ತುಂಗಾ ತೀರದ ಪ್ರಸಿದ್ದ ಆನೆ ಬಿಡಾರ ಶಿವಮೊಗ್ಗ ಸಮೀಪದ ಸಕ್ರೆಬೈಲ್ ಅತಿಥಿಯೊಬ್ಬರು ಬಂದಿದ್ದಾರೆ. ಚಿತ್ರದುರ್ಗದ ಮುರುಘಾಮಠದಿಂದ ಬಂದಿರುವ ಹೆಣ್ಣಾನೆ ಕನೇನಿ(೨೫) ಬಂದಿರುವುದು ಹನಿಮೂನ್‌ಗೆ ಎಂದರೆ ನೀವು ನಂಬಲಿಕ್ಕಿಲ್ಲ. ಮಠದಲ್ಲಿ ತಿಂದುಂಡು ಸುಖವಾಗಿ ಬೆಳೆದಿರುವ ಆನೆಗೀಗ ಸಮಪ್ರಾಯ. ಮಠದಲ್ಲಿ ಆನೆ ಸಂತಾನ ವೃದ್ಧಿಗೆ ಚಿಂತನೆ ನಡೆಸಿದ ಆಡಳಿತ ಮಂಡಳಿ ಇದಕ್ಕಾಗಿ ಅರಣ್ಯ ಇಲಾಖೆ ವನ್ಯಜೀವಿ ವಿಭಾಗಕ್ಕೆ ಮನವಿ ಸಲ್ಲಿಸಿತ್ತು. ಇಲಾಖೆ ಕೂಡಾ ಕನೇನಿ ಹನಿಮೂನ್‌ಗೆ ಗ್ರೀನ್‌ಸಿಗ್ನಲ್ ನೀಡಿದೆ.
ಅನುಮತಿ ಪಡೆದ ಮುರುಘಾಮಠದ ಆಡಳಿತ ಮಂಡಳಿಯು ಹೆಣ್ಣಾನೆ ಕನೇನಿಯನ್ನು ಸಂಭ್ರಮದಿಂದ ಸಕ್ರೆಬೈಲ್ ಆನೆ ಬಿಡಾರಕ್ಕೆ ಕಳಿಸಿಕೊಟ್ಟಿದ್ದಾರೆ. ಮೂರರಿಂದ ನಾಲ್ಕು ತಿಂಗಳ ಅವಧಿಯಲ್ಲಿ ಆನೆ ಬಿಡಾರದಲ್ಲಿ ವಾಸ್ತವ್ಯ ಹೂಡಲಿರುವ ಕನೇನಿ ಇಲ್ಲಿ ಡೇಟಿಂಗ್ ಮೂಲಕ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಹನಿಮೂನ್ ಮೂಡ್‌ಗೆ ಹೊಂದಾಣಿಕೆ ಆಗಬೇಕಿದೆ.
ಮಠದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರು ಕನೇನಿಗೆ ಬಾಳೆಹಣ್ಣು, ಬೆಲ್ಲ, ಕಬ್ಬನ್ನು ತಿನ್ನಿಸುವುದರ ಮೂಲಕ ಬೀಳ್ಕೊಟ್ಟರು. ಈ ಸಂದರ್ಭದಲ್ಲಿ ಸಹಾಯಕ ಅರಣ್ಯಾಧಿಕಾರಿ ಮಂಜುನಾಥ್, ಶಿವಮೊಗ್ಗ ವನ್ಯಜೀವಿ ವಿಭಾಗದ ವೈದ್ಯರಾದ ಡಾ. ವಿನಯ್, ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಕೃಷ್ಣಪ್ಪ, ಡಾ. ಪ್ರಸನ್ನಕುಮಾರ್, ಡಾ. ಕುಮಾರ್, ಡಾ. ತಿಪ್ಪೇಸ್ವಾಮಿ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್‍ಯದರ್ಶಿ ಎ.ಜೆ.ಪರಮಶಿವಯ್ಯ, ಪಟೇಲ್ ಶಿವಕುಮಾರ್ ಮತ್ತಿತರರು ಇದ್ದರು.

ಕನೇನಿ ಬಾಯ್ ಫ್ರೆಂಡ್ ಯಾರು ?
ಸಂತಾನಯೋಗ್ಯ ವಯಸ್ಸಿಗೆ ಬಂದಿರುವ ಕನೇನಿಯನ್ನು ಬಿಡಾರಕ್ಕೆ ಕರೆತಂದು ಮೊದಲು ಕ್ವಾರಂಟೈನ್‌ನಲ್ಲಿ ಇಡಲಾಗುತ್ತೆ. ನಮ್ಮಲ್ಲಿ ಮಣಿಕಂಠ ಹಾಗೂ ಗಣೇಶ ಮಸ್ತಿಮೂಡ್‌ನಲ್ಲಿವೆ. ಆದರೆ ಆನೆಗಳು ಹೊರಗಿನಿಂದ ಬಂದ ಆನೆಗಳನ್ನು ಏಕಾಏಕಿ ಒಪ್ಪಿಕೊಳ್ಳುವುದಿಲ್ಲ. ಒಂದು ತಿಂಗಳು ಹೊಂದಾಣಿಕೆಗೆ ಬೇಕಾಗುತ್ತದೆ. ಪರಸ್ಪರ ಸಮ್ಮತಿಯ ಮೇಲೆ ಆನೆಗಳು ಒಂದಾಗುತ್ತವೆ. ಹೆಣ್ಣಾನೆ ಸಹಕರಿಸದಿದ್ದಲ್ಲಿ ಅದರ ಮೇಲೆ ಗಂಡಾನೆ ದಾಳಿಮಾಡುವ ಸಾಧ್ಯತೆಯೂ ಇರುತ್ತದೆ.ಸಂಗಾತಿಗಾಗಿ ಗಂಡಾನೆಗಳಲ್ಲಿಪೈಪೋಟಿ ಏರ್ಪಡುವ ಸಾದ್ಯತೆಯೂ ಇರುತ್ತದೆ.ಮೊದಲು ಹೆಣ್ಣುಹಾಗೂ ಗಂಡಾನೆ ನಡವಳಿಕೆಯನ್ನುಗಮನಿಸಿ ನಾವು ಮುಂದುವರಿಯಬೇಕು ಎನ್ನುತ್ತಾರೆ ಸಕ್ರೆಬೈ ಲ್ ಆನೆ ಬಿಡಾರದ ವನ್ಯಜೀವಿ ವಿಭಾಗದ ವೈದ್ಯರಾದ ಡಾ.ವಿನಯ್.


