Malenadu Mitra
ರಾಜ್ಯಶಿವಮೊಗ್ಗ

ಹಿಂದುಳಿದ ವರ್ಗಗಳ ಏಳಿಗೆಯನ್ನು ಕಾಂಗ್ರೆಸ್ ಎಂದೂ ಬಯಸಲಿಲ್ಲ :ಆರಗ ಜ್ಞಾನೇಂದ್ರ

ಹಿಂದುಳಿದ ವರ್ಗಗಳ ಏಳಿಗೆಯನ್ನು ಕಾಂಗ್ರೆಸ್ ಎಂದೂ ಬಯಸಲಿಲ್ಲ. ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಂಡರು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಶುಭಮಂಗಳ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯದ ನಂತರ ಈ ದೇಶ ಆಳಿದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳು ಸೇರಿದಂತೆ ಯಾವುದೇ ಕೆಳ ಸಮುದಾಯದ ಕಲ್ಯಾಣಕ್ಕಾಗಿ ಏನೂ ಮಾಡಲಿಲ್ಲ. ಅವರನ್ನು ವೋಟ್ ಹಾಕಲು ಮಾತ್ರ ಬಳಸಿಕೊಂಡು ತಾವು ಸಿಂಹಾಸನದಲ್ಲಿ ಕೂತು ಮತ್ತಷ್ಟು ಶೋಷಿತರನ್ನಾಗಿ ಮಾಡಿದರು ಎಂದು ದೂರಿದರು.
ಬಿಜೆಪಿ ಈಗ ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಮೋದಿ ಅವರೂ ಹಿಂದುಳಿದವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದಾರೆ. ರಾಜ್ಯ ಸರ್ಕಾರವಂತೂ ಒಂದು ರೀತಿಯಲ್ಲಿ ಶೋಷಿತರೇ ಆಗಿದ್ದ ಹಿಂದುಳಿದ ವರ್ಗದವರಿಗೆ ಶಿಕ್ಷಣ, ಆರೋಗ್ಯ, ವಿವಿಧ ಯೋಜನೆಗಳನ್ನು ತಲುಪಿಸುವ ಮೂಲಕ ಅವರನ್ನು ನಿಜವಾಗಿ ಮುಖ್ಯವಾಹಿನಿಗೆ ತರುತ್ತಿದೆ. ಬಿಜೆಪಿ ಈಗಾಗಲೇ ಒಬಿಸಿ ಸಮುದಾಯವನ್ನು ತಲುಪಿದೆ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ಹಿಂದುಳಿದ ವರ್ಗಗಳಿಗೆ ಯಾವ ಕೀಳರಿಮೆಯೂ ಬೇಡ. ಭಾರತೀಯ ಪುರಾಣದಲ್ಲಿ, ಪುಣ್ಯ ಕತೆಗಳಲ್ಲಿ, ಇತಿಹಾಸದಲ್ಲಿ ಹಿಂದುಳಿದ ವರ್ಗಗಳ ನಾಯಕರು ರಾಷ್ಟ್ರ ಭಕ್ತಿಯ ಜೊತೆಗೆ ಬ್ರಿಟೀಷರ ವಿರುದ್ಧ ಹೋರಾಟ, ಸ್ವಾತಂತ್ರ್ಯಕ್ಕಾಗಿ ಹೋರಾಟ, ದೇವರನ್ನು ಒಲಿಸಿಕೊಳ್ಳುವ ರೀತಿ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಇವರ್ಯಾರನ್ನು ನಾವು ಹಿಂದುಳಿದ ವರ್ಗಗಳಿಂದ ಬಂದವರು ಎಂದು ಹೇಳಿಲ್ಲ ಎಂದರು.
ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ನೆ.ಲ. ನರೇಂದ್ರಬಾಬು ಪ್ರಾಸ್ತಾವಿಕವಾಗಿ ಮಾತನಾಡಿ, ಹಿಂದುಳಿದ ವರ್ಗಗಳ ರಕ್ಷಣೆಗಾಗಿಯೇ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಸ್ತಿತ್ವಕ್ಕೆ ಬಂದಿದೆ. ಇದು ಪ್ರತಿ ಗ್ರಾಮ ಪಂಚಾಯಿತಿ, ಶಕ್ತಿ ಕೇಂದ್ರಗಳು, ಬೂತ್ ಮಟ್ಟದಲ್ಲಿ ಕಾರ್ಯನಿರ್ವಹಿಸಲಿದೆ. ಸರ್ಕಾರದ ಯಾವುದೇ ಯೋಜನೆಗಳು ಹಿಂದುಳಿದ ವರ್ಗಗಳ ಕಟ್ಟಕಡೆಯ ಪ್ರಜೆಗೂ ತಲುಪಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ. ಮತ್ತು ಇದನ್ನು ಪ್ರಚಾರ ಮಾಡುವುದೇ ಮೋರ್ಚಾದ ಬಹುದೊಡ್ಡ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಶೇ. ೧೦೦ ರಷ್ಟು ಹಿಂದುಳಿದ ವರ್ಗಗಳ ಕಲ್ಯಾಣ ಆಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಶಾಸಕರಾದ ಡಿ.ಎಸ್. ಅರುಣ್, ರುದ್ರೇಗೌಡ, ಹರತಾಳು ಹಾಲಪ್ಪ, ಭಾನುಪ್ರಕಾಶ್, ಅಶ್ವತ್ಥನಾರಾಯಣ್, ಯಶ್ ಪಾಲ್ ಸುವರ್ಣ, ಅರುಣ್ ಜೀ, ಆರ್.ಕೆ. ಸಿದ್ಧರಾಮಣ್ಣ, ಟಿ.ಡಿ. ಮೇಘರಾಜ್, ದತ್ತಾತ್ರಿ, ಸುನಿತಾ ಅಣ್ಣಪ್ಪ, ಚನ್ನಬಸಪ್ಪ, ಜ್ಯೋತಿ ಪ್ರಕಾಶ್, ಗುರುಮೂರ್ತಿ, ವಿವೇಕಾನಂದ, ಮಾಲತೇಶ್, ಮೊದಲಾದವರಿದ್ದರು. ಅಶೋಕ್ ಮೂರ್ತಿ ಸ್ವಾಗತಿಸಿದರು.

ನಮ್ಮದು ದೇಶ ಕಟ್ಟುವ ಸಿದ್ಧಾಂತ. ಇಲ್ಲಿ ರಾಷ್ಟ್ರೀಯತೆಗೆ ಹೆಚ್ಚು ಒತ್ತು. ಹಿಂದೂ ಧರ್ಮವೆಂದರೆ ಕೇವಲ ಜಾತಿಯಲ್ಲ, ಅದೊಂದು ಸಂಸ್ಕೃತಿಯೇ ಆಗಿದೆ. ಎಲ್ಲಾ ಜಾತಿಗಳ ರಕ್ಷಣೆ ಇಲ್ಲಿ ಆಗುತ್ತದೆ. ರಾಜ್ಯದಲ್ಲಿ ೧೭ ಜನ ಹಿಂದುಳಿದ ವರ್ಗಗಳಿಗೆ ಸೇರಿದ ಶಾಸಕರಿದ್ದಾರೆ. ಸಂಸದರು, ವಿಧಾನ ಪರಿಷತ್, ಗ್ರಾಪಂ, ಜಿಪಂ, ತಾಪಂ ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗದವರು ಆಯ್ಕೆಯಾಗಿದ್ದಾರೆ. ಈ ಎಲ್ಲರ ಸಹಕಾರದಲ್ಲಿ ಹಿಂದುಳಿದ ವರ್ಗಗಳನ್ನು ಮತ್ತಷ್ಟು ಗಟ್ಟಿಯಾಗಿ ಬಿಜೆಪಿ ಮಾಡುತ್ತದೆ

ಆರಗ ಜ್ಞಾನೇಂದ್ರ ,ಗೃಹ ಸಚಿವ


Ad Widget

Related posts

ಕೋಮು ಗಲಭೆಯಲ್ಲಿ ಹತ್ಯೆಯಾಗಿದ್ದ ವಿಶ್ವನಾಥ್ ಶೆಟ್ಟಿ ಕುಟುಂಬಕ್ಕೆ ಶ್ರೀಕಾಂತ್ ನೆರವು, ಅಂದು ಪ್ರಚಾರ ಪಡೆದವರು ನಂತರ ಮರತೇ ಬಿಟ್ಟರು

Malenadu Mirror Desk

ಸಿದ್ದರಾಮಯ್ಯ, ಜಮೀರ್ ಪಾಕಿಸ್ತಾನ ಪರ ಎಂದ ಈಶ್ವರಪ್ಪ

Malenadu Mirror Desk

ರಾಗಿಗುಡ್ಡ ಗಲಭೆ ಪ್ರಕರಣ ಎನ್‌ಐಎಗೆ ವಹಿಸಲು ಸಂಸದ ರಾಘವೇಂದ್ರ ಆಗ್ರಹ, ಬಿಜೆಪಿಯಿಂದ ಪ್ರತಿಭಟನೆ ಸಿದ್ದರಾಮಯ್ಯ ಸರಕಾರದ ವಿರುದ್ಧ ವಾಗ್ದಾಳಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.