Malenadu Mitra
ರಾಜ್ಯಶಿವಮೊಗ್ಗ

ಕ್ಷಮಿಸಿ…ನನ್ನಲ್ಲಿ ಬೆಡ್‍ಗಳಿಲ್ಲ: ಮೆಗ್ಗಾನ್ ಆಸ್ಪತ್ರೆ

ಬೆಡ್‍ ಹೆಚ್ಚಿಸಿದರೂ ಆರೋಗ್ಯ ಸೇವಕರು, ಜೀವಾನಿಲವಿಲ್ಲ

ಶಿವಮೊಗ್ಗ ಜಿಲ್ಲೆಯ ಬಡ ಮಧ್ಯಮ ವರ್ಗದವರಿಗೆ ಆಶ್ರಯವಾಗಿರುವ ಮೆಗ್ಗಾನ್ ಬೋಧನಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರು ತುಂಬಿ ತುಳುಕುತಿದ್ದು, ಎಲ್ಲಾ 450 ಬೆಡ್‍ಗಳೂ ಫುಲ್ ಆಗಿರುವುದರಿಂದ ಸೋಂಕಿತರ ಸಂಖ್ಯೆ ಹೀಗೆ ಹೆಚ್ಚಾದರೆ ಮುಂದೇನು ಅನ್ನುವ ಪ್ರಶ್ನೆ ಆತಂಕ ಹುಟ್ಟಿಸುತ್ತದೆ.
ಮೆಗ್ಗಾನ್‍ನಲ್ಲಿ ಪ್ರಸ್ತುತ 450 ಕೋವಿಡ್ ಬೆಡ್‍ಗಳಿವೆ. ಇಲ್ಲಿನ ನುರಿತ ವೈದ್ಯರು ಮತ್ತು ಸಿಬ್ಬಂದಿಯಿಂದ ಉತ್ತಮ ಆರೈಕೆ ಸಿಗುತ್ತಿದೆ ಎಂಬ ಮಾಹಿತಿ ಇದೆ. ಈ ಕಾರಣದಿಂದಾಗಿಯೇ ಹೊರಜಿಲ್ಲೆಗಳಿಂದ ಹೆಚ್ಚಿನ ರೋಗಿಗಳು ಇಲ್ಲಿ ದಾಖಲಾಗುತ್ತಿದ್ದಾರೆ. ಜನಪ್ರತಿನಿಧಿಗಳ ಶಿಫಾರಸು ಕೂಡಾ ಇಲ್ಲಿ ಕೆಲಸ ಮಾಡುತ್ತಿದೆ.
ಕಳೆದರ ಒಂದು ವಾರದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲಿ ಎಲ್ಲರೂ ಆಸ್ಪತ್ರೆಗೆ ದಾಖಲಾಗುತ್ತಿಲ್ಲವಾದರೂ ಹೊರಗಿನ ಜಿಲ್ಲೆಯವರೂ ಸೇರಿದಂತೆ ಆಸ್ಪತ್ರೆ ಮೇಲೆ ಒತ್ತಡ ಹೆಚ್ಚಾಗಿದೆ ಬುಧವಾರದ ಹೊತ್ತಿಗೆ ಎಲ್ಲಾ 450 ಬೆಡ್‍ಗಳು ಭರ್ತಿಯಾಗಿದ್ದು, ಸೀರಿಯಸ್ ಪೇಶೆಂಟ್‍ಗಳು ಬಂದರೆ ಏನು ಮಾಡುವುದು ಎಂಬ ಪ್ರಶ್ನೆ ಆಸ್ಪತ್ರೆ ಆಡಳಿತ ಮಂಡಳಿಗೇ ಎದುರಾಗಿದೆ.

ಖಾಸಗಿ ಆಸ್ಪತ್ರೆಗಳು ಹೌಸ್ ಭರ್ತಿ

ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರದ ನಿರ್ದೇಶನದಂತೆ ಶೇ 50 ಬೆಡ್‍ಗಳನ್ನು ಮೀಸಲಿಟ್ಟಿದ್ದು, ಅಲ್ಲಿಯೂ ಎಲ್ಲಾ ಬೆಡ್‍ಗಳಲ್ಲೂ ರೋಗಿಗಳಿದ್ದಾರೆ ಎಂದು ಹೇಳಲಾಗಿದೆ. ಶಿವಮೊಗ್ಗ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಸರಿಯಾಗಿ ಕೋವಿಡ್ ಮಾರ್ಗಸೂಚಿ ಅನುಸರಿಸದ ಕಾರಣ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಮದುವೆಗೆ ಹೆಚ್ಚು ಜನ ಸೇರಬಾರದೆಂದು ಸೂಚನೆಯಿದ್ದರೂ ಅಲ್ಲಿನ ಜನ ಕಂಟ್ರೋಲ್ ಮಾಡಲು ಆಗುತ್ತಿಲ್ಲ. ಈ ಕಾರಣದಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಹಜವಾಗಿಯೇ ಮೆಗ್ಗಾನ್‍ನಲ್ಲಿ ಒಳರೋಗಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ.
ನಿಮಿಷಕ್ಕೊಂದು ಫೋನ್:
ಪ್ರಸ್ತುತ ಮೆಗ್ಗಾನ್ ಆಸ್ಪತ್ರೆಗೆ ಬೆಡ್‍ಗಾಗಿ ಬೇಡಿಕೆ ಇಟ್ಟು ಪ್ರತಿನಿಮಿಷಕ್ಕೊಂದು ಕಾಲ್ ಬರುತ್ತಿವೆ. ಈ ಬೇಡಿಕೆ ನೋಡಿ ಕಂಗಾಲಾಗಿರುವ ಸಿಬ್ಬಂದಿ ಕೊರೊನ ಕರಾಳತೆಯನ್ನು ನೋಡಿ ಬೆಚ್ಚಿದ್ದಾರೆ.

ಹೊಸ ಸಿಬ್ಬಂದಿ ಬರುತ್ತಿಲ್ಲ

ಮೆಗ್ಗಾನ್ ಆಸ್ಪತ್ರೆಯಲ್ಲಿ ಇನ್ನೂಹೆಚ್ಚಿನ ಬೆಡ್ ವ್ಯವಸ್ಥೆ ಮಾಡಲು ಸಾದ್ಯವಿದೆ. ಆದರೆ ಕೆಲಸ ಮಾಡಲು ಸಿಬ್ಬಂದಿ ಇಲ್ಲ ಎನ್ನುತ್ತಾರೆ ಅಲ್ಲಿನ ಹಿರಿಯ ಅಧಿಕಾರಿಗಳು. ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ನರ್ಸ್ ಮತ್ತು ಡಿ.ಗ್ರೂಪ್ ಉದ್ಯೋಗಿಗಳಿಗೆ ಅರ್ಜಿ ಆಹ್ವಾನಿಸಿದರೂ, ಯಾರೂ ಅರ್ಜಿ ಸಲ್ಲಿಸುತ್ತಿಲ್ಲ. ಹೊಸ ನೇಮಕಾತಿ ಆಗದ ಹೊರತು ಆಸ್ಪತ್ರೆಯಲ್ಲಿ ಹೆಚ್ಚುವರಿ ಬೆಡ್ ವ್ಯವಸ್ಥೆ ಮಾಡಲು ಸಾಧ್ಯವಾಗುವುದಿಲ್ಲ. ಈಗ ಇರುವ ಸಿಬ್ಬಂದಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಿದ್ದು, ಮುಂದಿನ ದಿನಗಳು ಮತ್ತಷ್ಟು ದುಬಾರಿಯಾಗುವ ಸಾಧ್ಯತೆಯಿದೆ

ಜೀವಾನಿಲ ಕೊರತೆ ?

ಶಿವಮೊಗ್ಗದಲ್ಲಿ ಕೋವಿಡ್ ಬೆಡ್ ಹೆಚ್ಚಿಸುವ ಅವಕಾಶ ಇದೆಯಾದರೂ, ಅದಕ್ಕೆ ಅಗತ್ಯವಿರುವ ಆಮ್ಲಜನಕ ಪೂರೈಕೆ ಕಷ್ಟ ಸಾಧ್ಯವಾಗಲಿದೆ. ಪ್ರಸ್ತುತ ಎರಡು ದಿನಕ್ಕೊಮ್ಮೆ ಬಳ್ಳಾರಿಯಿಂದ ಆಮ್ಲಜನಕ ಪೂರೈಕೆಯಾಗುತ್ತಿದೆ. ಬೆಡ್‍ಗಳ ಸಂಖ್ಯೆ ಹೆಚ್ಚಿಸಿದರೂ, ಸಿಬ್ಬಂದಿ ಮತ್ತು ಆಮ್ಲಜನಕ ಕೊರತೆಯಾಗಲಿದೆ. ಇದಕ್ಕೆ ಪೂರಕ ಎಂಬಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಕೊರತೆ ಸಾಕಷ್ಟಿದೆ ಆದರೂ ಮ್ಯಾನೇಜ್ ಮಾಡುತ್ತಿದ್ದೇವೆ. ಈತನಕದ ಪರಿಸ್ಥಿತಿ ನಿಭಾಯಿಸಿದ್ದೇವೆ. ಆದರೆ ಮುಂದೆ ಸೋಂಕಿತರ ಸಂಖ್ಯೆ ಕಡಿಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದಿದ್ದಾರೆ. ಸಚಿವರ ಈ ಮಾತಿನಲ್ಲಿಯೇ ಮುಂದಿನ ದಿನಗಳ ಭೀಕರತೆ ಅಡಗಿದೆ ಎನ್ನಬಹುದು.

Ad Widget

Related posts

ಶಿವಮೊಗ್ಗದಲ್ಲಿ ಗರ್ಭಿಣಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

Malenadu Mirror Desk

ನ್ಯಾಯಾಧೀಶರ ವಜಾಕ್ಕೆ ಆಗ್ರಹಿಸಿ ವಿಧಾನ ಸೌಧ ಚಲೊ

Malenadu Mirror Desk

ಕೇಂದ್ರ,ರಾಜ್ಯ ಸರಕಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.