Malenadu Mitra
ರಾಜ್ಯಶಿವಮೊಗ್ಗಸಾಗರಸಾಹಿತ್ಯ

ಸಾಹಿತ್ಯ ಸೌಹಾರ್ದ ಸಮಾಜ ಕಟ್ಟಬೇಕು: ಪ್ರೊ.ಎಸ್.ಜಿ.ಸಿದ್ದರಾಮಯ್ಯ
೧೭ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಸಂಪನ್ನ, ಗೋಷ್ಠಿಗಳನ್ನು ಮೌಲಿಕ ವಿಷಯಗಳ ಚರ್ಚೆ

ಶಿವಮೊಗ್ಗ ಜಿಲ್ಲಾ ೧೭ ನೇ ಕನ್ನಡ ಸಾಹಿತ್ಯ ಸಮ್ಮೇಳನ ಗುರುವಾರ ಪ್ರೊ.ಎಸ್.ಜಿ ಸಿದ್ದರಾಮಯ್ಯ ಅವರ ಸಮಾರೋಪನುಡಿಗಳೊಂದಿಗೆ ಸಮಾಪನಗೊಂಡಿತು. ಎರಡು ದಿನಗಳ ಕಾಲ ನಡೆದ ಸಾಹಿತ್ಯ ಸಮ್ಮೇಳನ ಬರೀ ಒಂದು ನುಡಜಾತ್ರೆಯಾಗದೆ ಮಲೆನಾಡಿನ ಪ್ರಚಲಿತ ಸಮಸ್ಯೆಗಳು, ಸಾಹಿತ್ಯ ಸಾಂಸ್ಕೃತಿಕ ಬಿಕ್ಕಟ್ಟುಗಳ ಬಗ್ಗೆ ವಿಚಾರ ಮಂಥನ ನಡೆಯಿತು. ಎಲ್ಲಾ ಗೋಷ್ಠಿಗಳಲ್ಲಿಯೂ ಫಲಪ್ರದ ಚರ್ಚೆ ನಡೆಯಿತು. ಮಲೆನಾಡಿನ ಬೇಗುದಿಗಳು, ಕೈಗಾರಿಕೆ, ಕೃಷಿ ಸೇರಿದಂತೆ ಹಲವು ಸಂಕೀರ್ಣ ಸಂಗತಿಗಳ ಮೇಲೆ ಈ ಸಮ್ಮೇಳನ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಯಿತು.
ಆಸಕ್ತರ ಸಂಖ್ಯೆ ಹೆಚ್ಚಳ:
ಈ ಬಾರಿಯ ಸಮ್ಮೇಳನದಲ್ಲಿ ಸಾಹಿತ್ಯ ಓದುಗರು, ಸಾಹಿತ್ಯಾಸಕ್ತರು ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಶಿಕ್ಷಕ ಸಮುದಾಯ ತಮ್ಮನ್ನು ತೊಡಗಿಸಿಕೊಂಡಿತ್ತು. ಎಲ್ಲಾ ತಾಲೂಕು ಮತ್ತು ಹೋಬಳಿ ಘಟಕಗಳು ಸಮ್ಮೇಳನ ಯಶಸ್ಸಿಗೆ ಶ್ರಮಿಸಿದವು. ಊಟ, ತಿಂಡಿ ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಳ್ಳಲಾಗಿತ್ತು. ಹೊರ ಊರುಗಳಿಂದ ಬಂದವರಿಗೆ ಉತ್ತಮ ಆತಿಥ್ಯದಿಂದಾಗಿ ಕನ್ನಡ ಸಾಹಿತ್ಯ ಸಮ್ಮೇಳನ ಸಹಜ ಮತ್ತು ಸುಂದರವಾಗಿತ್ತು.
ಸಮ್ಮೇಳನದ ಸರ್ವಾಧ್ಯಕ್ಷ ಲಕ್ಷ್ಮಣ್ ಕೊಡಸೆ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಲೆನಾಡಿನ ಪ್ರಚಲಿತ ವಿದ್ಯಮಾನಗಳು, ಕಲೆ, ಸಂಸ್ಕೃತಿ,ಕೃಷಿ, ಕೈಗಾರಿಕೆ ,ಉದ್ಯೋಗ ಹೀಗೆ ಕಡೆ ಬೆಳಕು ಚೆಲ್ಲಿದ್ದಾರೆ. ಇವರ ಭಾಷಣ ಮಲೆನಾಡಿನ ಅಗತ್ಯ ಮತ್ತು ಹಿರಿಮೆಗಳನ್ನು ಕೇಳುಗರಿಗೆ ಅರಿವು ಮೂಡಿಸುವಂತಿತ್ತು.

ಸಮಾರೋಪ ನುಡಿಗಳನ್ನಾಡಿದ ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು, ಸಾಹಿತ್ಯ ಮತ್ತು ಸಾಹಿತ್ಯ ಪರಿಷತ್‌ಗಳು ಸೌಹಾರ್ದ ಸಮಾಜ ಕಟ್ಟುವ ಕೆಲಸವನ್ನು ಮಾಡಬೇಕು. ಇದೇ ಉದ್ದೇಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ ಅನ್ನು ಸ್ಥಾಪಿಸಿದ್ದರು ಎಂದು ಹೇಳಿದರು.

ಸಾಹಿತ್ಯಗ್ರಾಮದಲ್ಲಿ ಗುರುವಾರ ಸಂಪನ್ನಗೊಂಡ ಶಿವಮೊಗ್ಗ ಜಿಲ್ಲಾ ೧೭ ನೇ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, ಇಂದು ಮನಸುಗಳನ್ನು ಕುಡಿಸುವ ಕೆಲಸ ಆಗಬೇಕಿದೆ. ಎಲ್ಲರನ್ನೂ ಒಳಗೊಳ್ಳುವ ಪ್ರಕ್ರಿಯೆಯಿಂದ ಶಾಂತಿ ಹಾಗೂ ಸೌಹಾರ್ದ ಸಮಾಜ ನಿರ್ಮಾಣವಾಗಬೇಕು. ಸಾಹಿತಿಗಳು ಮತ್ತು ಸಾಹಿತ್ಯ ಪರಿಷತ್ ಈ ನೆಲೆಯಲ್ಲಿ ಕೆಲಸ ಮಾಡಬೇಕು. ಶಿವಮೊಗ್ಗ ಜಿಲ್ಲಾ ಸಾಹಿತ್ಯ ಪರಿಷತ್ ಕ್ರಿಯಾಶೀಲ ಮಾತ್ರವಲ್ಲದೆ ಉತ್ತಮ ಗೋಷ್ಠಿಗಳನ್ನು ಆಯೋಜಿಸಿದೆ. ಇಲ್ಲಿ ಉತ್ತಮ ಚರ್ಚೆಗಳು ನಡೆದಿರುವುದು ಆಹ್ವಾನ ಪತ್ರಿಕೆ ನೋಡಿದರೆ ಗೊತ್ತಾಗುತ್ತದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ತೃಪ್ತಿತಂದ ಸಮ್ಮೇಳನ: ಕೊಡಸೆ

ಸಮ್ಮೇಳನದ ಸರ್ವಾಧ್ಯಕ್ಷ ಲಕ್ಷ್ಮಣ್ ಕೊಡಸೆ ಅವರು ಮಾತನಾಡಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗಿಸುವ ಮೂಲಕ ನನ್ನ ಬರಹಗಳಿಗೆ ಗೌರವ ನೀಡಿರುವ ಜಿಲ್ಲಾ ಘಟಕಕ್ಕೆ ನಾನು ಧನ್ಯವಾದ ಸಲ್ಲಿಸುವೆ. ಸಾಹಿತ್ಯ ಸಮ್ಮೇಳನ ನೆಪಮಾತ್ರಕ್ಕೆ ನಡೆಯದೆ, ಅತ್ಯಂತ ಗಂಭೀರವಾಗಿ ನಡೆಯಿತು. ಮಲೆನಾಡಿನ ತಲ್ಲಣಗಳ ಕುರಿತ ವಿಚಾರ ಮಂಡನೆ ಮತ್ತು ಇಲ್ಲಿ ನಡೆದ ಚರ್ಚೆಗಳು ಹೊಸ ಆಯಾಮಗಳನ್ನು ನೀಡಿದವು. ಗೋಷ್ಠಿಯಲ್ಲಿ ಆಯ್ಕೆ ಮಾಡಿಕೊಂಡ ವಿಷಯಗಳು ಮಲೆನಾಡಿನ ಅಗತ್ಯ , ಅದಕ್ಕೆ ಸಮುದಾಯ ಮತ್ತು ಸರಕಾರಗಳು ಏನು ಮಾಡಬೇಕೆಂಬುದರ ಬಗ್ಗೆ ಬೆಳಕು ಚೆಲ್ಲಿರುವುದು ನನಗೆ ಖುಷಿ ನೀಡಿತು ಎಂದು ಕೊಡಸೆ ಹೇಳಿದರು.
ಸಮಾರಂಭದಲ್ಲಿ ಹಲವು ಗಣ್ಯರನ್ನು ಸನ್ಮಾನಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್, ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರಘುರಾಂ ದೇವಾಡಿಗ. ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಜರಿದ್ದರು.

Ad Widget

Related posts

ಈಡಿಗ ಸಮುದಾಯದ 26 ಉಪ ಪಂಗಡಗಳನ್ನು ಒಗ್ಗೂಡಿಸುವ ಅಗತ್ಯವಿದೆ : ಸತ್ಯಜಿತ್‌ ಸುರತ್ಕಲ್

Malenadu Mirror Desk

ಕಂಟೈನ್‌ಮೆಂಟ್ ಜೋನ್‌ಗಳಲ್ಲಿ ಪ್ರತಿನಿತ್ಯ ಸ್ಯಾನಿಟೈಸ್: ಮೇಯರ್

Malenadu Mirror Desk

ಓಡಿ ಹೋಗುವ ಸಂಸ್ಕೃತಿ ಬಿಜೆಪಿಲಿಲ್ಲ, ತಪ್ಪು ಪುನರಾವರ್ತನೆ ಆಗುವುದು ಬೇಡ : ಜನಸ್ವರಾಜ್ ಸಮಾವೇಶದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.