Malenadu Mitra
ರಾಜ್ಯಶಿವಮೊಗ್ಗಸಾಗರ

ಕಾಗೋಡು ತಿಮ್ಮಪ್ಪ ಎಂಬ ಜನರ ನಾಯಕ


ಸೆ.೧೦ ರಂದು 90ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಹಿರಿಯ ಮುತ್ಸದ್ದಿ

ಕಾಗೋಡು ಎಂಬ ಊರಿನ ಹೆಸರೆ ಈ ನಾಡಿನ ಜನರಲ್ಲಿ ಒಂದು ರೀತಿಯ ರೋಮಾಂಚನ ಉಂಟು ಮಾಡುತ್ತದೆ. ಈ ನೆಲದಲ್ಲಿ ನಡೆದ ಐತಿಹಾಸಿಕ ಹೋರಾಟದಿಂದಾಗಿ ರಾಜ್ಯದಲ್ಲಿ ಕ್ರಾಂತಿಕಾರಕ ಭೂ ಸುಧಾರಣಾ ಕಾಯಿದೆ ಜಾರಿಗೆ ಬಂದಿದೆ. ಈ ಕಾಯಿದೆ ಕಾರಣದಿಂದಾಗಿ ಲಕ್ಷಾಂತರ ಗೇಣಿದಾರರು ಭೂ ಒಡೆತನ ಪಡೆದಿದ್ದಾರೆ. ಇಂತ ಐತಿಹಾಸಿಕ ನೆಲದಲ್ಲಿ ಹುಟ್ಟಿದ ಸಮಾಜವಾದಿ ಚಳವಳಿಯ ಮೂಸೆಯಿಂದ ಹೊಹೊಮ್ಮಿದ ಜನನಾಯಕ ಕಾಗೋಡುತಿಮ್ಮಪ್ಪ.
ಕರ್ನಾಟಕ ರಾಜಕಾರಣ ಮತ್ತು ಈ ನೆಲದ ಹೋರಾಟಗಳಿಗೆ ಸಾಕ್ಷಿಪ್ರಜ್ಞೆಯಂತಿರುವ ಕಾಗೋಡು ತಿಮ್ಮಪ್ಪ ಅವರೆಂದರೆ ಪಕ್ಷಾತೀತವಾಗಿ ಎಲ್ಲರೂ ಗೌರವಿಸುವ ಹಿರಿಯ ಮುತ್ಸದ್ದಿ ನಾಯಕ. ಹೋರಾಟಕ್ಕೆ ಅನ್ವರ್ಥನಾಮದಂತಿರುವ ಕಾಗೋಡು ತಿಮ್ಮಪ್ಪ ಅವರಿಗೀಗ 90 ಹರೆಯ. ಸೆ.10 ರಂದು 90ನೆ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮಾದರಿ ರಾಜಕಾರಣಿ ಕಾಗೋಡು ತಿಮ್ಮಪ್ಪ ಅವರು ರಾಜ್ಯರಾಜಕಾರಣದ ಹಿರಿಯಣ್ಣ ಎಂದರೆ ಅತಿಶಯೋಕ್ತಿಯಾಗಲಾರದು.

ಹೋರಾಟವೇ ಜೀವನ:

1951 ರಲ್ಲಿ ನಡೆದ ಕಾಗೋಡು ಹೋರಾಟದ ಸಂದರ್ಭದಲ್ಲಿ ಹತ್ತನೇ ತರಗತಿ ಓದುತಿದ್ದ ತಿಮ್ಮಪ್ಪರಿಗೆ ಮನೆಯ ಜಗುಲಿಯೇ ಮೊದಲ ಹೋರಾಟದ ಪಾಠಶಾಲೆ. ಅಲ್ಲಿನ ಹೋರಾಟದ ರೂಪುರೇಷೆಗಳಿಂದಾಗಿ ತಿಮ್ಮಪ್ಪ ಅವರಿಗೆ ಎಳವೆಯಲ್ಲಿಯೇ ಹೋರಾಟದ ಗುಣ ಮೈಗೂಡಿತ್ತು. ಕಾಗೋಡಿನಲ್ಲಿ ಐತಿಹಾಸಿಕ ಹೋರಾಟ ನಡೆಯದೇ ಇದ್ದರೆ, ಈ ಹೋರಾಟಕ್ಕೆ ರಾಷ್ಟçನಾಯಕರಾದ ರಾಮಮನೋಹರ ಲೋಹಿಯಾ, ಜಯಪ್ರಕಾಶ್ ನಾರಾಯಣ್, ಶಾಂತವೇರಿ ಗೋಪಾಲಗೌಡ ಬಾರದಿದ್ದರೆ, ಚಳವಳಿಯ ರೂವಾರಿ ಹೆಚ್.ಗಣಪತಿಯಪ್ಪ, ಸದಾಶಿವರಾಯ, ಅಣ್ಣಯ್ಯ, ಜೆ.ಎಚ್.ಪಟೇಲ್ ಅವರಂತಹವರ ಒಡನಾಟದ ಕಾರಣದಿಂದಾಗಿಯೇ ಕಾಗೋಡು ತಿಮ್ಮಪ್ಪ ಎಂಬ ಹೋರಾಟಗಾರ ರೂಪುಗೊಂಡಿದ್ದು ಎಂದರೆ ತಪ್ಪಾಗಲಾರದು.

ತಾಲೂಕು ಬೋರ್ಡ್ ಮೂಲಕ ರಾಜಕಾರಣ:

1932 ರ ಸೆಪ್ಟೆಂಬರ್ 10 ರಂದು ಸಾಗರ ತಾಲೂಕು ಕಾಗೋಡು ಗ್ರಾಮದಲ್ಲಿ ಜನಿಸಿದ ಕಾಗೋಡು ತಿಮ್ಮಪ್ಪ ವಿದ್ಯಾರ್ಥಿದೆಸೆಯಿಂದಲೇ ಹೋರಾಟದ ಹಾದಿಯಲ್ಲಿಯೇ ಸಾಗಿದವರು. ಕಾಗೋಡು ಚಳವಳಿಯಿಂದ ಪ್ರೇರೇಪಿತರಾದ ಮತ್ತು ಹೋರಾಟದ ಭಾಗವಾಗಿದ್ದ ಕುಟುಂಬದ ಕುಡಿಯಾಗಿದ್ದ ತಿಮ್ಮಪ್ಪ ಬಿ.ಕಾಂ ಪದವಿ ಬಳಿಕ ಕಾನೂನು ಪದವಿ ಮಾಡಿದ್ದರು. ವಕೀಲಿ ವೃತ್ತಿ ಮಾಡುತ್ತಲೇ ರಾಜಕಾರಣದತ್ತ ಒಲವು ಹೊಂದಿದ್ದ ಅವರು 1961ರಲ್ಲಿ ಸಾಗರ ತಾಲೂಕು ಬೋರ್ಡ್ಗೆ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. 1968 ರಲ್ಲಿ ತಾಲೂಕು ಬೋರ್ಡ್ ಅಧ್ಯಕ್ಷರಾದರು. ಸಮಾಜವಾದಿ ಚಳವಳಿಯ ನೆಲೆಗಟ್ಟಿನಿಂದ ರಾಜಕಾರಣ ಪ್ರವೇಶಿಸಿದ್ದ ಕಾಗೋಡು ತಿಮ್ಮಪ್ಪ 1972ರಲ್ಲಿ ಮೊದಲ ಶಾಸಕರಾಗಿ ಆಯ್ಕೆಯಾದರು.

ಭೂ ಸುಧಾರಣಾ ಕಾಯಿದೆ ಹಿಂದಿನ ಶಕ್ತಿ:

ದೇವರಾಜು ಅರಸು ಅವರು ಮುಖ್ಯಮಂತ್ರಿಯಾಗಿ ಜಾರಿಗೆ ತಂದ ಐತಿಹಾಸಿಕ ಕರ್ನಾಟಕ ಭೂಸುಧಾರಣಾ ಕಾಯಿದೆ-1074ರ ಜಾರಿಯಲ್ಲಿ ಕಾಗೋಡು ತಿಮ್ಮಪ್ಪ ಅವರ ಚಿಂತನೆ ಕೆಲಸ ಮಾಡಿದೆ. ಪ್ರತಿಪಕ್ಷದ ಸದಸ್ಯರಾಗಿದ್ದ ಕಾಗೋಡು ತಿಮ್ಮಪ್ಪ ಅವರನ್ನು ಕಾಯಿದೆ ತರುವ ಜಂಟಿ ಸಲಹಾ ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಾಗಿತ್ತು. ಗೇಣಿದಾರರ ಸಮಸ್ಯೆಗಳ ಅರಿವಿದ್ದ ಕಾಗೋಡು ತಿಮ್ಮಪ್ಪ ಅವರು ಸಮಿತಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವಲ್ಲಿ ಯಶಸ್ವಿಯಾಗಿದ್ದರು. ಭೂಮಾಲೀಕರ ಪರವಾದ ಕಾಂಗ್ರೆಸ್‌ನ ಆಡಳತ ಕಾಲದಲ್ಲಿಯೇ ಹಲವು ವಿರೋಧ ಕಟ್ಟಿಕೊಂಡು ಬಡ ಗೇಣಿದಾರರ ಪರ ಕಾಗೋಡು ತಿಮ್ಮಪ್ಪ ಹೋರಾಟ ಮಾಡಿದ್ದರು.
ಕಾಂಗ್ರೆಸ್‌ಗೆ ಬಂದ ಸಮಾಜವಾದಿ:


70 ರದಶಕದಲ್ಲಿ ಸಮಾಜವಾದಿ ನಾಯಕರುಗಳು ಹರಿದು ಹಂಚಿಹೋದ ಸಂದರ್ಭ ಕಾಗೋಡು ತಿಮ್ಮಪ್ಪ ಅವರೂ ಕಾಂಗ್ರೆಸ್‌ನತ್ತ ಬಂದರು. ಸಮಾಜವಾದಿ ಚಿಂತನೆಯ ಕಾಗೋಡು ತಿಮ್ಮಪ್ಪ ಕಾಂಗ್ರೆಸ್‌ಗೆ ಬಂದರೂ ಇಂದಿಗೂ ತಮ್ಮ ಸಿದ್ಧಾಂತಗಳಲ್ಲಿ ರಾಜೀ ಮಾಡಿಕೊಂಡವರಲ್ಲ. ಸ್ವಪಕ್ಷದ ನಾಯಕರೇ ತಪ್ಪು ಮಾಡಿದರೂ ಮುಲಾಜಿಲ್ಲದೆ ಖಂಡಿಸುವ ನಿಷ್ಠುರತೆಯನ್ನು ಕಾಗೋಡು ತಿಮ್ಮಪ್ಪ ಯಾವತ್ತೂ ಕಾಪಿಟ್ಟುಕೊಂಡಿದ್ದಾರೆ.
ಮಾದರಿ ರಾಜಕಾರಣಿ:

ಆರು ದಶಕಗಳ ರಾಜಕೀಯ ಅನುಭವ ಹೊಂದಿರುವ ಕಾಗೋಡು ತಿಮ್ಮಪ್ಪ ಅವರ ರಾಜಕೀಯ ಎಲ್ಲರಿಗೂ ಮಾದರಿಯಾದುದು. ಕಾಂಗ್ರೆಸ್‌ನಲ್ಲಿದ್ದರೂ ಆ ಪಕ್ಷದ ಬಹುಪರಾಕ್ ಸಂಸ್ಕೃತಿಯಿAದ ದೂರವೇ ಇರುವ ತಿಮ್ಮಪ್ಪ ಅವರು ಇಂದಿಗೂ ಅದೇ ತತ್ವ ಸಿದ್ಧಾಂತವನ್ನು ಪಾಲಿಸುತ್ತಿದ್ದಾರೆ. ಉಳುವ ಎಲ್ಲ ರೈತರಿಗೂ ಅದರ ಒಡೆತನ ಸಿಗಬೇಕು ಎಂದು ಪ್ರತಿಪಾದಿಸುವ ಅವರ ಬಡವರಪರ ಕಾಳಜಿ ಅನನ್ಯವಾದುದು. ಭೂಮಿ ಸಮಸ್ಯೆ ಮತ್ತು ಅದಕ್ಕೆ ಸಂಬAಧಿಸಿದ ಕಾನೂನು ಕಟ್ಟಳೆಗಳನ್ನು ತಿಮ್ಮಪ್ಪನವರಷ್ಟು ತಿಳಿದುಕೊಂಡಿರುವ ಮತ್ತೊಬ್ಬ ರಾಜಕಾರಣಿ ರಾಜ್ಯದಲ್ಲಿಲ್ಲ. ಮುಖ್ಯಮಂತ್ರಿಯಾಗುವ ಅರ್ಹತೆ ಇದ್ದರೂ ಯಾವತ್ತೂ ಯಾವ ಹುದ್ದೆಗೂ ಲಾಬಿ ಮಾಡಿದವರಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗ ಎಲ್ಲಾ ಶಾಸಕರು ಹೈಕಮಾಂಡ್ ನಾಯಕರ ಓಲೈಸಲು ದಿಲ್ಲಿಯತ್ತ ಹೋದರೆ ಕಾಗೋಡು ತಿಮ್ಮಪ್ಪ ಕ್ಷೇತ್ರದ ಜನರೊಂದಿಗೆ ಇರುತ್ತಿದ್ದರು. ಯಾವುದೇ ಸಮಸ್ಯೆಯ ಬಗ್ಗೆ ಅಧ್ಯಯನ ಮಾಡದೆ ಮಾತನಾಡುವವರಲ್ಲ. ಯಾವುದೇ ಇಲಾಖೆಯ ಸಚಿವರಾಗಿದ್ದರೂ ಅದಕ್ಕೆ ನ್ಯಾಯಒದಗಿಸಿದ ಹೆಗ್ಗಳಿಕೆ ಕಾಗೋಡು ಅವರದು.

ವಿಧಾನಸಭಾಧ್ಯಕ್ಷರಾಗಿ ಮಾದರಿ ಕೆಲಸ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವಿಧಾನ ಸಭೆ ಅದ್ಯಕ್ಷರಾಗಿದ್ದ ಕಾಗೊಡು ತಿಮ್ಮಪ್ಪ ಅವರು, ಸದನವನ್ನು ಹೀಗೂ ನಡೆಸಬಹುದು ಎಂಬುದನ್ನು ತೋರಿಸಿಕೊಟ್ಟರು. ಕಿರಿಯ ಶಾಸಕರಿಗೆ ಸದನ ನಿಯಮಾವಳಿ ಓದಿಕೊಂಡು ಬರುವಂತೆ ಗದರುತ್ತಿದ್ದ ಅವರು ಸದನದಲ್ಲಿ ಹೆಡ್ ಮಾಸ್ತರ್ ರೀತಿ ಕೆಲಸ ಮಾಡಿ ತೋರಿಸಿದರು.
ರೈತರಿಗೆ ನ್ಯಾಯ:
ಕಂದಾಯ ಸಚಿವರಾಗಿದ್ದ ಕಾಗೋಡು ತಿಮ್ಮಪ್ಪ ತಮ್ಮ ಎರಡುವರ್ಷಗಳ ಆಡಳಿತ ಅವಧಿಯಲ್ಲಿ ರಾಜ್ಯದ ರೈತರ ಭೂಮಿ ಹಕ್ಕಿನ ಸಮಸ್ಯೆ ಇತ್ಯರ್ಥಕ್ಕೆ ಸಾಕಷ್ಟು ಕೆಲಸ ಮಾಡಿದರು. ಸರಕಾರಿ ಹಾಗೂ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡ ಬಡವರಿಗೆ ಹಕ್ಕು ಪತ್ರ ಕೊಡಿಸುವಲ್ಲಿ ಮಾದರಿ ಕೆಲಸ ಮಾಡಿದರು. ಶಿವಮೊಗ್ಗ ಜಿಲ್ಲೆಯಲ್ಲಿ ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಶರಾವರಿ ಮುಳುಗಡೆ ಸಂತ್ರಸ್ಥರ ಭೂಮಿ ಹಕ್ಕಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಶ್ರಮಿಸಿದ್ದರು. ಸರಕಾರಿ ದಾಖಲೆಗಳಲ್ಲಿ ಅರಣ್ಯ ಭೂಮಿ ಎಂದೇ ಇದ್ದ ರೈತರ ಭೂಮಿಯನ್ನು ಡಿನೋಟಿಫಿಕೇಷನ್ ಮಾಡುವ ಪ್ರಯತ್ನ ಆರಂಭಿಸಿದ್ದು, ಕೆಲಸ ಆಗುವ ಹಂತದಲ್ಲಿ ಕಳೆದ ಚುನಾವಣೆಯಲ್ಲಿ ಸೋಲು ಕಾಣುವ ಮೂಲಕ ಅದು ನೆನೆಗುದಿಗೆ ಬಿತ್ತು. ಹೀಗೆ ಸೋತಾಗ ಕುಗ್ಗದೆ ಗೆದ್ದಾಗ ಹಿಗ್ಗದೆ ಕಾಗೋಡು ತಿಮ್ಮಪ್ಪ ಯಾವತ್ತೂ ಜನರೊಂದಿಗಿರುವ ಮೂಲಕ ತಾವೊಬ್ಬ ಜನನಾಯಕ ಎಂಬುದನ್ನು ನಿರೂಪಿಸಿದ್ದಾರೆ. 90 ರ ಇಳಿವಯಸ್ಸಿನಲ್ಲಿಯೂ ರೈತರ ಮತ್ತು ಬಡವರ ಪರ ಹೋರಾಟದ ಕಿಚ್ಚುಹೊಂದಿರುವ ಕಾಗೋಡು ತಿಮ್ಮಪ್ಪ ಇಂದಿನ ರಾಜಕಾರಣಿಗಳಿಗೆ ಅಧ್ಯಯನ ಯೋಗ್ಯ ವ್ಯಕ್ತಿತ್ವವಾಗಿ ನಮ್ಮ ನಡುವೆ ಇದ್ದಾರೆ.

Ad Widget

Related posts

ದಾರ್ಶನಿಕರ ಬಗ್ಗೆ ಶಾಲೆಗಳಲಿ ಉಪನ್ಯಾಸದ ಅಗತ್ಯವಿದೆ: ಮಧುಬಂಗಾರಪ್ಪ , ನಾರಾಯಣಗುರು,ನುಲಿಯ ಚಂದಯ್ಯ ಜಯಂತಿಯಲ್ಲಿ ಹೇಳಿಕೆ

Malenadu Mirror Desk

ಜಿಲ್ಲೆಯ 18,700 ಮನೆಗಳಿಗೆ ಹಕ್ಕುಪತ್ರ

Malenadu Mirror Desk

ದನಗಳ್ಳರ ಹಿಟ್ ಅಂಡ್ ರನ್: ಇಬ್ಬರಿಗೆ ಗಂಭೀರ ಗಾಯ,ಮಣಿಪಾಲ್ ಆಸ್ಪತ್ರೆಗೆ ದಾಖಲು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.