Malenadu Mitra
ರಾಜ್ಯಶಿವಮೊಗ್ಗ

ಗಾಂಧೀಜಿಯವರ ಜೀವನಾದರ್ಶಗಳು ಸಾರ್ವಕಾಲಿಕ

ಶಿವಮೊಗ್ಗ :  ಮಹಾತ್ಮ ಗಾಂಧೀಜಿಯವರ ಚಿಂತನೆಗಳು ಸ್ವಾತಂತ್ರ್ಯ ಹೋರಾಟಕ್ಕೆ ಮಾತ್ರ ಸೀಮಿತವಾಗಿರದೆ ಸತ್ಯ, ಅಹಿಂಸೆ, ಸರಳತೆ, ಸ್ವಾವಲಂಬನೆ, ಸಮಾನತೆ ಮತ್ತು ಸರ್ವೋದಯದಂತಹ ಮೌಲ್ಯಗಳು ಸಾರ್ವಕಾಲಿಕ ಮಹತ್ವವನ್ನು ಹೊಂದಿವೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಹೇಳಿದರು.
 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಬಿ.ಆರ್.‌ಅಂಬೇಡ್ಕರ್‌ಭವನದಲ್ಲಿ ಏರ್ಪಡಿಸಿದ್ದ ಗಾಂದೀಜಿಯವರ 157ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತ ಗಾಂಧೀಜಿಯವರ ಸತ್ಯದ ತತ್ವವು ಸುಳ್ಳು ಸುದ್ದಿ, ವದಂತಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿನ ತಪ್ಪು ಮಾಹಿತಿಯ ನಡುವೆ ನೈಜ ಮಾಹಿತಿಯನ್ನು ಪರಿಶೀಲಿಸುವ ಜವಾಬ್ದಾರಿಯನ್ನು ನೆನಪಿಸುತ್ತದೆ. ಅಹಿಂಸೆಯು ವೈಯಕ್ತಿಕ ಮತ್ತು ಸಾಮಾಜಿಕ ಸಂಘರ್ಷಗಳನ್ನು ದ್ವೇಷ ಹಾಗೂ ಹಿಂಸೆಯ ಬದಲು ಸಂವಾದ, ಸಹನೆ ಮತ್ತು ಶಾಂತಿಯುತ ಮಾರ್ಗಗಳಿಂದ ಪರಿಹರಿಸುವ ಸಂದೇಶ ನೀಡುತ್ತದೆ ಎಂದರು.
ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಮತ್ತು ಸ್ವಾವಲಂಬನೆಯ ಕಲ್ಪನೆ ಗ್ರಾಮೀಣ ಅಭಿವೃದ್ಧಿ, ಸ್ಥಳೀಯ ಉತ್ಪಾದನೆ, ಸಣ್ಣ ಕೈಗಾರಿಕೆಗಳು ಮತ್ತು ಸ್ಥಳೀಯ ಆಡಳಿತದ ಮಹತ್ವವನ್ನು ಒತ್ತಿ ಹೇಳುತ್ತದೆ. ಅವರ ಸರಳ ಜೀವನ ಮತ್ತು ಮಿತ ಬಳಕೆಯ ಚಿಂತನೆ ಕೂಡ ಗಮನಾರ್ಹವಾಗಿದೆ. ಜಾತಿ-ಧರ್ಮದ ಭೇದ-ಭಾವವನ್ನು ಮೀರಿ ಸಾಮಾಜಿಕ ಸಾಮರಸ್ಯ ಮತ್ತು ಸಮಾನತೆ ಬೆಳೆಸುವ ಅಗತ್ಯವನ್ನು ಗಾಂಧೀಜಿಯವರ ವಿಚಾರಗಳು ನೆನಪಿಸುತ್ತವೆ.

ಲಾಲ್ ಬಹಾದ್ದೂರು ಶಾಸ್ತ್ರೀಜಿ ಅವರು ಸರಳತೆ, ಪ್ರಾಮಾಣಿಕತೆ ಮತ್ತು ಕರ್ತವ್ಯನಿಷ್ಠೆಗೆ ಹೆಸರಾದವರು. ದೇಶದ ಆಹಾರ ಭದ್ರತೆ ಮತ್ತು ಕೃಷಿ ಅಭಿವೃದ್ಧಿಗೆ ಅವರು ಹೆಚ್ಚಿನ ಒತ್ತು ನೀಡಿದ ಅವರು, ಸೈನಿಕರು ಮತ್ತು ರೈತರ ಮಹತ್ವವನ್ನು ಸಾರಿದರು. ರಾಷ್ಟ್ರಸೇವೆ, ಶಿಸ್ತು ಮತ್ತು ಸ್ವಾವಲಂಬನೆಯ ಅವರ ಆದರ್ಶಗಳು ಇಂದಿಗೂ ಪ್ರೇರಣಾದಾಯಕವಾಗಿವೆ ಎಂದರು.
 ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್‌ಅವರು ಮಾತನಾಡಿ, ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯು ಸ್ವಾವಲಂಬಿ, ಸ್ವಯಂ ಆಡಳಿತ ನಡೆಸುವ ಮತ್ತು ಸಮಾನತೆಯ ಆಧಾರದ ಮೇಲೆ ಬದುಕುವ ಗ್ರಾಮಗಳ ನಿರ್ಮಾಣವನ್ನು ಉದ್ದೇಶಿಸಿತ್ತು. ಗಾಂಧೀಜಿಯವರ ದೃಷ್ಟಿಯಲ್ಲಿ ಭಾರತದ ನಿಜವಾದ ಅಭಿವೃದ್ಧಿಯು ಗ್ರಾಮಗಳ ಅಭಿವೃದ್ಧಿಯಿಂದಲೇ ಸಾಧ್ಯ ಎನ್ನುವುದೇ ಆಗಿತ್ತು ಎಂದರು.
ಗಾಂಧೀಜಿಯವರು ಗ್ರಾಮವನ್ನು ಆಡಳಿತದ ಒಂದು ಘಟಕವಾಗಿ ನೋಡದೆ, ಸ್ವಯಂಪೂರ್ಣವಾದ ಸಣ್ಣ ಗಣರಾಜ್ಯದಂತೆ ಕಲ್ಪಿಸಿದ್ದರು. ಗ್ರಾಮಸ್ಥರು ತಮ್ಮ ಗ್ರಾಮದ ಅಗತ್ಯಗಳನ್ನು ತಾವೇ ನಿರ್ಧರಿಸಿ, ಸ್ಥಳೀಯ ಮಟ್ಟದಲ್ಲೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂಬುದು ಅವರ ಆಶಯವಾಗಿತ್ತು ಎಂದರು.

ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಬಿ.ನಿಖಿಲ್‌ಅವರು ಮಾತನಾಡಿ, ಗಾಂಧೀಜಿಯವರ ಜೀವನದ ಪ್ರಮುಖ ಎರಡು ತತ್ವಗಳೆಂದರೆ ಸತ್ಯ ಮತ್ತು ಅಹಿಂಸೆ. ಇವು ಕೇವಲ ಅವರ ವೈಯಕ್ತಿಕ ಜೀವನದ ಮೌಲ್ಯಗಳಾಗಿರದೆ, ಭಾರತದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಮಾರ್ಗದರ್ಶಕ ತತ್ವಗಳಾಗಿದ್ದವು. ಸತ್ಯ ಎಂದರೆ ನಿಜವನ್ನು ನಿಷ್ಠೆಯಿಂದ ಸ್ವೀಕರಿಸುವುದು, ಹೇಳುವುದು ಮತ್ತು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು. ಗಾಂಧೀಜಿಯವರು ಸತ್ಯವನ್ನು ಜೀವನದ ಪರಮ ಮೌಲ್ಯವೆಂದು ಪರಿಗಣಿಸಿದ್ದರು. ಅವರ ಪ್ರಸಿದ್ಧ ವಿಚಾರವೆಂದರೆ “ಸತ್ಯವೇ ದೇವರು”. ಯಾವುದೇ ಸಂದರ್ಭದಲ್ಲಿಯೂ ಸುಳ್ಳು, ಅನ್ಯಾಯ ಮತ್ತು ವಂಚನೆಯ ಮಾರ್ಗವನ್ನು ಅನುಸರಿಸದೆ ಸತ್ಯದ ಮಾರ್ಗದಲ್ಲಿ ನಡೆಯಬೇಕು ಎಂಬುದು ಅವರ ಸಂದೇಶವಾಗಿತ್ತು ಎಂದರು.
ದಿಕ್ಸೂಚಿ ಭಾಷಣ ಮಾಡಿದ ಹಿರಿಯ ಸಾಹಿತಿ ಹಾಗೂ ವಿಶ್ರಾಂತ ಪ್ರಾಂಶುಪಾಲ ಡಾ. ಹೆಚ್.ಟಿ. ಕೃಷ್ಣಮೂರ್ತಿ ಅವರು ಮಾತನಾಡಿ, ಗಾಂಧೀಜಿಯವರು ಪ್ರತಿಪಾದಿಸಿದ ಮೂರು ಧ್ಯೇಯಗಳೆಂದರೆ ಹಿಂದೂ ಮುಸ್ಲಿಂ ಐಕ್ಯತೆ, ಅನಕ್ಷರತೆ ನಿವಾರಣೆ ಹಾಗೂ ಸರಳತೆ. ಭರತಖಂಡದ ಮೊದಲರೆಡು ಅಧ್ಯಾಯಗಳು ರಾಮಾಯಣ ಮತ್ತು ಮಹಾಭಾರತ. ಮೂರನೇ ಅಧ್ಯಾಯವೇ ಗಾಂಧೀಜಿ ಎಂದರು. ಗಾಂಧೀಜಿಯವರ ರಾಮ ದೇವಾಲಯದಲ್ಲಿಲ್ಲ. ರಾಮ ಇರುವುದು ಆದರ್ಶ, ಸಂಕಲ್ಪದಲ್ಲಿ ಎಂದ ಅವರು, ಸಾಮಾಜಿಕ ಜಾಲತಾಣಗಳು ಹಬ್ಬಿಸುವ ಸುಳ್ಳನ್ನು ಎಂದಿಗೂ ನಂಬಬೇಡಿ. ಸತ್ಯವನ್ನು ಹೇಳಲಾಗದಿದ್ದರೂ ಸುಳ್ಳನ್ನು ಸುಳ್ಳೆಂದು ಹೇಳುವ ಧೈರ್ಯ ಮಾಡಬೇಕು. ಇತ್ತೀಚೆಗೆ ನಡೆಯುತ್ತಿರುವ ಪ್ರಕೃತಿ ವಿಕೋಪಕ್ಕೆ ಕಾರಣ ಮನುಷ್ಯ ಗಾಂಧೀಜಿಯವರ ಸರಳ ಜೀವನ ಅಳವಡಿಸಿಕೊಳ್ಳದಿರುವುದು ಎಂದರು.

ಸರ್ವಧರ್ಮ ಪ್ರಾರ್ಥನೆಯಲ್ಲಿ ಭಗವದ್ಗೀತೆ, ಕುರಾನ್‌ಮತ್ತು ಬೈಬಲ್‌ವಾಚನಮಾಡಲಾಯಿತು. ಗಾಂಧೀಜಿಯವರ 157ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸ್ನಾತಕೋತ್ತರ, ಪದವೀಪೂರ್ವ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರು ನಗದು ಪುರಸ್ಕಾರ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಅಭಿಷೇಕ್‌ ವಿ., ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಂದ್ರಪ್ಪ ಗುಂಡಪಲ್ಲಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಂಜುನಾಥ ಸ್ವಾಮಿ,‌ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಮಾರುತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್‌ ಹಾಲಾಡಿ, ಕಾರ್ಮಿಕ ಇಲಾಖೆಯ ರಘುನಾಥ್ ಮತ್ತಿತರರು ಉಪಸ್ಥಿತರಿದ್ದರು.

Ad Widget

Related posts

ಕಾಂಗ್ರೆಸ್‌ನತ್ತ ಆಯನೂರು ಮಂಜುನಾಥ್ ?, ಈಶ್ವರಪ್ಪ ಎದುರು ಸ್ಪರ್ಧೆ

Malenadu Mirror Desk

ಅಂತೂ ಇಂತೂ ಶೆಟ್ಟಿಹಳ್ಳಿಗೆ ಕರೆಂಟ್ ಬರ್‍ತದಂತೆ……,ಆರು ದಶಕಗಳ ಕನಸಿಗೆ ಭಾನುವಾರ ಅಡಿಗಲ್ಲು, 3.6 ಕೋಟಿ ವೆಚ್ಚದಲ್ಲಿ ಭೂಗತ ಕೇಬಲ್

Malenadu Mirror Desk

34 ಕೊಳಚೆ ಪ್ರದೇಶಗಳ 5531 ಕುಟುಂಬಗಳಿಗೆ ಹಕ್ಕುಪತ್ರ

Malenadu Mirror Desk
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.