ತೀರ್ಥಹಳ್ಳಿಯ ಗಾಳಿ ಈಗ ಸಾಗರಕ್ಕೂ ಬೀಸಿದೆ. ಆಣೆ ಪ್ರಮಾಣ ಹಾಗೂ ಪಾದಯಾತ್ರೆ ಪರಿಪಾಠ ಬುದ್ದಿವಂತರ ಕ್ಷೇತ್ರ ಎಂದೇ ಹೇಳುವ ತೀರ್ಥಹಳ್ಳಿಯಲ್ಲಿ ಮಾಮೂಲಿಯಾಗಿದೆ. ಕಳೆದ ವಿಧಾನ ಸಭೆ ಚುನಾವಣೆ ಸಂದರ್ಭ ಇದು ಜೋರಾಗಿಯೇ ನಡೆದಿತ್ತು.
ಈಗ ಪಕ್ಕದ ಕ್ಷೇತ್ರ ಸಾಗರದಲ್ಲಿ ಆಣೆ ಪ್ರಮಾಣ, ಸಿಗಂದೂರು, ಧರ್ಮಸ್ಥಳ ಎಂದು ಹಾಲಿ ಹಾಗೂ ಮಾಜಿ ಶಾಸಕರ ನಡುವೆ ಸವಾಲು ಪ್ರತಿಸವಾಲು ಆರಂಭವಾಗಿದೆ.
ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಶಾಸಕ ಹಾಲಪ್ಪ ಅವರು ಮರಳು ಸಾಗಾಣಿಕೆದಾರರಿಂದ ಹಣ ಪಡೆದಿದ್ದಾರೆ. ಪಡೆದಿಲ್ಲ ಎಂದಾದರೆ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲು ಎಂದು ಸವಾಲು ಹಾಕಿದ್ದರು. ಈ ಸವಾಲನ್ನು ಸ್ವೀಕರಿಸಿರುವ ಹರತಾಳು ಹಾಲಪ್ಪ ಅವರು, ಫೆ. ೧೩ರಂದು ನಾನು ಧರ್ಮಸ್ಥಳದ ಮಂಜುನಾಥೇಶ್ವರ ಸನ್ನಿಧಾನದಲ್ಲಿ ನಾನು ಮರಳು ಸಾಗಾಣಿಕೆದಾರರಿಂದ ನಯಾಪೈಸೆ ತೆಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ನಾನು ಮತ್ತು ನನ್ನ ಕುಟುಂಬಸ್ಥರು ಮರಳು ಸಾಗಾಣಿಕೆದಾರರಿಂದ ಒಂದು ಪೈಸೆ ಕಮೀಷನ್ ಪಡೆದಿಲ್ಲ. ಮರಳು ಸಾಗಾಣಿಕೆದಾರರಿಂದ, ಪೊಲೀಸರಿಂದ ಹಣ ಪಡೆಯುವಷ್ಟು ಸಣ್ಣ ರಾಜಕಾರಣಿ ನಾನಲ್ಲ. ಆದರೆ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಗಣಪತಿ ಗುಡಾಜಿ ಎನ್ನುವ ಪೊಲೀಸ್ ಇನ್ಸ್‌ಪೆಕ್ಟರ್ ಮುಂದಿರಿಸಿಕೊಂಡು ಕಮೀಷನ್ ಪಡೆದು ಅಭ್ಯಾಸವಾಗಿ ಹೋಗಿದೆ. ಇದೀಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ನಾನು ಹಣ ಪಡೆದಿಲ್ಲ ಎಂದು ಪ್ರಮಾಣ ಮಾಡುವ ಜೊತೆಗೆ ಮಾಜಿ ಶಾಸಕರು ತಾವು ಸಹ ತಮ್ಮ ಅವಧಿಯಲ್ಲಿ ಮರಳು ಸಾಗಾಣಿಕೆದಾರರಿಂದ ಕಮೀಷನ್ ಪಡೆದಿಲ್ಲ ಎಂದು ಪ್ರಮಾಣ ಮಾಡಬೇಕು. ನನಗೆ ಯಾರಾದರೂ ಮರಳು ಸಾಗಾಣಿಕೆದಾರರು ಕಮೀಷನ್ ಕೊಟ್ಟಿದ್ದರೆ ಅವರು ಸಹ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ಹಿಟ್ ಅಂಡ್ ರನ್ ಗಿರಾಕಿ
ಕೆಲವು ದಿನಗಳ ಹಿಂದೆ ಲಿಂಗನಮಕ್ಕಿ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟು ನಾನು ಕಮೀಷನ್ ಪಡೆಯುತ್ತಿದ್ದೇನೆ ಎಂದು ಮಾಜಿ ಶಾಸಕರು ಆರೋಪ ಮಾಡಿದ್ದರು. ಇದೀಗ ಮರಳು ಸಾಗಾಣಿಕೆದಾರರಿಂದ ಕಮೀಷನ್ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಒಂದರ್ಥದಲ್ಲಿ ಮಾಜಿ ಶಾಸಕರದ್ದು ಹಿಟ್ ಅಂಡ್ ರನ್ ಸಂಸ್ಕೃತಿ. ನೀರು ಹೆಚ್ಚು ಬಿಟ್ಟರೆ ನನಗೆ ಹೇಗೆ ಕಮೀಷನ್ ಬರುತ್ತದೆ? ಮಾಜಿ ಶಾಸಕರು ಯಾವುದೇ ಮಾಹಿತಿ ಇರಿಸಿಕೊಳ್ಳದೆ ವೃಥಾ ಆರೋಪ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಾಜಿ ಶಾಸಕರ ಇಂತಹ ಆರೋಪಗಳಿಗೆ ಉತ್ತರ ನೀಡದೆ ನಿರ್ಲಕ್ಷ್ಯ ಮಾಡುತ್ತೇನೆ ಎಂದು ಹೇಳಿದರು.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಬಗ್ಗೆ ನನಗೆ ಅಪಾರ ಗೌರವವಿದೆ. ಇರುವಕ್ಕಿ ರೈತ ಪರ ಹೋರಾಟ ಸಂದರ್ಭದಲ್ಲಿ ಸಂದರ್ಭದಲ್ಲಿ ಲೋಕಾಭಿರಾಮವಾಗಿ ಕಾಗೋಡು ತಿಮ್ಮಪ್ಪ ಅವರಿಗೆ ವಯಸ್ಸಾಗಿದೆ, ಏನು ಗೊತ್ತಾಗುವುದಿಲ್ಲ ಬಿಡಿ ಎಂದು ಹೇಳಿದ್ದೇನೆ. ಕೆಲವರು ಅದನ್ನು ಬೇರೆ ರೀತಿ ತಿರುಚಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಸಂದರ್ಭದಲ್ಲಿ ನಾನು ಮರ ಕಡಿತಲೆ ಮಾಡುತ್ತಿರುವುದು ಸಿಗಂದೂರು ಆಣೆಯಾಗೂ ನನಗೆ ಬೇಸರ ತರುತ್ತಿದೆ ಎಂದು ಹೇಳಿದ್ದೇನೆಯೇ ವಿನಃ ಸಿಗಂದೂರು ಆಣೆಗೂ ಮರ ಕಡಿತಲೆ ಮಾಡಿಸುವುದಿಲ್ಲ ಎಂದು ಎಲ್ಲೂ ಹೇಳಿಲ್ಲ. ಅಭಿವೃದ್ಧಿ ಆಗಬೇಕು ಎನ್ನುವ ಹಿನ್ನೆಲೆಯಲ್ಲಿ ಮರ ಕಡಿತಲೆ ಆದಷ್ಟು ಕಡಿಮೆ ಮಾಡಲು ಎಲ್ಲ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಲೋಕನಾಥ್ ಬಿಳಿಸಿರಿ, ನಗರ ಅಧ್ಯಕ್ಷ ಗಣೇಶಪ್ರಸಾದ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಎಪಿಎಂಸಿ ಅಧ್ಯಕ್ಷ ಚೇತನರಾಜ್ ಕಣ್ಣೂರು, ಪ್ರಮುಖರಾದ ಸಂತೋಷ್ ಶೇಟ್, ಸತೀಶ್ ಕೆ., ರವೀಂದ್ರ ಬಿ.ಟಿ. ಇನ್ನಿತರರು ಹಾಜರಿದ್ದರು.
ನಾನು ಮತ್ತು ನನ್ನ ಕುಟುಂಬಸ್ಥರು ಮರಳು ಸಾಗಾಣಿಕೆದಾರರಿಂದ ಒಂದು ಪೈಸೆ ಕಮೀಷನ್ ಪಡೆದಿಲ್ಲ. ಮರಳು ಸಾಗಾಣಿಕೆದಾರರಿಂದ, ಪೊಲೀಸರಿಂದ ಹಣ ಪಡೆಯುವಷ್ಟು ಸಣ್ಣ ರಾಜಕಾರಣಿ ನಾನಲ್ಲ
– ಹಾಲಪ್ಪ ,ಶಾಸಕ


