Malenadu Mitra
ರಾಜ್ಯಶಿವಮೊಗ್ಗ

ರಾಜ್ಯದ ಎಲ್ಲಾ ಮೆಡಿಕಲ್ ಆಸ್ಪತ್ರೆಗಳಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ,ಕಿದ್ವಾಯಿ ಮಾದರಿ ಕ್ಯಾನ್ಸರ್ ಆಸ್ಪತ್ರೆ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಸಚಿವ ಶರಣಪ್ರಕಾಶ್ ಪಾಟೀಲ್

ಶಿವಮೊಗ್ಗ: ಮುಂದಿನ ಐದು ವರ್ಷಗಳಲ್ಲಿ ರಾಜ್ಯದ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಹೇಳಿದರು.
ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಕಿದ್ವಾಯಿ ಮಾದರಿ ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಆಸ್ಪತ್ರೆಯಿಂದಾಗಿ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗಲಿದೆ. ಆಸ್ಪತ್ರೆ ಸಿವಿಲ್ ಕಾಮಗಾರಿಗೆ ರೂ.೫೦ ಕೋಟಿ ಮಂಜೂರಾಗಿದ್ದು, ೧೨೦ ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣವಾಗಲಿದೆ. ಕೀಮೊ, ರೇಡಿಯೋ ಥೆರಪಿ ಸೇರಿದಂತೆ ಅಗತ್ಯವಾದ ಎಲ್ಲ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.

ಮೆಗ್ಗಾನ್ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ವಿಭಾಗದ ಕಾರ್ಡಿಯಾಲಜಿ ಘಟಕದಲ್ಲಿ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ ಸೇವೆ ನೀಡಲಾಗುತ್ತಿದ್ದು, ಪೂರ್ಣ ಪ್ರಮಾಣದ ಕಾರ್ಯಾಚರಣೆ ಕುರಿತು ಪರಿಶೀಲಿಸಿ, ಅಭಿವೃದ್ದಿಗೆ ಪ್ರಯತ್ನಿಸಲಾಗುವುದು.ಬಡವರ ಮಕ್ಕಳು ಸಹ ಡಾಕ್ಟರ್ ಆಗಬೇಕೆಂಬ ಉದ್ದೇಶದಿಂದ ರಾಜ್ಯಾದ್ಯಂತ ಸರ್ಕಾರಿ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲೇ ಅತ್ಯಧಿಕ ೭೦ ಮೆಡಿಕಲ್ ಕಾಲೇಜುಗಳಿದ್ದು ಇದರಲ್ಲಿ ೨೫ ಸರ್ಕಾರಿ ಕಾಲೇಜುಗಳಾಗಿವೆ. ಪ್ರತಿ ಜಿಲ್ಲೆಗೊಂದು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ವಿಭಾಗಗಳ ಕೇಂದ್ರ ಸ್ಥಾನದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಲಾಗುತ್ತಿದೆ. ಶಿವಮೊಗ್ಗದಲ್ಲಿ ಕ್ಯಾನ್ಸರ್ ಆಸ್ಪತ್ರೆಗೆ ಗುದ್ದಲಿಪೂಜೆ ನೆರವೇರಿದ್ದು, ತುಮಕೂರು,ಮಂಡ್ಯ, ಮೈಸೂರಿನಲ್ಲಿ ಕೆಲಸ ನಡೆಯುತ್ತಿದೆ. ಕಲ್ಬುರ್ಗಿಯಲ್ಲಿ ಸೇವೆ ಆರಂಭಿಸಲಾಗಿದೆ. ಮುಂದಿನ ೫ ರ್ಷಗಳಲ್ಲಿ ಪ್ರತಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಎಂದರು.

ಜನ ಸಾಮಾನ್ಯರು, ಬಡವರಿಗೆ ಉಚಿತ ಮತ್ತು ಗುಣಮಟ್ಟದ ಆರೋಗ್ಯ ನೀಡುವುದು ಸರ್ಕಾರದ ಉದ್ದೇಶವಾಗಿದ್ದು, ಕ್ಯಾನ್ಸರ್ ಆಸ್ಪತ್ರೆ ಕಾಮಗಾರಿಯನ್ನು ೧೮ ತಿಂಗಳ ಒಳಗೆ ಮುಗಿಸಿ ಆಸ್ಪತ್ರೆಗೆ ಅಗತ್ಯವಾದ ಮೂಲಸೌಕರ್ಯ, ಉಪಕರಣ, ತಂತ್ರಜ್ಞಾನದ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಮಾತನಾಡಿ, ಈ ಜಾಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಲು ಇದ್ದ ಕಾನೂನಿನ ತೊಡಕನ್ನು ನಿವಾರಿಸಿದ ಅಡ್ವೊಕೇಟ್ ಜನರಲ್ ಹಾಗೂ ಶ್ರಮಿಸಿದ ಎಲ್ಲರಿಗೆ ಧನ್ಯವಾದಗಳು. ಕ್ಯಾನ್ಸರ್ ಆಸ್ಪತ್ರೆಗೆ ನಿರ್ಮಾಣಕ್ಕೆ ಸರ್ಕಾರ ರೂ.೧೦೦ ಕೋಟಿ ಮಂಜೂರು ಮಾಡಿದ್ದು, ಆದಷ್ಟು ಬೇಗ, ಗುಣಮಟ್ಟದೊಂದಿಗೆ ಆಸ್ಪತ್ರೆ ನಿರ್ಮಾಣಗೊಂಡು ಸೇವೆಗೆ ಸಿದ್ದವಾಗಬೇಕು ಎಂದರು.

ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಕ್ಯಾನ್ಸರ್ ಆಸ್ಪತ್ರೆ ಆಗುತ್ತಿರುವುದು ಒಂದೊಳ್ಳೆ ಕೆಲಸ. ಶೀಘ್ರದಲ್ಲಿ ಕೆಲಸಗಳು ಪೂರ್ಣಗೊಳ್ಳಲಿ. ಸಿಮ್ಸ್ ಕಾಲೇಜಿನಲ್ಲಿ ಅನೇಕ ಸಮಸ್ಯೆಗಳಿದ್ದು ಆಡಳಿತವನ್ನು ಬಿಗಿಗೊಳಿಸಿ ಸಮಸ್ಯೆಗಳನ್ನು ಪರಿಹರಿಸಿದರೆ ಅನುಕೂಲವಾಗುತ್ತದೆ ಎಂದರು.
ಶಾಸಕರಾದ ಸಂಗಮೇಶ್ವರ್ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಆದ್ಯತೆ ನೀಡುತ್ತಿರುವುದು ಅಭಿನಂದನೀಯ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಎಲ್ಲ ವ್ಯವಸ್ಥೆಗಳು ಜಾರಿಗೆ ಬಂದು ಪೂರ್ಣ ಪ್ರಮಾಣದ ಚಿಕಿತ್ಸೆ ಇಲ್ಲಿಯೇ ಆಗುವಂತೆ ಆಗಬೇಕೆಂದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆರ್. ಪ್ರಸನ್ನ ಕುಮಾರ್, ಪಾಲಿಕೆ ಸದಸ್ಯರಾದ ಹೆಚ್.ಸಿ. ಯೋಗೇಶ್, ರೇಖಾ ರಂಗನಾಥ್, ಯಮುನಾ ರಂಗೇಗೌಡ, ಮೆಹಕ್ ಶರೀಫ್, ಜಿಲ್ಲಾಧಿಕಾರಿ ಆರ್. ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಜಿ.ಪಂ ಸಿಇಒ ಸ್ನೇಹಲ್ ಸುಧಾಕರ್ ಲೋಖಂಡೆ, ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿರ್ದೇಶಕ ಡಾ.ಲೋಕೇಶ್, ದೇವೇಂದ್ರಪ್ಪ, ಸಿಮ್ಸ್ ನಿರ್ದೇಶಕ ಡಾ. ವಿರೂಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ತಿಮ್ಮಪ್ಪ ಮತ್ತಿತರರಿದ್ದರು.

ಶಿವಮೊಗ್ಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ಆಗಬೇಕೆಂಬ ಬಹು ದಿನದ ಕನಸು ನನಸಾಗಿದೆ. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಅತಿಯಾದ ಜನಸಂದಣಿ ಇರುತ್ತದೆ. ಎಲ್ಲರಿಗೂ ಅಲ್ಲಿ ಚಿಕಿತ್ಸೆ ಕಷ್ಟ ಆದ್ದರಿಂದ ಶಿವಮೊಗ್ಗ, ಮಂಗಳೂರು, ಹುಬ್ಬಳ್ಳಿ, ಗುಲ್ಬರ್ಗ ಹೀಗೆ ಬೇರೆ ಬೇರೆ ಕಡೆ ಕ್ಯಾನ್ಸರ್ ಆಸ್ಪತ್ರೆ ತೆರೆದರೆ ಬಡವರು ಬದುಕುತ್ತಾರೆ. ಆದಷ್ಟು ಬೇಗ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡು ಬಡವರ ಸೇವೆ ಆರಂಭಿಸಲಿ. ಆಸ್ಪತ್ರೆ ಸ್ಥಾಪನೆಯಂತಹ ಪುಣ್ಯದ ಕೆಲಸ ಮತ್ತೊಂದಿಲ್ಲ.

-ಬೇಳೂರು ಗೋಪಾಲಕೃಷ್ಣ, ಶಾಸಕ

Ad Widget

Related posts

ಉದ್ಯೋಗ, ಕೈಗಾರಿಕೆ ಸ್ಥಾಪನೆ, ಸೌಹಾರ್ದತೆ ನನ್ನ ಆದ್ಯತೆ, ಪತ್ರಿಕಾ ಸಂವಾದದಲ್ಲಿ ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ

Malenadu Mirror Desk

ಡಿಸೆಂಬರ್ ಹೊತ್ತಿಗೆ ವಿಮಾನ ಹಾರಾಟ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣವಾಗುವ ಹಂತಕ್ಕೆ: ಸಂಸದರಿಂದ ಮಾಹಿತಿ

Malenadu Mirror Desk

ಸಾಮಾಜಿಕ,ರಾಜಕೀಯ ಹೋರಾಟ ಮಾಡಿ ಆದರೆ ಯಾರ ಗುಲಾಮರಾಗಬೇಡಿ, ಈಡಿಗ ಸಮಾಜದ ಯುವಕರಿಗೆ ವಿಖ್ಯಾತಾನಂದ ಸ್ವಾಮೀಜಿ ಕಿವಿಮಾತು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.