಗಿ ವಿವರ ಚರ್ಚೆ ನಡೆಯುವ ಸಾಧ್ಯತೆಯಿದೆ. ಕುಲಪತಿಗಳು ಯೋಜನೆಯ ಬಗ್ಗೆ ಕಾಲೇಜು ಸಿಬ್ಬಂದಿಗಳಿಗೆ ಮನವರಿಕೆ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.


