Malenadu Mitra
ರಾಜ್ಯಶಿಕಾರಿಪುರಶಿವಮೊಗ್ಗಸಾಗರ

ರಾಜ್ಯ ಬಿಜೆಪಿಗೆ ಮತ್ತೆ ಶಿವಮೊಗ್ಗವೇ ಶಕ್ತಿ ಕೇಂದ್ರ

ರಾಜ್ಯಬಿಜೆಪಿ ಅಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಅವರು ನೇಮಕವಾಗುತ್ತಲೇ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಒಂದು ರೀತಿಯ ಹುರುಪು ಮೂಡಿದೆ. ಯಡಿಯೂರಪ್ಪ ಅವರು ಚುನಾವಣೆ ರಾಜಕೀಯದಿಂದ ನೇಪಥ್ಯಕ್ಕೆ ಸರಿದ ಮೇಲೆ ಜಿಲ್ಲೆಯಲ್ಲಿ ಬಿಜೆಪಿ ದುರ್ಬಲವಾಗಲಿದೆ ಎಂದೇ ಹೇಳಲಾಗಿತ್ತು. ಆದರೆ ವಿಜಯೇಂದ್ರ ಮೂಲಕ ಶಿವಮೊಗ್ಗ ಜಿಲ್ಲೆ ಮತ್ತೆ ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರವಾಗಿ ತನ್ನ ಹೆಗ್ಗಳಿಕೆ ಉಳಿಸಿಕೊಂಡಿದೆ.

ಜನಸಂಘ ಬಿಜೆಪಿಯಾದ ಬಳಿಕ ರಾಜ್ಯ ಬಿಜೆಪಿಯ ಶಕ್ತಿ ಕೇಂದ್ರ ಶಿವಮೊಗ್ಗವೇ ಆಗಿತ್ತು. ತ್ರಿಮೂರ್ತಿ ನಾಯಕರಾದ ಯಡಿಯೂರಪ್ಪ, ಡಿಹೆಚ್.ಶಂಕರಮೂರ್ತಿ, ಕೆ.ಎಸ್.ಈಶ್ವರಪ್ಪರ ಕಾರಣದಿಂದ ಬಿಜೆಪಿಯ ಪ್ರಮುಖ ಹುದ್ದೆಗೆ ಶಿವಮೊಗ್ಗದ ಪ್ರಾತಿನಿಧ್ಯ ಇರುತಿತ್ತು. ಇದಕ್ಕೆ ಪೂರಕ ಎಂಬಂತೆ ಬಿಜೆಪಿಯ ರಾಜ್ಯಾಧ್ಯಕ್ಷ ಹುದ್ದೆಯನ್ನು ಹೆಚ್ಚು ಕಾಲ ನಿಭಾಯಿಸಿದ ಕೀರ್ತಿ ಶಿವಮೊಗ್ಗ ಬಿಜೆಪಿ ನಾಯಕರಿಗೇ ಸಲ್ಲುತ್ತದೆ.

ಎರಡು ಶಾಸಕ ಸ್ಥಾನದಿಂದ ೧೦೪ ಸ್ಥಾನಗಳನ್ನು ಬಿಜೆಪಿ ಗಳಿಸಿತ್ತು ಎಂದರೆ ಅದಕ್ಕೆ ಶಕ್ತಿ ಕೇಂದ್ರ ಶಿವಮೊಗ್ಗದ ನಾಯಕತ್ವ ಕಾರಣವಾಗಿತ್ತು. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದ ಯಡಿಯೂರಪ್ಪ ಅವರು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರು. ಬಿಜೆಪಿಯ ಹಿಂದುಳಿದ ವರ್ಗದ ನಾಯಕ ಕೆ.ಎಸ್. ಈಶ್ವರಪ್ಪ ಅವರು ಸಚಿವ ಮತ್ತು ಉಪಮುಖ್ಯಮಂತ್ರಿ ಹುದ್ದೆಯನ್ನೂ ಅನುಭವಿಸಿದ್ದರು. ಜನಸಂಘದ ಹುರಿಯಾಳು ಡಿ.ಹೆಚ್.ಶಂಕರ್ ಮೂರ್ತಿ ಬಿಜೆಪಿಯ ಚಿಂತಕರ ಚಾವಡಿಯ ಮುಂದಾಳು. ಮಂತ್ರಿ, ಸಭಾಪತಿಯಂತಹ ಹುದ್ದೆ ಅಲಂಕರಿಸಿದ್ದರು. ಆರಗ ಜ್ಞಾನೇಂದ್ರ, ಯಡಿಯೂರಪ್ಪ, ಈಶ್ವರಪ್ಪ ಅವರುಗಳು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುವ ಮೂಲಕ ಜಿಲ್ಲೆಯನ್ನು ಯಾವತ್ತೂ ಬಿಜೆಪಿಯ ಶಕ್ತಿಕೇಂದ್ರವನ್ನಾಗಿ ಕಾಯ್ದುಕೊಂಡಿದ್ದರು.


ಯಡಿಯೂರಪ್ಪರಿಗೆ ಪಕ್ಷ ಶರಣು

ಬಿಜೆಪಿಯಲ್ಲಿ ಸಂಘಪರಿವಾರ ಮತ್ತು ಲಿಂಗಾಯತ ನಾಯಕತ್ವದ ನಡುವಿನ ಶೀತಲ ಸಮರದ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಸಂತೋಷದಿಂದಲೇ ಅಧಿಕಾರದಿಂದ ನಿರ್ಗಮಿಸುವಂತೆ ಮಾಡಲಾಗಿತ್ತು. ವೀರಶೈವ ಸಮುದಾಯದ ಮಾಸ್ ಲೀಡರ್ ಒಬ್ಬರಿಗೆ ತೋರಿದ ಅಗೌರವದಿಂದ ಪಕ್ಷ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದೆ. ಇದರ ಫಲವಾಗಿ ಸರಕಾರ ಬಂದು ಆರು ತಿಂಗಳಾದರೂ, ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಲು ಆ ಪಕ್ಷಕ್ಕೆ ಸಾಧ್ಯವಾಗಿಲ್ಲ.

ಕಾಂಗ್ರೆಸ್ ಅಲೆ ಮತ್ತು ಗ್ಯಾರಂಟಿಗಳ ಹೊಡೆತಕ್ಕೆ ಮತ್ತಷ್ಟು ದುರ್ಬಲವಾಗಬಾರದು ಎಂಬ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಕುಟುಂಬ ರಾಜಕಾರಣಕ್ಕೆ ಮನ್ನಣೆ ನೀಡಿದ್ದು, ಯಡಿಯೂರಪ್ಪ ಅವರಿಗೆ ಮತ್ತೆ ಶರಣಾಗಿದೆ. ಯಡಿಯೂರಪ್ಪ ಪುತ್ರನಿಗೆ ರಾಜ್ಯ ಬಿಜೆಪಿಯ ಚುಕ್ಕಾಣಿ ನೀಡುವ ಮೂಲಕ ಬಹುಸಂಖ್ಯಾತ ಲಿಂಗಾಯತರ ಓಲೈಕೆಗೆ ಕಮಲ ನಾಯಕತ್ವ ಮುಂದಾಗಿದೆ.
ದಶಕಗಳ ಕಾಲ ಬಿಜೆಪಿಯಲ್ಲಿ ಪಾರಮ್ಯ ಮೆರೆದಿದ್ದ ಶಿವಮೊಗ್ಗ ಜಿಲ್ಲೆ ಮತ್ತೆ ತನ್ನ ಹಿಡಿತವನ್ನು ಗಟ್ಟಿಗೊಳಿಸಿದೆ. ಹಿಂದೆ ಯಡಿಯೂರಪ್ಪರಿಗೆ ಶಂಕರಮೂರ್ತಿ ಮತ್ತು ಈಶ್ವರಪ್ಪ ಹೆಗಲು ಕೊಟ್ಟಿದ್ದರು. ಈಗ ಅವರ ಮಕ್ಕಳೂ ಬಿಜೆಪಿಯಲ್ಲಿ ಬಲವಾಗಿದ್ದು, ವಿಜಯೇಂದ್ರರಿಗೆ ಯಾವ ರೀತಿಯ ಸಾಥ್ ಕೊಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಯುವ ನಾಯಕ ವಿಜಯೇಂದ್ರ ಬಿಜೆಪಿ ಸಾರಥಿಯಾಗಿರುವುದಕ್ಕೆ ಜಿಲ್ಲೆಯ ರಾಜಕೀಯ ನಾಯಕರು ತಮ್ಮದೇ ರೀತಿಯ ವ್ಯಾಖ್ಯಾನ ಮಾಡಿದ್ದು, ಅವರುಗಳ ಅಭಿಪ್ರಾಯ ಇಲ್ಲಿದೆ.

ಒಬ್ಬ ವ್ಯಕ್ತಿಯಿಂದ ಪಕ್ಷ ಬೆಳೆಯಲ್ಲ

ಶಿವಮೊಗ್ಗ:ಯಾರೋ ಒಬ್ಬ ವ್ಯಕ್ತಿಯಿಂದ ಪಕ್ಷ ಬೆಳೆಯಲ್ಲ. ಭಾರತೀಯ ಜನತಾ ಪಾರ್ಟಿ ಯಾರ ಮೇಲೂ ನಿಂತಿಲ್ಲ. ನರೇಂದ್ರ ಮೋದಿ ಕೂಡಾ ಓರ್ವ ಬಿಜೆಪಿಯಲ್ಲಿ ಕಾರ್ಯಕರ್ತರು. ನಾನು ಕೂಡ ಕಾರ್ಯಕರ್ತ. ಎಲ್ಲಾರೂ ಒಟ್ಟಾಗಿ ೨೮ ಸ್ಥಾನ ಗೆಲ್ಲುತ್ತೇವೆ. ಸಾಮೂಹಿಕ ನೇತೃತ್ವದಲ್ಲಿ ಈ ಚುನಾವಣೆ ನಡೆಯಲಿದೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರಗೆ ಶುಭ ಹಾರೈಸಿದರು.ದೇಶದಲ್ಲಿ ಬಿಜೆಪಿ ಒಡೆದ ಮನೆ ಅಂತಿದ್ದಾರೆ ಕಾಂಗ್ರೆಸ್ ನವರು. ಆದರೆ ದೇಶದಲ್ಲಿ ಒಂದೇ ಕಾಂಗ್ರೆಸ್ ಇಲ್ಲ, ಹಲವು ಕಾಂಗ್ರೆಸ್ ಪಕ್ಷಗಳಿವೆ. ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಒಡೆದು ಚೂರು ಚೂರಾಗಿರುವ ಪಕ್ಷ. ಕುಟುಂಬ ರಾಜಕಾರಣದ ಬಗ್ಗೆ ಟ್ವೀಟ್ ಮಾಡುವ ಅಧಿಕಾರ ಕಾಂಗ್ರೆಸ್ ಗೆ ಇದೆಯಾ ಎಂದು ಪ್ರಶ್ನಿಸಿದರು.

ಭಾರತೀಯ ಜನತಾ ಪಾರ್ಟಿಯಲ್ಲಿ ಬಹಳ ತಡವಾಗಿದ್ದರೂ ಕೂಡ ಗಜ ಪ್ರಸವ ರೀತಿಯಲ್ಲಿ ಅಂತೂ ರಾಜ್ಯ ಅಧ್ಯಕ್ಷರ ಆಯ್ಕೆ ಆಗಿದೆ.ಇದರ ಕ್ರೆಡಿಟ್ ಕಾಂಗ್ರೆಸ್‌ಗೆ ಸೇರಬೇಕು. ವಿಜೇಂದ್ರ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವುದು ಬಹಳ ಸಂತೋಷದ ವಿಚಾರ. ಶಿವಮೊಗ್ಗಕ್ಕೆ ಒಂದು ರಾಜ್ಯ ಅಧ್ಯಕ್ಷ ಸ್ಥಾನ ನೀಡಿದ್ದಾರೆ. ಬಿಜೆಪಿಯಲ್ಲಿ ಇದೇ ಮೊದಲ ಬಾರಿ ಅತ್ಯಂತ ಚಿಕ್ಕ ವಯಸ್ಸಿನ ರಾಜ್ಯಾಧ್ಯಕ್ಷರ ನೇಮಕ ಆಗಿದೆ. ವಿಜಯೇಂದ್ರ ಇಡುವಂತಹ ಪ್ರತಿಯೊಂದು ಹೆಜ್ಜೆ ಯಡಿಯೂರಪ್ಪರ ಮೇಲೆ ಪ್ರಭಾವ ಬೀರುತ್ತದೆ.

ಆಯನೂರು ಮಂಜುನಾಥ್, ಕೆಪಿಸಿಸಿ ವಕ್ತಾರ

ಬಿಜೆಪಿಯವರು ವಿಧಾನ ಸಭೆ ಚುನಾವಣೆಯಲ್ಲೂ ವಿಶ್ವಾಸ ಕಳೆದುಕೊಂಡಿದ್ದಾರೆ. ಲೋಕಸಭೆ ಯಲ್ಲೂ ವಿಶ್ವಾಸ ಕಳೆದುಕೊಳ್ಳುತ್ತಾರೆ. ಗ್ಯಾರೆಂಟಿಗಳನ್ನ ಕೊಟ್ಟಿದ್ದೇವೆ. ಲೋಕಸಭೆಯಲ್ಲಿ 28ಸ್ಥಾನ ಗೆಲ್ಲುತ್ತೇವೆ ಅಂತಾ ಬಿಜೆಪಿ ಯವರು ಹೇಳ್ತಾರೆ. ಹಣೆಬರಹ ಬರೆಯುವವರು ತೀರ್ಮಾನ ಮಾಡೋದು ಜನರು. ಈ ಹಿಂದೆ ಸಹ ಬಹಳ ಅಧ್ಯಕ್ಷರು ಬಂದಿದ್ದರು. ಬಹಳ ಭಾಷಣ ಮಾಡಿದ್ದರು ಏನು ಆಗಿಲ್ಲ. ಜನ ತೀರ್ಮಾನ ಮಾಡಿ ಕಳುಹಿಸಿ ದ್ದಾರೆ. ಅಧ್ಯಕ್ಷರು ಬಂದ ತಕ್ಷಣ ಏನು ಆಗಲ್ಲ. ಮೊದಲು ಜನರ ವಿಶ್ವಾಸ ಪಡೆದುಕೊಳ್ಳಬೇಕು. ಬಿಜೆಪಿಯವರು ವಿಧಾನಸಭೆ ಚುನಾವಣೆಯಲ್ಲಿ ವಿಶ್ವಾಸ ಕಳೆದುಕೊಂಡಿದ್ದರು. ಈಗಲೂ ಕಳೆದುಕೊಂಡಿದ್ದಾರೆಬಿಜೆಪಿಯವರು ಕ್ಯಾಪ್ಟನ್ ನೇಮಕ ಮಾಡಿಕೊಂಡಿದ್ದಾರೆ. ಇಷ್ಟು ದಿನ ಅವರಿಗೆ ಮಾತನಾಡಲು ಜನರಿರಲಿಲ್ಲ. ವಿಜಯೇಂದ್ರರಿಗೆ ಒಳ್ಳೆಯದಾಗಲಿ.ವಿಧಾನ ಸಭೆ ಒಳಗೆ ಇನ್ನೂ ಬಿಜೆಪಿ ಕ್ಯಾಪ್ಟನ್‌ಲೆಸ್ ಆಗಿದೆ
ಮಧುಬಂಗಾರಪ್ಪ, ಸಚಿವ

ನಮ್ಮಜಿಲ್ಲೆಯವರೇ ಆದ ಅದರಲ್ಲೂ ಬಿ.ಎಸ್. ಯಡಿಯೂರಪ್ಪನವರ ಪುತ್ರ ಬಿ.ವೈ. ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದ್ದು ನಮಗೆ ಸಂತೋಷವೇ ಆಗಿದೆ. ಬಿಜೆಪಿ ವರಿಷ್ಠರಿಗೆ 6 ತಿಂಗಳ ನಂತರವಾದರೂ ಜ್ಞಾನೋದಯವಾಗಿದೆ.
ಈ ಹುದ್ದೆ ಹೂವಿನ ಹಾಸಿಗೆಯಲ್ಲ. ಮುಳ್ಳಿನ ಹಾಸಿಗೆ. ಪಕ್ಷದ ಘಟಾನುಘಟಿಗಳು ಹಿರಿಯರನ್ನು ಬಿಟ್ಟು ಕಿರಿಯ ರಾದ ವಿಜಯೇಂದ್ರ ಅವರಿಗೆ ನೀಡಲಾಗಿದೆ. ಈಗಾಗಲೇ ಬಿಜೆಪಿಯ ಕೆಲವರಿಗೆ ಅಸಮಾಧಾನವಾಗಿದೆ ಈ ಹಿಂದೆ ಯತ್ನಾಳ್ ಅವರು ಇದೇ ಬಿ.ಎಸ್. ಯಡಿ ಯೂರಪ್ಪ ಹಾಗೂ ವಿಜಯೇಂದ್ರರ ವಿರುದ್ಧ ಆರೋಪ ಹೊರಿಸಿದ್ದರು. ಕೋಟಿಗಟ್ಟಲೆ ಹಣ ಭ್ರಷ್ಟಾಚಾರ ಮಾಡಿದ್ದಾರೆ ಎಂದಿದ್ದರು. ಈಗ ಅವರು ಸುಮ್ಮನಿರಲು ಹೇಗೆ ಸಾಧ್ಯ
ಬೇಳೂರು ಗೋಪಾಲಕೃಷ್ಣ, ಶಾಸಕ ಸಾಗರ

Ad Widget

Related posts

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ: ಬ್ರಹತ್ ಮಾನವ ಸರಪಳಿ ರಚನೆ ಯಶಸ್ವಿ

Malenadu Mirror Desk

ಶಿವಮೊಗ್ಗ ಜಿಲ್ಲೆಯಲ್ಲಿ ತ್ರಿತಕ ದಾಟಿದ ಕೊರೊನ: ಸ್ಮಾರ್ಟ್ ಸಿಟಿಯಲ್ಲೇ ಸೋಂಕು ಹೆಚ್ಚು

Malenadu Mirror Desk

ಡಾ.ಶಿವರಾಮಕೃಷ್ಣ ವಿಚಾರದಲ್ಲಿ ಇದೆಂತಾ ಕುಚೋದ್ಯ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.