Malenadu Mitra
ರಾಜ್ಯ ಶಿವಮೊಗ್ಗ

ಶಿಕ್ಷಣ ನೀತಿ ಖಾಸಗೀಕರಣಕ್ಕೆ ನಾಂದಿ : ಕಿಮ್ಮನೆ ರತ್ನಾಕರ್ ಅಭಿಪ್ರಾಯ

ಬಿಜೆಪಿ ಸರ್ಕಾರ ಯಾವ ಚರ್ಚೆ ಇಲ್ಲದೆ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣ ಕ್ಷೇತ್ರದ ಖಾಸಗೀಕರಣಕ್ಕೆ ನಾಂದಿ ಹಾಡುತ್ತದೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಸರದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರಲು ಹೊರಟಿದೆ. ಕರ್ನಾಟಕ ರಾಜ್ಯದಲ್ಲಿ ಉನ್ನತ ಶಿಕ್ಷಣ ಸಚಿವರು ಇದರ ಅಧಿಕೃತ ಉದ್ಘಾಟನೆಯನ್ನು ಕೂಡ ಮಾಡಿದ್ದಾರೆ. ಆದರೆ ಇದರಲ್ಲಿರುವ ಲೋಪದೋಷಗಳನ್ನು ಹಾಗೆ ಇಟ್ಟು ಮುಚ್ಚಿದ ಲಕೋಟೆಯಲ್ಲಿ ಬಚ್ಚಿಟ್ಟು ಜಾರಿಗೆ ತರಲು ಹೊರಟಿರುವುದು ಅತ್ಯಂತ ಅಪಾಯಕಾರಿಯಾಗಿದೆ. ಇದರಿಂದ ಶಿಕ್ಷಣದಿಂದ ವಂಚಿತರಾದ ಮಕ್ಕಳು ಮತ್ತೆ ಶಿಕ್ಷಣವನ್ನು ಮುಂದುವರಿಸಲು ಆಗುವುದೇ ಇಲ್ಲ. ಯಾವ ಕ್ಷೇತ್ರ ಖಾಸಗೀಕರಣವಾಗಬಾರದು ಎಂದು ಬಹುಜನರ ಆಪೇಕ್ಷೆಯಾಗಿತ್ತು. ಅಂತಹ ಶಿಕ್ಷಣ ಕ್ಷೇತ್ರ ಈ ಹೊಸ ಕಾಯ್ದೆಯಿಂದ ಮತ್ತಷ್ಟು ಪಾತಾಳಕ್ಕೆ ಇಳಿಯಲಿದೆ ಎಂದು ಆರೋಪಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕು ಎಂಬುದು ಒಪ್ಪುವ ವಿಷಯ. ಆದರೆ, ಭಾರತದಂತಹ ದೇಶದಲ್ಲಿ ಯಾವುದೇ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಬೇಕಾದರೆ ಅದರ ಸುದೀರ್ಘ ಚರ್ಚೆಯಾಗಬೇಕು. ಜನಾಭಿಪ್ರಾಯ ಕೇಳಬೇಕು. ಲೋಕಸಭೆ, ರಾಜ್ಯಸಭೆ, ವಿಧಾನಸಭೆಗಳಲ್ಲಿ ಚರ್ಚೆಯಾಗಬೇಕು. ಆದರೆ ಈ ಹೊಸ ನೀತಿ ಎಲ್ಲಿಯೂ ಚರ್ಚೆ ಆಗಲಿಲ್ಲ. ಇದನ್ನು ಏಕಾಏಕಿ ಜಾರಿಗೊಳಿಸಿ ಅನುಷ್ಠಾನಕ್ಕೆ ತರಲು ಹೊರಟಿರುವುದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಅಷ್ಟಕ್ಕೂ ಈ ಶಿಕ್ಷಣ ನೀತಿ ಜಾರಿಗೆ ತರಲು ಕಸ್ತೂರಿ ರಂಗನ್ ಅವರಂತಹ ವಿಜ್ಞಾನಿಗಳನ್ನು ನೇಮಿಸಲಾಗಿತ್ತು. ಈ ಸಮಿತಿಯಲ್ಲಿ ಇದ್ದವರು ಸಂಘ ಪರಿವಾರದ ಸದಸ್ಯರು. ಎಲ್ಲಾ ಬಿಜೆಪಿಯವರೇ ತುಂಬಿಕೊಂಡಿದ್ದರು. ಇತರೆಯವರು ಈ ಸಮಿತಿಯಲ್ಲಿ ಇರಲಿಲ್ಲ. ಸನಾತನ ವಿಷಯಗಳ ವಿಜ್ರಂಬಿಸುವ ವರ್ತಮಾನಕ್ಕೆ ಸ್ಪಂದಿಸದ ಭವಿಷ್ಯ ರೂಪಿಸದ ಒಟ್ಟಾರೆ ಪೂರ್ವ ಸಿದ್ಧತೆ ಇಲ್ಲದ ರಾಷ್ಟ್ರೀಯ ಶಿಕ್ಷಣ ನೀತಿ ಇದು. ಇದರಲ್ಲಿರುವ ಲೋಪದೋಷಗಳನ್ನು ಸರಿಮಾಡದ ಹೊರತು ಇದು ಜಾರಿಯಾಗಬಾರದು ಎಂದರು.


ಈ ಶಿಕ್ಷಣ ನೀತಿಯಿಂದ ಉದ್ಯೋಗಗಳನ್ನು ಕಳೆದುಕೊಳ್ಳಬೇಕಾಗುತ್ತದೆ. ಬಹು ಸಂಸ್ಕೃತಿಯ ನಾಶವಾಗುತ್ತದೆ. ಇಡೀ ಶಿಕ್ಷಣ ಖಾಸಗಿಗಳ ವಶವಾಗುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ೩ರಿಂದ ೧೮ ವರ್ಷದವರೆಗಿನ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಆದರೆ ಈ ಹೊಸ ನೀತಿಯಿಂದ ಖಾಸಗಿ ಕ್ಷೇತ್ರಗಳು ಹೆಚ್ಚಾಗಿ ಬಡ ಮಕ್ಕಳು ಓದುವುದೇ ಕಷ್ಟವಾಗುತ್ತದೆ. ಬರಿ ಶ್ರೀಮಂತರಿಗಾಗಿ ಶಾಲೆಗಳು ತೆರೆಯುತ್ತವೆ ಎಂದರು.
ಈ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಮತ್ತು ಇದರ ವಿರುದ್ಧ ಸದನದಲ್ಲಿಯೂ ಕಾಂಗ್ರೆಸ್ ಧ್ವನಿ ಎತ್ತಲಿದೆ. ಯಾವುದೇ ಕಾರಣಕ್ಕೂ ಬದಲಾವಣೆ ಮಾಡದೆ ಇದು ಜಾರಿಯಾಗಲು ಕಾಂಗ್ರೆಸ್ ಬಿಡುವುದಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರುಗಳಾದ ಎನ್.ರಮೇಶ್, ದೇವಿಕುಮಾರ್, ಯಮುನಾರಂಗೇಗೌಡ, ರಂಗೇಗೌಡ, ಮುಡುಬ ರಾಘವೇಂದ್ರ ಮತ್ತಿತರರು ಇದ್ದರು.

ದುಡ್ಡಿನ ರಾಜಕಾರಣ ನನ್ನದಲ್ಲ


ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ನನ್ನನ್ನು ಏಕವಚನದಲ್ಲಿ ಕರೆದಿಲ್ಲ. ಇದೆಲ್ಲ ಕೆಲವರ ಸೃಷ್ಠಿ ಎಂದು ಆರ್.ಎಂ.ಮಂಜುನಾಥಗೌಡರ ಹೆಸರನ್ನು ಪ್ರಸ್ತಾಪಿಸದೆ ಅವರು ವಿರುದ್ಧ ಕಿಮ್ಮನೆ ರತ್ನಾಕರ್ ಹರಿಹಾಯ್ದರು.
ಕೆಲವು ದುಡ್ಡಿನ ಚೀಲ ಹಿಡಿದುಕೊಂಡು ಪಕ್ಷ ಸೇರಿದವರು. ಇಂತಹ ಕಿತಾಪತಿ ಮಾಡುತ್ತಾರೆ. ಇದರಿಂದ ತಮಗೆ ಲಾಭವಾಗಬಹುದು ಎಂಬ ಭ್ರಮೆಯಲಿರುತ್ತಾರೆ. ಅದು ಸಾಧ್ಯವಾಗದಿದ್ದಾಗ ಸುಮ್ಮನಾಗುತ್ತಾರೆ. ನಾನು ಸರಳ ರಾಜಕಾರಣಿ. ಅಧಿಕಾರ ಸೇರಿದಂತೆ ಯಾವ ಲಾಭ ಕೋರುತನದ ಆಸೆಯಿಂದ ಈ ಪಕ್ಷಕ್ಕೆ ಬಂದವನಲ್ಲ. ನಮ್ಮ ತಾತನ ಕಾಲದಿಂದಲೂ ಕಾಂಗ್ರೆಸ್‌ಲ್ಲಿದ್ದೇವೆ. ಮುಂದೆಯೂ ಇರುತ್ತೇವೆ ಎಂದ ಅವರು ತೀರ್ಥಹಳ್ಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಿಧಾನಸಭಗೆ ಸ್ಪರ್ಧಿಸಲು ಟಿಕೆಟ್ ಕೊಡುವುದು ಬಿಡುವುದು ಹೈಕಮಾಂಡಿಗೆ ಬಿಟ್ಟದು. ನನಗೆ ಸಿಗುತ್ತದೆ ಎಂದು ಹೇಳಿಕೊಂಡು ತಿರುಗಾಡುವವರಿಗೆ ನಾನೇನು ಹೇಳುವುದಿಲ್ಲ ಎಂದರು.

Ad Widget

Related posts

ಜನರವಿಶ್ವಾಸ ಗಳಿಸಿ ಸಂಘಟನೆಯಲ್ಲಿ ತೊಡಗಿ

Malenadu Mirror Desk

ಶಿವಮೊಗ್ಗದಲ್ಲಿ 13 ಸಾವು, 1016 ಮಂದಿ ಗುಣಮುಖ

Malenadu Mirror Desk

ಜಿಲ್ಲೆಯಲ್ಲಿ ವಾರಾಂತ್ಯ ಕಫ್ರ್ಯೂ ಕಟ್ಟುನಿಟ್ಟಿನಿಂದ ಜಾರಿ : ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.