Malenadu Mitra
ರಾಜ್ಯಶಿವಮೊಗ್ಗ

ಅಡಿಕೆ ಎಲೆಚುಕ್ಕೆ ರೋಗ ; ಆತಂಕಕ್ಕೊಳಗಾಗದಿರಲು ಮನವಿ : ಆರಗ ಜ್ಞಾನೇಂದ್ರ


ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕಿನ ಆಯ್ದ ಕೆಲವು ಭಾಗಗಳಲ್ಲಿನ ತೋಟಗಳಲ್ಲಿ ಅಡಿಕೆ ಬೆಳೆಗೆ ಎಲೆಚುಕ್ಕೆ ರೋಗ ಹೆಚ್ಚಾಗಿದ್ದು, ಅದರ ನಿಯಂತ್ರಣಕ್ಕೆ ಸರ್ಕಾರ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ರಾಜ್ಯ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಹೇಳಿದರು.
ಸೋಮವಾರ  ತೀರ್ಥಹಳ್ಳಿಯ ನಾಲೂರು ಗ್ರಾಮಕ್ಕೆ ಹೊಂದಿಕೊಂಡಂತಿರುವ ತೋಟಗಳಿಗೆ ತೋಟಗಾರಿಕೆ ಬೆಳೆಗಾರರು, ಕೃಷಿ ಸಂಶೋಧಕರು, ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅವರು ಪರಿಶೀಲಿಸಿದರು.
ಎಲೆಚುಕ್ಕೆ ರೋಗದಿಂದ ಬಾದಿತರಾಗಿರುವ ತೋಟಗಾರಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗಬೇಕಾಗಿಲ್ಲ ಎಂದ ಅವರು ,ಬಾರಿ ಮಳೆಯಿಂದಾಗಿ ಸಕಾಲದಲ್ಲಿ ಈ ರೋಗದ ನಿಯಂತ್ರಣಕ್ಕೆ ಔಷಧ ಸಿಂಪರಣೆ ಸಾಧ್ಯವಾಗುತ್ತಿಲ್ಲವಾದ್ದರಿಂದ ರೋಗ ಹತೋಟಿಗೆ ಬರುತ್ತಿಲ್ಲವೆಂದು ತಜ್ಞರು ತಿಳಿಸಿದ್ದಾರೆ. ಮಳೆ ಕಡಿಮೆಯಾಗುತ್ತಿದ್ದಂತೆ ಹಾಗೂ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಬಿಸಿಲು ಬಿದ್ದಲ್ಲಿ ಸಹಜವಾಗಿ ಈ ರೋಗ ನಿಯಂತ್ರಣಕ್ಕೆ ಬರಲಿದೆ ಎಂದರು.


ಈ ರೋಗದ ನಿಯಂತ್ರಣಕ್ಕೆ ಬೇಕಾಗಿರುವ ಔಷಧ ಹೆಚ್ಚಿನ ಬೆಲೆಯದ್ದಾಗಿದೆ. ಮಾರುಕಟ್ಟೆಯಲ್ಲಿ ಈ ಔಷಧ ಕಡಿಮೆ  ಬೆಲೆಗೆ ದೊರಕುವಂತೆ ಪ್ರಯತ್ನಿಸಲಾಗುವುದು. ಅಲ್ಲದೇ ಔಷಧ ಖರೀದಿಗೆ ಸರ್ಕಾರದಿಂದ ಸಹಾಯಧನ ನೀಡುವ ಆದೇಶ ಇಂದು ಸಂಜೆ ಹೊರಬೀಳುವ ನಿರೀಕ್ಷೆ ಇದೆ ಎಂದ ಅವರು, ಔಷಧ ಸಿಂಪರಣೆಗೆ ಸಕಾಲದಲ್ಲಿ ಕೊನೆಗಾರರು ಸಿಗದಿರುವುದರಿಂದ ಇತ್ತೀಚೆಗೆ ಸಂಶೋಧಿಸಿರುವ ಹಗುರವಾದ ದೋಟಿಯನ್ನು ಖರೀದಿಸಲು ಸರ್ಕಾರ ಸಹಾಯಧನ ನೀಡುವಂತೆ ಅಥವಾ ಕೃಷಿ ಇಲಾಖೆಯಿಂದಲೆ ಪೂರೈಸಲು ಮಾನ್ಯ ಮುಖ್ಯಮಂತ್ರಿಗಳಿಗೆ ನಾಳೆ ನಡೆಯಲಿರುವ ಸಂಪುಟ ಸಭೆಯಲ್ಲಿ ಮನವಿ ಮಾಡಿಕೊಳ್ಳಲಾಗುವುದು ಎಂದರು.


ಔಷಧಕ್ಕೆ ಬೇಡಿಕೆ ಹೆಚ್ಚಾಗಿರುವುದರಿಂದ ಮಾರಾಟಗಾರರು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಔಷಧ ಮಾರಾಟ ಮಾಡುವವರ ಔಷಧ ಅಂಗಡಿಗಳಿಗೆ ದಿಡೀರ್ ದಾಳಿ ನಡೆಸಿ, ಅಂತಹವರನ್ನು ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.

ಕೃಷಿ ವಿಜ್ಞಾನಿ ಡಾ.ಹೇಮ್ಲಾನಾಯ್ಕ್, ಡಾ. ಗಂಗಾಧರನಾಯ್ಕ್, ಡಾ.ನಾಗರಾಜ್ ಅಡಿವೆಪ್ಪರ್, ಡಾ. ದೇಶ್‌ಮುಖ್, ಡಾ.ರವಿಕುಮಾರ್, ಡಾ.ನಿರಂಜನಕೇಶವಾಪುರ್, ಡಾ.ರಾಮಚಂದ್ರ ಮಡಿವಾಳರ್, ಸಿದ್ಧಲಿಂಗೇಶ್, ಪ್ರದೀಪ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ತೋಟಗಾರಿಕೆ ಬೆಳೆಗಾರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Ad Widget

Related posts

ಆಸ್ತಿ ತೆರಿಗೆ ಹೆಚ್ಚಳ ಮರುಪರಿಶೀಲನೆಗೆ ನಿರ್ಧಾರ

Malenadu Mirror Desk

ಹನಸವಾಡಿ ವಸತಿ ಶಾಲೆ 70 ಮಕ್ಕಳು ಅಸ್ವಸ್ಥ ಯೋಗಥಾನ್‌ನಲ್ಲಿ ನೀಡಿದ್ದ ಎಳ್ಳು-ಬೆಲ್ಲವೇ ಮಕ್ಕಳ ಆರೋಗ್ಯಕ್ಕೆ ಮುಳುವಾಯಿತೆ?

Malenadu Mirror Desk

ಶಿಸ್ತು ಬದ್ಧ ಜೀವನಕ್ಕೆ ಕಾನೂನಿನ ಅರಿವು ಅವಶ್ಯಕ : ಹಿರಿಯ ಸಿವಿಲ್ ನ್ಯಾಯದೀಶೆ ಸರಸ್ವತಿ ಕೆ.ಎನ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.