Malenadu Mitra
ರಾಜ್ಯಶಿವಮೊಗ್ಗ

ಶಿಡ್ಡಿಹಳ್ಳಿ ಅರಣ್ಯ ವಾಸಿಗಳ ಮೇಲಿನ ಪ್ರಕರಣ ಹಿಂಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ

ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿಸಲ್ಲಿಸಿದ ಸಾಗುವಳಿದಾರರ ಜಮೀನನ್ನು ಸಕ್ರಮಗೊಳಿಸಬೇಕು, ಸಾಗುವಳಿದಾರರ ಮೇಲೆ ದಾಖಲಿಸಿದ ಪ್ರಕರಣವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಕರಾಳ ದಿನವನ್ನಾಗಿ ಆಚರಿಸಲಾಗುವುದು ಎಂದು ಮಲೆನಾಡು ರೈತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ತೀ.ನ. ಶ್ರೀನಿವಾಸ ಎಚ್ಚರಿಸಿದರು.
ಸೊರಬ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಶಿಡ್ಡಿಹಳ್ಳಿ ಅರಣ್ಯ ವಾಸಿಗಳ ಮೇಲೆ ದಾಖಲಿಸಿದ ಪ್ರಕರಣ ಹಿಂಪಡೆಯುವಂತೆ ಆಗ್ರಹಿಸಿ ಮಲೆನಾಡು ರೈತರ ಹೋರಾಟ ಸಮಿತಿಯಿಂದ ಸೋಮವಾರ ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರದ ಅರಣ್ಯ ಹಕ್ಕು ಕಾಯ್ದೆಯಂತೆ ರೈತರು ಅರ್ಜಿ ಸಲ್ಲಿಸಿದ್ದರೂ ಸಹ, ಅರಣ್ಯ ಇಲಾಖೆಯ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸಲು ನೋಟೀಸ್ ಜಾರಿ ಮಾಡಿರುವುದು ಖಂಡನೀಯವಾಗಿದೆ. ಕಾಯ್ದೆಯಲ್ಲಿ ಅರಣ್ಯ ಭೂಮಿ ಸಾಗುವಳಿ ಮಾಡಿರುವ ಭೂ ರಹಿತರು, ಬಡವರು, ಪರಿಷ್ಟ ಜಾತಿಯವರಿಗೆ ೩ ಎಕರೆ ಭೂಮಿ ಮಂಜೂರು ಮಾಡಬೇಕು ಎಂದಿದೆ. ಪಾರಂಪರಿಕ ಅರಣ್ಯ ವಾಸಿ ಮಾನ್ಯತೆ ಮತ್ತು ಪರಿಶೀಲನಾ ಪ್ರಕ್ರಿಯೆ ಪೂರ್ಣವಾಗುವವರೆಗೆ ಅವರ ಅಧಿಭೋಗದಲ್ಲಿರುವ ಅರಣ್ಯ ಜಮೀನಲ್ಲಿ ಸಾಗುವಳಿ ಮಾಡುತ್ತಿರುವವರನ್ನು ಒಕ್ಕಲೆಬ್ಬಿಸುವಂತಿಲ್ಲ ಎಂದು ಕಾಯ್ದೆಯಲ್ಲಿದೆ. ಆದರೂ ನೋಟೀಸ್ ನೀಡಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ ಎಂದರು.

ಗ್ರಾಮದ ಸರ್ವೆ ನಂ. ೧೧ರಲ್ಲಿ ಸಾಗುವಳಿ ಹಾಗೂ ವಾಸ ಮಾಡುತ್ತಿರುವ ೬೯ ಜನ ಸಾಗುವಳಿದಾರರು ಪ್ರತಿಯೊಬ್ಬರೂ ಅರಣ್ಯ ಹಕ್ಕು ಕಾಯ್ದೆಯಡಿ ಭೂ ಮಂಜೂರಾತಿಗಾಗಿ ಅರ್ಜಿಸಲ್ಲಿಸಿದ್ದು, ಸರಕಾರದ ಮಟ್ಟದಲ್ಲಿ ಪ್ರಕ್ರಿಯೆಯಲ್ಲಿದೆ. ಆದರೂ, ಅರಣ್ಯ ಇಲಾಖೆಯಿಂದ ಮೂರು ಬಾರಿ ನೋಟೀಸ್ ನೀಡಲಾಗಿದೆ. ಸುಪ್ರೀಂ ಕೋರ್ಟ್ ನೈಸರ್ಗಿಕ ನ್ಯಾಯ ಒದಗಿಸಬೇಕು ಎಂದಿದೆ. ಆದರೂ, ಸಹ ಅಧಿಕಾರಿಗಳು ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದಾರೆ. ರೈತರು ಇದೇ ಭೂಮಿಯಲ್ಲಿ ಮನೆ ಕಟ್ಟಿಕೊಂಡು, ಸಾಗುವಳಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಸಾಗುವಳಿ ಜಮೀನನನ್ನು ಸಕ್ರಮಗೊಳಿಸಿ ಮಂಜೂರು ಮಾಡಬೇಕು. ಅರಣ್ಯ ವಾಸಿಗಳ ಮೇಲೆ ದಾಖಲಿಸಿರುವ ಪ್ರಕರಣವನ್ನು ಆ.೧೪ರೊಳಗೆ ಹಿಂಪಡೆಯಬೇಕು. ಇಲ್ಲವಾದಲ್ಲಿ ಸ್ವಾತಂತ್ರ್ಯ ದಿನವನ್ನು ಕರಾಳದಿನವನ್ನಾಗಿ ಸಾಗುವಳಿದಾರರು ಆಚರಿಸಲು ನಿರ್ಧರಿಸಿದ್ದಾರೆ ಎಂದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ವೃತ್ತದಿಂದ ತಾಲೂಕು ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಮಿತಿಯ ತಾಲೂಕು ಅಧ್ಯಕ್ಷ ಪರಶುರಾಮ ಶಿಡ್ಡಿಹಳ್ಳಿ, ಕಾರ್ಯದರ್ಶಿ ಡಿ.ಸಿ.ಅಶೋಕ್, ಮಹದೇವಪ್ಪ, ಬಸವರಾಜಪ್ಪ, ಅಜೀಜ್ ಸಾಬ್, ರಶೀದ್ ಸಾಬ್, ಆರ್.ಸಿ. ದೇವರಾಜ, ವೀರೇಶಯ್ಯ, ಅಹಮ್ಮದ್ ಶರೀಫ್, ರವಿ ಕುಪ್ಪಗಡ್ಡೆ, ಕಮಲಮ್ಮ, ಫಕೀರಮ್ಮ, ಗೌರಮ್ಮ, ಗಂಗಮ್ಮ ಮತ್ತಿತರರಿದ್ದರು.

ಕೇಂದ್ರ ಸರಕಾರದ ಅರಣ್ಯ ಹಕ್ಕು ಕಾಯ್ದೆಯಂತೆ ರೈತರು ಅರ್ಜಿ ಸಲ್ಲಿಸಿದ್ದರೂ ಸಹ, ಅರಣ್ಯ ಇಲಾಖೆಯ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸಲು ನೋಟೀಸ್ ಜಾರಿ ಮಾಡಿರುವುದು ಖಂಡನೀಯವಾಗಿದೆ

ತೀ.ನ. ಶ್ರೀನಿವಾಸ


Ad Widget

Related posts

ಮೆಗ್ಗಾನ್ ಅವ್ಯವಸ್ಥೆ ಸರಿಪಡಿಸಲು ಪ್ರಗತಿಪರರ ಆಗ್ರಹ

Malenadu Mirror Desk

ಬೆಂಗಳೂರಿನಲ್ಲಿ ಬ್ರಿಟನ್ ವೈರಸ್

Malenadu Mirror Desk

ಹಿಜಾಬ್ ತೀರ್ಪು ಹಿನ್ನೆಲೆ : ಜಿಲ್ಲಾದ್ಯಂತ ಶಾಲಾ ಕಾಲೇಜು ರಜೆ, 144 ನಿಷೇಧಾಜ್ಞೆ ಜಾರಿ, ಶಾಂತಿ ಸುವ್ಯವಸ್ಥೆ ಕಾಪಾಡಲು ಜಿಲ್ಲಾಧಿಕಾರಿ ಮನವಿ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.