Malenadu Mitra
ರಾಜ್ಯ ಶಿವಮೊಗ್ಗ

ಕನ್ನಡದಲ್ಲಿ ತಾಂತ್ರಿಕ ಶಿಕ್ಷಣದ ಕಲಿಕೆಗೆ ವಿಟಿಯು ಹೆಚ್ಚು ಒತ್ತು ನೀಡುತ್ತಿದೆ: ಉಪಕುಲಪತಿ ಪ್ರೊ.ಎಸ್.ವಿದ್ಯಾಶಂಕರ್

ಶಿವಮೊಗ್ಗ :ಇಂಗ್ಲೀಷ್ ಮೂಲಕ ತಾಂತ್ರಿಕ ಶಿಕ್ಷಣ ಸಾಧ್ಯ ಎಂಬ ತಪ್ಪು ಕಲ್ಪನೆ ಹೋಗಲಾಡಿಸಿ, ಪ್ರಾದೇಶಿಕ ಭಾಷೆಯಾದ ಕನ್ನಡದಲ್ಲಿ ತಾಂತ್ರಿಕ ಶಿಕ್ಷಣದ ಕಲಿಕೆಗೆ ವಿಟಿಯು ಹೆಚ್ಚು ಒತ್ತು ನೀಡುತ್ತಿದೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಉಪಕುಲಪತಿಗಳಾದ ಪ್ರೊ.ಎಸ್.ವಿದ್ಯಾಶಂಕರ್ ಹೇಳಿದರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವದ ಪ್ರಯುಕ್ತ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಕ್ರಿಕೆಟ್ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಉಪನ್ಯಾಸ ಸರಣೆಯ ಹತ್ತನೇ ಆವೃತ್ತಿಯಲ್ಲಿ ’ತಾಂತ್ರಿಕ ವಿದ್ಯಾಭ್ಯಾಸದ : ಕವಲುದಾರಿಯಲ್ಲಿ’ ಕುರಿತು ವಿಶೇಷ ಉಪನ್ಯಾಸ ನೀಡಿದರು.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಟಾನಗೊಂಡ ನಂತರ ವಿಶ್ವವಿದ್ಯಾಲಯದಲ್ಲಿ ಅನೇಕ ಬದಲಾವಣೆಗಳನ್ನು ತಂದಿದ್ದೇವೆ. ಪ್ರಾದೇಶಿಕ ಭಾಷೆಗಳಿಂದ ಪರಿಣಾಮಕಾರಿ ಕಲಿಕೆ ಸಾಧ್ಯ ಎಂದು ಎನ್‌ಇಪಿ ಪ್ರತಿಪಾದಿಸಲಿದ್ದು, ಅಂತಹ ಪ್ರಾದೇಶಿಕ ಭಾಷಾ ಕಲಿಕಾ ವೇದಿಕೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುತ್ತಿದೆ.
ವಿದ್ಯಾರ್ಥಿಗಳು ಸಂಸ್ಥೆಯ ಮುಖವಾಣಿ. ನಿರಂತರ ಕಲಿಕೆ ನಿಮ್ಮದಾಗಬೇಕು. ವಿದ್ಯಾರ್ಥಿಗಳನ್ನು ಬಲವಂತವಾಗಿ ಕಾರ್ಯಕ್ರಮಗಳಿಗೆ ಕೂರಿಸುವ ಅನಿವಾರ್ಯತೆಯಿದೆ. ಅಂತಹ ಸಂಕುಚಿತತೆಯಿಂದ ಹೊರಬನ್ನಿ. ಹೊಸತನವನ್ನು ಕಲಿಯುವ ಯಾವುದೇ ಅವಕಾಶಗಳನ್ನು ಬಳಸಿಕೊಳ್ಳಿ. ಆಧುನಿಕ ಕಾಲಘಟ್ಟದಲ್ಲಿ ಅನೇಕ ಅಧ್ಯಯನ ಸಂಪನ್ಮೂಲಗಳ ಅವಕಾಶ ಹೆಚ್ಚಿದೆ. ಗೂಗಲ್ ಸರ್ಚ್, ಎನ್.ಪಿ.ಟಿ.ಎಲ್ ನಂತಹ ವೇದಿಕೆಗಳು ಇಡೀ ಶಿಕ್ಷಣ ನೀತಿಯನ್ನು ಬದಲಾಯಿಸುತ್ತಿದೆ ಎಂದರು.

ಉದ್ಯೋಗ ನೀಡುವ ಸಂಸ್ಥೆಗಳು ಹಾಗೂ ವಿಟಿಯು ನಡುವೆ ಅನೇಕ ಒಡಂಬಡಿಕೆಗಳು ಆಗುತ್ತಿದೆ. ಪ್ರತಿ ವರ್ಷ ಪಠ್ಯಕ್ರಮಗಳು ಬದಲಾಗಲಿದೆ. ಇದರಿಂದ ಕೌಶಲ್ಯತೆಯ ಜೊತೆಗೆ ಇಂಡಸ್ಟ್ರಿಗಳ ಅವಶ್ಯಕತೆಗೆ ಅನುಗುಣವಾಗಿ ಕಲಿಕೆ ಮುಂದುವರಿಯಲಿದೆ. ಅದಕ್ಕಾಗಿಯೇ ಡಿಸೈನ್ ಥಿಂಕಿಂಗ್ ನಂತಹ ವಿಷಯಗಳನ್ನು ಪರಿಚಯಿಸಲಾಗಿದೆ.
ಅಮೃತಮಹೋತ್ಸವದ ಸಂಭ್ರಮದಲ್ಲಿರುವ ಎನ್‌ಇಎಸ್ ಸಂಸ್ಥೆ ಇನ್ನಷ್ಟು ದೊಡ್ಡದಾಗಿ ಬೆಳೆಯಲು ಕಾರಣರಾದ ನಿಸ್ವಾರ್ಥ ಸ್ವಾತಂತ್ರ್ಯ ಹೋರಾಟಗಾರರು ಸದಾ ಸ್ಮರಣೀಯ. ಅಂತಹ ವ್ಯಕ್ತಿತ್ವಗಳು ಯುವ ಸಮೂಹಕ್ಕೆ ಮಾದರಿ ಎಂದರು.

ಸ್ನಾತ್ತಕೋತ್ತರ ಪದವಿಗೆ ಬೇಡಿಕೆಗಳು ಹೆಚ್ಚಾಗುತ್ತಿದೆ. ಎಂಬಿಎ ಎಂಸಿಎ ಕೋರ್ಸುಗಳು ವಿದ್ಯಾರ್ಥಿಗಳನ್ನು ಹೆಚ್ಚು ಸೆಳೆಯುತ್ತಿದೆ. ಸ್ನಾತ್ತಕೋತ್ತರ ಪದವಿ, ಸಂಶೋಧನೆಗಳ ಬಗೆಗೆ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ತೋರಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಆಧುನಿಕ ತಾಂತ್ರಿಕ ಬದಲಾವಣೆಯಲ್ಲಿ ಸೆಮಿಕಂಡಕ್ಟರ್ ಪ್ರಮುಖ ಪಾತ್ರ ವಹಿಸಲಿದ್ದು, ಇದನ್ನು ಅರಿತು ವಿಶ್ವವಿದ್ಯಾಲಯ ಮುಂದಿನ ದಿನಗಳಲ್ಲಿ ಬಿ.ಇ ಸೆಮಿಕಂಡಕ್ಟರ್ ಕೋರ್ಸ್ ಪ್ರಾರಂಭಿಸಲಾಗುವುದು ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ ಮಾತನಾಡಿ, ತಾಂತ್ರಿಕ ಶಿಕ್ಷಣದಲ್ಲಿ ಅನೇಕ ಕವಲುದಾರಿಗಳಿವೆ. ಪದವಿ ಮುಗಿಸಿದ ವಿದ್ಯಾರ್ಥಿಗಳಲ್ಲಿ, ಉದ್ಯೋಗ ನೀಡುವ ಸಂಸ್ಥೆಗಳ ಅವಶ್ಯಕತೆಗೆ ತಕ್ಕಂತಹ ಕೌಶಲ್ಯತೆಯನ್ನು ಹೊಂದದೇ ಇರುವ ದೊಡ್ಡ ಕೊರತೆಯಿದೆ. ಜೊತೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ಕಲಿಕೆಯಲ್ಲಿ ಎದುರಾಗುತ್ತಿರುವ ಕೊರತೆಗಳನ್ನು ಹೊಗಲಾಡಿಸಿ, ಸವಾಲಿನ ಕವಲುದಾರಿಯಲ್ಲಿ ಯಶಸ್ವಿಯಾಗುವ ಸಾಗುವ ಅವಶ್ಯಕತೆಗಳ ಕುರಿತು ಹೆಚ್ಚು ಚರ್ಚೆಗಳು ನಡೆಯಬೇಕಿದೆ ಎಂದು ಹೇಳಿದರು. ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಅಧ್ಯಕ್ಷತೆ ವಹಿಸಿದ್ದರು.
 ಕಾರ್ಯದರ್ಶಿಗಳಾದ ಎಸ್.ಎನ್.ನಾಗರಾಜ,ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್, ಖಜಾಂಚಿಗಳಾದ ಡಿ.ಜಿ.ರಮೇಶ್, ಪ್ರಾಂಶುಪಾಲರಾದ ಡಾ.ಕೆ.ನಾಗೇಂದ್ರ ಪ್ರಸಾದ್, ಶೈಕ್ಷಣಿಕ ಡೀನ್ ಡಾ.ಪಿ.ಮಂಜುನಾಥ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಇದೇ ವೇಳೆ ವಿಟಿಯು ರ್‍ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು

ತಾಂತ್ರಿಕ ಶಿಕ್ಷಣದಲ್ಲಿ ಅನೇಕ ಕವಲುದಾರಿಗಳಿವೆ. ಪದವಿ ಮುಗಿಸಿದ ವಿದ್ಯಾರ್ಥಿಗಳಲ್ಲಿ, ಉದ್ಯೋಗ ನೀಡುವ ಸಂಸ್ಥೆಗಳ ಅವಶ್ಯಕತೆಗೆ ತಕ್ಕಂತಹ ಕೌಶಲ್ಯತೆಯನ್ನು ಹೊಂದದೇ ಇರುವ ದೊಡ್ಡ ಕೊರತೆಯಿದೆ

ಎಸ್.ಎನ್.ನಾಗರಾಜ, ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ

Ad Widget

Related posts

ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಬಿಡಲ್ಲ; ಡಿ ಕೆ ಶಿವಕುಮಾರ್

Malenadu Mirror Desk

ಇಂದು ಬೊಮ್ಮಾಯಿ ಸಂಪುಟಕ್ಕೆ ರಾಜೀನಾಮೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಘೋಷಣೆ, 40% ಕಮೀಷನ್‌ಗೆ ಮೊದಲ ಬಲಿ

Malenadu Mirror Desk

ಕಾಂಗ್ರೆಸ್ ಸೇರಿದ ಮಂಜುನಾಥಗೌಡ, ಕಿಮ್ಮನೆ ಏನು ಹೇಳಿದ್ದಾರೆ ಗೊತ್ತೇ ?

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.