ಶಿವಮೊಗ್ಗ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ತುಂಗಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು, ಶಿವಮೊಗ್ಗದ ಕೋಟೆಯಲ್ಲಿರುವ ಕೋರ್ಪಲಯ್ಯ ಛತ್ರದ ಮಂಟಪ ಮುಳುಗುವ ಅಂತಿಮ ಹಂತದಲ್ಲಿದೆ. ತೀರ್ಥಹಳ್ಳಿ, ಆಗುಂಬೆ, ಕೊಪ್ಪ, ಶೃಂಗೇರಿ ಭಾಗದಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ತುಂಗಾನದಿಯಲ್ಲಿ ನೀರಿನ ಮಟ್ಟ ಸತತವಾಗಿ ಏರಿಕೆಯಾಗುತ್ತಿದೆ.
ಇದರಿಂದ ಗಾಜನೂರಿನ ತುಂಗಾ ಜಲಾಶಯವೂ ಭರ್ತಿಯಾಗುವ ಹಂತಕ್ಕೆ ಬಂದಿದೆ. ಜಲಾಶಯದಿಂದ ಹೆಚ್ಚುವರಿ ನೀರನ್ನು ೧೨ ಗೇಟುಗಳ ಮೂಲಕ ಹೊರ ಬಿಡಲಾಗುತ್ತಿದೆ. ಈ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ತುಂಗಾ ನದಿ ಮೈದುಂಬಿ ಹರಿಯುತ್ತಿದೆ.
ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದೆ. ಹಿನ್ನೀರು ಭಾಗದಲ್ಲಿ ನಿರಂತರ ಮಳೆಯಾಗುತ್ತಿದ್ದು ಜಲಾಶಯದ ಒಳ ಹರಿವಿನಷ್ಟೆ ಪ್ರಮಾಣದ ನೀರನ್ನು ಹೊರಗೆ ಬಿಡಲಾಗುತ್ತಿದೆ. ಆದ್ದರಿಂದ ಶಿವಮೊಗ್ಗದ ತುಂಗಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ.
ಮಂಟಪ ಮುಳುಗಲು ಮೂರಡಿ ಬಾಕಿ
ತುಂಗಾ ನದಿಯಲ್ಲಿರುವ ಕೋರ್ಪಲಯ್ಯ ಛತ್ರ ಮಂಟಪ ಮುಕ್ಕಾಲು ಭಾಗ ಮುಳುಗಿದೆ. ಮಂಟಪ ಸಂಪೂರ್ಣ ಮುಳುಗಲು ಇನ್ನು ಮೂರು ಅಡಿ ಬಾಕಿ ಇದೆ. ಜನರು ಶಿವಮೊಗ್ಗದ ಹಳೆ ಸೇತುವೆ ಮೇಲೆ ನಿಂತು ಮುಕ್ಕಾಲು ಮುಳುಗಿರುವ ಮಂಟಪವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಅದರ ಫೋಟೋ, ವಿಡಿಯೋಗಳನ್ನು ಕ್ಲಿಕ್ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿ ಸಂಭ್ರಮಿಸುತ್ತಿದ್ದಾರೆ.
ಮಂಟಪದ ಬಳಿ ಹೋಗಲು ಅವಕಾಶವಿಲ್ಲ:
ಪ್ರತಿ ಬಾರಿ ಮಂಟಪ ಮುಳುಗಿದಾಗಲು ಜನರು ಕೋಟೆ ರಸ್ತೆ ಮೂಲಕ ಮಂಟಪದ ಬಳಿಗೆ ಹೋಗಿ ವೀಕ್ಷಿಸುತ್ತಿದ್ದರು. ಆದರೆ ಎರಡು ವರ್ಷದಿಂದ ಸ್ಮಾರ್ಟ್ ಸಿಟಿ ಕಾಮಗಾರಿ ಹಿನ್ನೆಲೆ ಮಂಟಪದ ಬಳಿ ಹೋಗಲು ಜನರಿಗೆ ಅವಕಾಶವಿಲ್ಲದಾಗಿದೆ. ನದಿ ದಂಡೆ ಮೇಲೆ ವಾಕಿಂಗ್ ಪಾತ್ ನಿರ್ಮಿಸಲಾಗುತ್ತಿದೆ. ಈ ಕಾಮಗಾರಿ ಹಿನ್ನೆಲೆ ಮಂಟಪದ ಬಳಿಗೆ ಹೋಗುವ ಎಲ್ಲಾ ಮಾರ್ಗದಲ್ಲಿಯು ಗೇಟ್‌ಗಳನ್ನು ನಿರ್ಮಿಸಿ, ಬೀಗ ಹಾಕಲಾಗಿದೆ. ಕೆಲಸದ ಸಿಬ್ಬಂದಿ ಹೊರತು ಉಳಿದವರಿಗೆ ಪ್ರವೇಶ ನಿರಾಕರಿಸಲಾಗಿದೆ. ಕಳೆದ ಮಳೆಗಾಲದಲ್ಲೂ ಇದೆ ಪರಿಸ್ಥಿತಿ ಇತ್ತು. ಆಗಲು ಜನರು ಮಂಟಪದ ಬಳಿ ಹೋಗಲು ನಿರ್ಬಂಧ ವಿಧಿಸಲಾಗಿತ್ತು.
12 ಗೇಟ್‌ಗಳಿಂದ ನೀರು ಹೊರಕ್ಕೆ :
ಶಿವಮೊಗ್ಗ: ತುಂಗಾ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾದ ಹಿನ್ನೆಲೆ ತುಂಗಾ ಜಲಾಶಯಕ್ಕೆ ಒಳ ಹರಿವು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಪ್ರಸ್ತುತ ಡ್ಯಾಂನ 12 ಗೇಟ್‌ಗಳನ್ನು ಮೇಲೆತ್ತಲಾಗಿದೆ.
ಗಾಜನೂರಿನ ತುಂಗಾ ಜಲಾಶಯಕ್ಕೆ (ಖಿuಟಿgಚಿ ಆಚಿm) ಪ್ರಸ್ತುತ ೨೫,೯೭೧ ಕ್ಯೂಸೆಕ್ ಒಳ ಹರಿವು ಇದೆ. ಈಗಾಗಲೇ ನೀರಿನ ಮಟ್ಟ ಗರಿಷ್ಠ ಹಂತಕ್ಕೆ ತಲುಪಿರುವುದರಿಂದ ಹೆಚ್ಚುವರಿ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಸದ್ಯ ೨೫,೯೩೬ ಕ್ಯೂಸೆಕ್ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ.
ತುಂಗಾ ಜಲಾಶಯದಲ್ಲಿ ಸದ್ಯ ೧೨ ಗೇಟ್‌ಗಳನ್ನು ತಲಾ ೧ ಮೀಟರ್‌ನಷ್ಟು ಮೇಲೆತ್ತಲಾಗಿದೆ. ಇದರ ಮೂಲಕ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಗುರುವಾರ ಒಳ ಹರಿವು ಏರಿಕೆಯಾಗಿದ್ದರಿಂದ ೧೦ ಗೇಟ್‌ಗಳನ್ನು ಮೇಲೆತ್ತಿ ನೀರು ಹೊರಗೆ ಬಿಡಲಾಗಿತ್ತು. ಇವತ್ತು ಇನ್ನು ಎರಡು ಗೇಟ್‌ಗಳನ್ನು ಮೇಲೆತ್ತಲಾಗಿದೆ.



