Malenadu Mitra
ಶಿವಮೊಗ್ಗ

ಕೋವಿಡ್‌ನಿಂದ ಮೃತರಾದವರಿಗೆ ಪರಿಹಾರಧನ ನೀಡಲು ಕ್ರಮ : ಕೆ.ಬಿ.ಶಿವಕುಮಾರ್

ಕೋವಿಡ್-೧೯ ಸೋಂಕಿನಿಂದ ಮೃತ ವ್ಯಕ್ತಿಯ ಅವಲಂಬಿತರಿಗೆ ಸರ್ಕಾರವು ಈಗಾಗಲೇ ಘೋಷಿಸಿರುವ ಆರ್ಥಿಕ ನೆರವನ್ನು ಒದಗಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಹಶೀಲ್ದಾರರು ಹಾಗೂ ತಾಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಬುಧವಾರ  ತಮ್ಮ ಕಚೇರಿ ಸಭಾಂಗಣದಿಂದ ಏರ್ಪಡಿಸಲಾಗಿದ್ದ ಕೋವಿಡ್ ಮೃತ ಕುಟಂಬಕ್ಕೆ ಆರ್ಥಿಕ ನೆರವು ಒದಗಿಸುವುದು, ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮನೆ, ಬೆಳೆ, ಆಸ್ತಿ, ಜನ-ಜಾನುವಾರು ಹಾನಿಗಳ ಕುರಿತ ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಸರ್ಕಾರವು  ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತರಾದ ವ್ಯಕ್ತಿಗಳಲ್ಲಿ ಮೊದಲ ಹಂತದಲ್ಲಿ ೧೦೬೪ಜನ ಮೃತರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಮೃತರ ಕುಟುಂಬದ ಸದಸ್ಯರು ನೆರವಿಗಾಗಿ ಅರ್ಜಿ ಸಲ್ಲಿಸುವವರೆಗೆ ಕಾಯದೇ ಕಂದಾಯ ಇಲಾಖೆಯ ಅಧಿಕಾರಿಗಳು ಮೃತರ ಮನೆಗೆ ಧಾವಿಸಿ, ಅವರಿಂದ ಅರ್ಜಿ ಹಾಗೂ ಮಾಹಿತಿ ಪಡೆದು, ಆನ್‌ಲೈನ್ ಮೂಲಕ ಮಾಹಿತಿ ಉನ್ನತೀಕರಿಸಿ ಮಾಹಿತಿ ನೀಡುವಂತೆಯೂ ಅವರು ಸೂಚಿಸಿದರು.

ಮೃತರ ಕುಟುಂಬವು ಬಿ.ಪಿ.ಎಲ್. ಕುಟುಂಬ ವ್ಯಾಪ್ತಿಗೊಳಪಟ್ಟಿದ್ದರೆ ರಾಜ್ಯ ಸರ್ಕಾರವು ಒಂದು ಲಕ್ಷ ರೂ.ಗಳ ಆರ್ಥಿಕ ನೆರವು ಹಾಗೂ ಕೇಂದ್ರ ಸರ್ಕಾರವು ಕೋವಿಡ್‌ನಿಂದ ಮೃತರಾದ ಎಲ್ಲಾ ಕುಟುಂಬಗಳಿಗೆ ರೂ.೫೦,೦೦೦ ಗಳ ನೆರವು ಒದಗಿಸಲಿದೆ. ಈ ಪರಿಹಾರಧನ ಪಡೆಯಲು ಜಿಲ್ಲೆಯಲ್ಲಿ ಸಲ್ಲಿಕೆಯಾದ ಅರ್ಜಿ ನಿರೀಕ್ಷಿತ ಪ್ರಗತಿ ಕಂಡುಬಂದಿಲ್ಲ. ಸಂಬಂಧಿತ ಅಧಿಕಾರಿಗಳು ಇನ್ನಾದರೂ ವಿಳಂಬಕ್ಕೆ ಅವಕಾಶ ಕೊಡದೆ ಈ ತಿಂಗಳ ಮಾಸಾಂತ್ಯದೊಳಗಾಗಿ ಮಾಹಿತಿಯನ್ನು ಸಂಗ್ರಹಿಸಿ, ಫಲಾನುಭವಿಗಳಿಗೆ ಸೌಲಭ್ಯ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಅವರು ತಾಕೀತು ಮಾಡಿದರು.   

ಆನ್‌ಲೈನ್‌ನಲ್ಲಿ ಮಾಹಿತಿ ತುಂಬಲು ತಾಂತ್ರಿಕ ಸಮಸ್ಯೆಗಳು ಎದುರಾದಲ್ಲಿ ಆರೋಗ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಮನ್ವಯತೆ ಸಾಧಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದ ಅವರು, ಮೃತ ವ್ಯಕ್ತಿಯು ಹೊರಗಿನ ಜಿಲ್ಲೆಯವರಾಗಿದ್ದಲ್ಲಿ ಅಂತಹವರು ತಮ್ಮ ಮೂಲ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಕೋವಿಡ್-೧೯ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾದ ಕಾರ್ಯಕ್ರಮ ಹಾಗೂ ಚಟುವಟಿಕೆಗಳಿಗೆ ಜಿಲ್ಲಾಡಳಿತ ಬಿಡುಗಡೆಗೊಳಿಸಿದ ಅನುದಾನದ ಖರ್ಚು-ವೆಚ್ಚಗಳ ಕುರಿತು ಬಳಕೆ ಪ್ರಮಾಣಪತ್ರವನ್ನು ಕೂಡಲೇ ನೀಡಬೇಕು. ಕೊರತೆ ಉಂಟಾಗಿದ್ದಲ್ಲಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದಲ್ಲಿ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ತೀರ್ಥಹಳ್ಳಿ ಸೇರಿದಂತೆ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಅಲ್ಪ ಪ್ರಮಾಣದ ಬೆಳೆ ಹಾನಿಯಾಗಿರುವುದನ್ನು ಗಮನಿಸಲಾಗಿದೆ. ೧೦೫ಮನೆಗಳ ಭಾಗಶಃ ಹಾನಿಯಾಗಿರುವುದು ಹಾಗೂ ೦೨ಜೀವಹಾನಿ ಪ್ರಕರಣಗಳಾಗಿರುವುದನ್ನು ಗುರುತಿಸಲಾಗಿದೆ. ಅಲ್ಲದೇ ತಾಲೂಕು ಮಟ್ಟದ ಅಧಿಕಾರಿಗಳು ಈವರೆಗೆ ತಾವು ಸಂಗ್ರಹಿಸಿದ ಕ್ರೋಢೀಕೃತ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಸುವಂತೆ ಸೂಚಿಸಿದರು.

ತಹಶೀಲ್ದಾರರು ತಮ್ಮ ವ್ಯಾಪ್ತಿಯಲ್ಲಿ ಜಾತಿಪ್ರಮಾಣ ಕೋರಿ ಬರುವ ಅರ್ಜಿಗಳನ್ನು ಕೂಲಂಕಶವಾಗಿ ಪರಿಶೀಲಿಸಿ ಪ್ರಮಾಣಪತ್ರ ನೀಡಬೇಕು. ಸುಳ್ಳು ಜಾತಿಪ್ರಮಾಣ ಪತ್ರ ನೀಡಿದ ಅಧಿಕಾರಿ-ಸಿಬ್ಬಂಧಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಲಿದೆ. ಈಗಾಗಲೇ ಇತರೆ ತಾಲೂಕುಗಳಲ್ಲಿ ನೀಡಲಾಗಿರುವ ಸುಳ್ಳು ಪ್ರಮಾಣಪತ್ರಗಳ ಕುರಿತು ಬಂದಿರುವ ಅರ್ಜಿಗಳನ್ನು ಪರಿಶೀಲಿಸಿ ೦೭ ಅರ್ಜಿಗಳನ್ನು ವಜಾಗೊಳಿಸಲಾಗಿದೆ. ಅವುಗಳನ್ನು ತಮ್ಮ ಕಚೇರಿಯ ದಾಖಲೆಯಲ್ಲಿಯೂ ರದ್ದುಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್.ಹೊನ್ನಳ್ಳಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಕೆ.ನಾಗರಾಜ್, ಆರ್.ಸಿ.ಹೆಚ್.ಅಧಿಕಾರಿ ಡಾ.ನಾಗರಾಜ್‌ನಾಯ್ಕ್ ಸೇರಿದಂತೆ ಎಲ್ಲಾ ತಾಲೂಕುಗಳ ತಹಶೀಲ್ದಾರರು, ತಾಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

Ad Widget

Related posts

ಮಲೆನಾಡಿನ ಭೂಮಿ ಸಮಸ್ಯೆ ಬಗ್ಗೆ ಮೇ ಮೊದಲ ವಾರದಲ್ಲಿ ಸಭೆ, ಶಿವಮೊಗ್ಗದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿಕೆ

Malenadu Mirror Desk

ಬಿಜೆಪಿ ಸಭೆ ಭದ್ರತೆಯಲ್ಲಿದ್ದ ಪೇದೆ ಸಾವು

Malenadu Mirror Desk

ಶಿಮುಲ್ ಹಾಲು ಒಕ್ಕೂಟದ ಅಧ್ಯಕ್ಷ ಡಿ.ಆನಂದ್‌ಗೆ ಸೋಲು

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.