Malenadu Mitra
ರಾಜ್ಯಶಿವಮೊಗ್ಗಸಾಗರ

ಬರಿದಾದ ಶರಾವತಿ ಒಡಲು, ಸಿಗಂದೂರು ಲಾಂಚ್ ಸಂಚಾರಕ್ಕೆ ಕುತ್ತು?, ಮಳೆಬಂದು ಹಿನ್ನೀರು ಹಿಗ್ಗದಿದ್ದಲ್ಲಿ ಸಾರ್ವಜನಿಕ ಸಂಚಾರಕ್ಕೆ ತೊಂದರೆ

ಶಿವಮೊಗ್ಗ,ಜೂ.6: ಮುಂಗಾರು ಪೂರ್ವ ಮಳೆ ಕೊರತೆ ಹಾಗೂ ಮುಂಗಾರು ವಿಳಂಬದ ಕಾರಣದಿಂದ ಲಿಂಗನಮಕ್ಕಿ ಡ್ಯಾಂನಲ್ಲಿ ನೀರಿನ ಕೊರತೆಯಾಗಿದೆ. ಹಿನ್ನೀರು ಪ್ರದೇಶದಲ್ಲಿ ನೀರು ಇಳಿದು ಹೋಗಿರುವ ಕರೂರು-ಬಾರಂಗಿ ಹೋಬಳಿಗೆ ಸಂಪರ್ಕ ಕಲ್ಪಿಸುವ ಲಾಂಚ್‌ಗಳು ಸಂಚಾರ ಸ್ಥಗಿತಗೊಳಿಸುವ ಆತಂಕ ಎದುರಾಗಿದೆ.
ಕಳಸವಳ್ಳಿ-ಅಂಬಾರಗೊಡ್ಲು ನಡುವೆ ಸಾಗುವ ಲಾಂಚ್‌ನಿಂದ ಕರೂರು, ಬಾರಂಗಿ ಹೋಬಳಿಯ ಜನರು ಸಾಗರ ಪಟ್ಟಣ ಸೇರಿದಂತೆ ಉಳಿದ ಭಾಗಕ್ಕೆ ಜನರು ಸಂಪರ್ಕ ಸಾಧಿಸಬಹುದು. ಈ ಜಲಮಾರ್ಗ ಸ್ಥಗಿತವಾದರೆ ಶಾಲಾ ಕಾಲೇಜು, ಪಟ್ಟಣಕ್ಕೆ ಬರುವ ಜನರು ನೂರಾರು ಕಿಲೋಮೀಟರ್ ಸುತ್ತಿಕೊಂಡು ಬರಬೇಕಾಗಿದೆ. ಸಿಗಂದೂರು ಸೇತುವೆ ಕಾಮಗಾರಿ ನಡೆಯುತಿದ್ದು, ಸರಾಗ ಕೆಲಸಕ್ಕಾಗಿ ಡ್ಯಾಮಿನಿಂದ ನೀರು ಬಿಡಲಾಗಿದೆ ಎಂಬ ಅನುಮಾನವನ್ನೂ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಹಸಿರುಮಕ್ಕಿ ಸೇತುವೆ ಕಾಮಗಾರಿ ಬಹಳ ವರ್ಷಗಳಿಂದ ನಡೆಯುತಿದ್ದು, ಅಲ್ಲಿನ ಲಾಂಚ್ ಸೇವೆಯನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಈ ಬಾರಿ ಲಿಂಗನಮಕ್ಕಿ ಆಣೆಕಟ್ಟು ಬರಿದಾಗಿದ್ದು ಶರಾವತಿ ಒಡಲು ಒಣಗಿದೆ. ದಶಕಗಳಿಂದ ಶರಾವತಿ ಹಿನ್ನೀರಿನ ಜನರನ್ನು ಹೊತ್ತೊಯ್ಯುತ್ತಿದ್ದ “ಸಿಗಂದೂರು ಲಾಂಚ್” ಸ್ಥಗಿತ ಗೊಂಡರೆ ಶರಾವತಿ ಕಣಿವೆ ಪ್ರದೇಶದ ಸುಮಾರು ೩೦ ಸಾವಿರ ಜನರಿಗೆ ಸಂಪರ್ಕ ಕಡಿತದ ಭೀತಿ ಎದುರಾಗಿದೆ.
ಸಾಗರ ತಾಲ್ಲೂಕಿನ ಸಿಗಂದೂರು, ತುಮರಿ, ಬ್ಯಾಕೋಡು, ಕಟ್ಟಿನಕಾರು ಭಾಗದ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ಹೊಳೆಬಾಗಿಲು ತಟದಲ್ಲಿ ನಿರಂತರವಾಗಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಈಗಾಗಲೇ ಲಾಂಚ್ ನಿಲ್ಲಿಸುವ ಹೊಳೆಬಾಗಿಲು, ಆಂಬಾರಗೋಡ್ಲು ಎರಡು ತಟದಲ್ಲಿನ ಪ್ಲಾಟ್ ಫಾರ್ಮ್‌ಗಳು ನೀರಿನಿಂದ ತುಂಬಾ ಮೇಲೆ ಬಂದಿದ್ದು, ಲಾಂಚ್ ನಿಲ್ಲಿಸಲು ಮತ್ತು ವಾಹನಗಳನ್ನು ತುಂಬಲು ತೀವ್ರ ತೊಂದರೆಯಾಗಿದೆ. ಸಿಗಂದೂರಿಗೆ ಬರುವ ಪ್ರವಾಸಿಗಳ ಮೇಲೂ ಇದು ಪರಿಣಾಮ ಬೀರಿದೆ.

ನಿತ್ಯ ಸಂಚಾರಿಗಳ ಪರದಾಟ:
ಸಾಗರದಿಂದ ದಿನನಿತ್ಯ ಈ ಭಾಗದಲ್ಲಿ ಸೇವೆ ನೀಡುವ ಇಲಾಖಾ ಅಧಿಕಾರಿಗಳು ಈ ಭಾಗದ ಜನರು ತಾಲ್ಲೂಕು ಕಚೇರಿ, ಕೋರ್ಟ್, ಶಾಲಾ ಕಾಲೇಜು ವಿದ್ಯಾರ್ಥಿಗಳು, ಗರ್ಭಿಣಿ ಮಹಿಳೆಯರು ಅಸ್ಪತ್ರೆಗೆ ತೆರಳಲು ಈ ಮಾರ್ಗ ಬಳಸುತ್ತಿದ್ದು ನದಿಗೆ ನೀರು ಬಾರದಿದ್ದಲ್ಲಿ ಮುಂದೆ ಸಾಕಷ್ಟು ಅನಾನುಕೂಲ ಉಂಟಾಗುವ ಸಾಧ್ಯತೆಯಿದೆ.
ಈ ನಡುವೆ ಸಿಗಂದೂರು, ಕೊಲ್ಲೂರು, ಕೊಡಚಾದ್ರಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸ್ಥಳೀಯರು ಸಾಗರಕ್ಕೆ ಬರಲು ಹಾಗೂ ಮರಳಿ ತಮ್ಮೂರಿಗೆ ತೆರಳಲು ಪರದಾಡುವಂತಾಗಿದೆ.
ಈ ನಡುವೆ ಲಾಂಚ್‌ಗೆ ವಾಹನಗಳನ್ನು ಏರಿಸುವಾಗ ಅಲ್ಲಿನ ಸಿಬ್ಬಂದಿ ಯಾವ ಮುಂಜಾಗ್ರತೆ ವಹಿಸಬೇಕು ಅದನ್ನು ವಹಿಸುತ್ತಿಲ್ಲ ಎನ್ನುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಪ್ರಯಾಣಿಕರ ಒತ್ತಡವೂ ಇದಕ್ಕೆ ಕಾರಣ ಎನ್ನಲಾಗಿದೆ.
ಎರಡು ಮಾರ್ಗ ಸ್ಥಗಿತ:
ಸಮೀಪದ ಮುಪ್ಪಾನೆ ಲಾಂಚ್ ಸೇವೆ ಮೇ ೨೬ರಿಂದ ಸ್ಥಗಿತಗೊಂಡಿದ್ದು. ಹೊಸನಗರ ತಾಲ್ಲೂಕಿನ ಹಸಿರುಮಕ್ಕಿ ಲಾಂಚ್ ಸಹ ಜೂನ್ ೪ರಿಂದ ಸ್ಥಗಿತದ ಬಗ್ಗೆ ಮೂಲ ಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆ ಮಾಹಿತಿ ನೀಡಿದೆ. ಅಲ್ಲದೆ ಜನರು ಪರ್ಯಾಯ ಮಾರ್ಗಕ್ಕಾಗಿ ನಿಟ್ಟೂರು ಹೊಸನಗರ ಮುಖಾಂತರ ೯೦ಕೀ ಮೀ ಸುತ್ತುವ ಅನಿವಾರ್ಯತೆ ಎದುರಾಗಿದೆ.

ಕೆಲಸಕ್ಕಾಗಿ ನೀರು ಬಿಡಲಾಗಿದೆಯೇ ?
ಸಿಗಂದೂರು ಸೇತುವೆ ಕಾಮಗಾರಿ ನಡೆಯುತ್ತಿರುವ ಕಾರಣ ಗುತ್ತಿಗೆದಾರ ಕಂಪನಿಯ ಅಧಿಕಾರಿಗಳ ಒತ್ತಡದಿಂದ ಡ್ಯಾಮ್‌ನಿಂದ ನೀರು ಹೊರಬಿಡಲಾಗಿದೆ ಈ ಕಾರಣದಿಂದ ಶರಾವತಿ ಒಡಲು ಬರಿದಾಗಿದೆ ಎಂಬ ಆರೋಪ ಇದ್ದು, ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಅಧಿಕಾರಿಗಳ ಗಮನ ಸೆಳೆದರು. ಇದಕ್ಕೆ ಉತ್ತರಿಸಿದ ಸೇತುವೆ ಕಾಮಗಾರಿಯ ಯೋಜನಾ ಎಂಜನಿಯರ್ ಪೀರ್ ಭಾಷಾ ಅವರು, ಕೆಲಸಕ್ಕೆ ನಮಗೆ ನೀರು ಬೇಕೇ ಬೇಕು. ಈ ಕಾರಣದಿಂದ ನೀರು ಹೊರಗೆ ಬಿಟ್ಟಿಲ್ಲ ಎಂದು ಸಮಜಾಯಿಷಿ ನೀಡಿದರು.

ಕರೂರು-ಬಾರಂಗಿ ಹೋಬಳಿಯ ಜನರ ಸಂಚಾರ ದೃಷ್ಟಿಯಿಂದ ಇಲಾಖೆ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಜನರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಸ್ಥಳಿಯರಿಗೆ ಹಾಗೂ ಸಿಗಂದೂರು ಭಕ್ತರಿಗೆ ತೊಂದರೆಯಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಲಾಂಚ್ ಸೇವೆ ನೀಡಲು ಸೂಚಿಸಿದ್ದೇನೆ

ಬೇಳೂರು ಗೋಪಾಲಕೃಷ್ಣ
ಶಾಸಕರು, ಸಾಗರ

Ad Widget

Related posts

ಶಿವಮೊಗ್ಗದಲ್ಲಿ ತ್ರಿಶತಕ ದಾಟಿದ ಕೊರೊನ, 1335 ಸಕ್ರಿಯ ಪ್ರಕರಣಗಳು

Malenadu Mirror Desk

ಶರಾವತಿ ಸಂತ್ರಸ್ತರ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಕ್ರಮ : ಮಧುಬಂಗಾರಪ್ಪ

Malenadu Mirror Desk

ನಮ್ಮ ಹಾಡು, ನಮ್ಮ ಹಸೆ, ಜನಮನ ಸೆಳೆದ ದೀವರ ಸಾಂಸ್ಕೃತಿಕ ವೈಭವ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.