ಶಿವಮೊಗ್ಗ: ಸಂಘಟನ್ ಸೃಜನ್ ಅಭಿಯಾನದಡಿ ಬ್ಲಾಕ್ ಸಮಿತಿ ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ಪಕ್ಷವು ಶಿವಮೊಗ್ಗ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ವೀಕ್ಷಕರನ್ನು ನೇಮಕ ಮಾಡಿದ್ದು, ನವೆಂಬರ್ ತಿಂಗಳಲ್ಲಿ ಪಕ್ಷದ ಎಲ್ಲ ಬ್ಲಾಕ್ ಮತ್ತು ವಾರ್ಡ್ ಸಮಿತಿ ಅಧ್ಯಕ್ಷರ ನೇಮಕಾತಿ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಕೆಪಿಸಿಸಿ ವೀಕ್ಷಕ ಹರೀಶ್ ಕುಮಾರ್ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮನ್ನು ಒಳಗೊಂಡಂತೆ ವಿಧಾನ ಪರಿಷತ್ ಮಾಜಿ ಸದಸ್ಯ ಡಾ. ಬಿ. ತಿಪ್ಪೇಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ. ಲೋಕೇಶ್ ನಾಯಕ್, ಶಿರಸಿಯ ಜ್ಯೋತಿ ಪಾಟೀಲ್ ಅವರ ತಂಡವು ಶಿವಮೊಗ್ಗ ಜಿಲ್ಲೆಯ ಕೆಪಿಸಿಸಿ ವೀಕ್ಷಕರಾಗಿದ್ದು, ಅವರೊಂದಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ. ಯೋಗೇಶ್ ಕೂಡ ಇರಲಿದ್ದಾರೆ. ಸಂಘಟನ್ ಸೃಜನ್ ಅಭಿಯಾನದ ಎರಡನೇ ಹಂತದ ಪ್ರವಾಸದಲ್ಲಿ ಈ ತಂಡವು ನಾಳೆಯಿಂದಲೇ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಅಭಿಪ್ರಾಯ ಸಂಗ್ರಹಿಸಲಿದೆ ಎಂದು ತಿಳಿಸಿದರು.
ಮುಂಬರುವ ಚುನಾವಣೆಗಳಿಗೆ ಪಕ್ಷವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಎಐಸಿಸಿ ಸೂಚನೆಯಂತೆ ’ಸಂಘಟನ್ ಸೃಜನ್ ಅಭಿಯಾನ’ದ ಎರಡನೇ ಹಂತದ ಪ್ರವಾಸಕ್ಕೆ ಚಾಲನೆ ನೀಡಲಾಗಿದ್ದು, ಅದರ ಭಾಗವಾಗಿ ಈಗ ಶಿವಮೊಗ್ಗ ಜಿಲ್ಲೆಗೆ ನಾಲ್ವರು ಕೆಪಿಸಿಸಿ ವೀಕ್ಷಕರ ತಂಡವು ಆಗಮಿಸಿದೆ. ಜಿಲ್ಲೆಯ ೧೪ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕಕ್ಕೆ ೧೪ ಬ್ಲಾಕ್ ಕಾಂಗ್ರೆಸ್ ಗಳಿಗೆ ಭೇಟಿ ನೀಡಿ, ಬ್ಲಾಕ್ ಪದಾಧಿಕಾರಿಗಳು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಹಾಲಿ ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ ವಿವಿಧ ಮುಖಂಡರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡುವುದರ ಜೊತೆಗೆ ಮಹಿಳೆಯರು, ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಲ್ಪಸಂಖ್ಯಾತರಿಗೆ ಪಕ್ಷದ ಸಂಘಟನೆಯಲ್ಲಿ ಸೂಕ್ತ ಪ್ರಾತಿನಿಧ್ಯ ಕಲ್ಪಿಸುವ ಉದ್ದೇಶವಿದೆ ಎಂದರು.
ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಅಧಿಕಾರ ವಹಿಸಿಕೊಂಡ ಬಳಿಕ ಪಕ್ಷದ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ’ಸಂಘಟನ್ ಸೃಜನ್’ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಈಗಾಗಲೇ ಅಭಿಯಾನದ ಮೊದಲ ಹಂತ ಮುಕ್ತಾಯಗೊಂಡಿದೆ. ಈಗ ಎರಡನೇ ಹಂತದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕ, ಜಿಲ್ಲಾ ಮುಂಚೂಣಿ ಘಟಕಗಳ ಅಧ್ಯಕ್ಷರ ಆಯ್ಕೆ, ಬೂತ್ ಸಮಿತಿಗಳ ರಚನೆ ಹಾಗೂ ಬಿಎಲ್ ಎ ಗಳ ನೇಮಕ ಸೇರಿದಂತೆ ಪಕ್ಷದ ಸಂಘಟನೆಯನ್ನು ತಳಮಟ್ಟದಿಂದ ವ್ಯವಸ್ಥಿತಗೊಳಿಸುವ ಕಾರ್ಯ ನಡೆಯಲಿದೆ. ಅದಕ್ಕಾಗಿ ಜಿಲ್ಲೆಯಲ್ಲಿ ಕೆಪಿಸಿಸಿ ವೀಕ್ಷಕರ ತಂಡವು ಪ್ರವಾಸ ಕೈಗೊಳ್ಳಲಿದೆ ಎಂದರು.
ಕೆಪಿಸಿಸಿ ವೀಕ್ಷಕರ ತಂಡವು ಅ.೬ ರಂದು ಶಿವಮೊಗ್ಗ ಉತ್ತರ ಹಾಗೂ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕ ಕುರಿತು ಅಭಿಪ್ರಾಯ ಸಂಗ್ರಹಿಸಲಿದೆ. ಅದೇ ರೀತಿ ಅ.೭ ರಂದು ಸೊರಬ, ಆನವಟ್ಟಿ, ಅ.೧೩ ರಂದು ಸಾಗರ, ಹೊಸನಗರ, ಅ.೧೪ ರಂದು ಶಿಕಾರಿಪುರ ಹಾಗೂ ಶಿರಾಳಕೊಪ್ಪ, ಅ.೧೫ ರಂದು ಭದ್ರಾವತಿ ನಗರ, ಹೊಳೆಹೊನ್ನೂರು ಹಾಗೂ ಶಿವಮೊಗ್ಗ ಗ್ರಾಮಾಂತರ, ಅ.೧೬ ರಂದು ಭದ್ರಾವತಿ ಗ್ರಾಮಾಂತರ, ತೀರ್ಥಹಳ್ಳಿ ನಗರ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕ ಕುರಿತು ಅಭಿಪ್ರಾಯ ಸಂಗ್ರಹಿಸಲಿದೆ ಎಂದರು.
ಅಭಿಪ್ರಾಯ ಸಂಗ್ರಹಣೆಯ ಪ್ರಕ್ರಿಯೆಯು ಈ ತಿಂಗಳೊಳಗೆ ಮುಕ್ತಾಯಗೊಳ್ಳಲಿದೆ. ಇದು ಪೂರ್ಣಗೊಂಡ ಬಳಿಕ ಒಂದು ವಾರದೊಳಗೆ ಮುಂದಿನ ಹಂತದ ಸಂಘಟನಾ ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸುವ ಉದ್ದೇಶವಿದೆ. ಪಕ್ಷದ ಹಿರಿಯ ನಾಯಕರು ನೀಡಿರುವ ಸೂಚನೆಯಂತೆ ಪ್ರಾಮಾಣಿಕವಾಗಿ ಹಾಗೂ ಜವಾಬ್ದಾರಿಯಿಂದ ಸಂಘಟನಾ ಕಾರ್ಯವನ್ನು ಕೈಗೊಳ್ಳಲಾಗುವುದು ಎಂದು ಹರೀಶ್ ಕುಮಾರ್ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಪಕ್ಷದ ಸಂಘಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಕಾರ್ಯನಿರ್ವಹಿಸಬೇಕು. ಚುನಾವಣಾ ಸಮಿತಿ ಸೇರಿದಂತೆ ಪಕ್ಷದ ಪ್ರಮುಖ ಸಭೆಗಳಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಕ್ತ ಸ್ಥಾನಮಾನ ನೀಡಬೇಕು. ಅವರ ಅಭಿಪ್ರಾಯಕ್ಕೂ ಮಹತ್ವ ನೀಡಬೇಕು ಎಂಬುದು ಪಕ್ಷದ ತೀರ್ಮಾನವಾಗಿದೆ ಎಂದು ಇದೇ ವೇಳೆ ಅವರು ವಿವರಿಸಿದರು.
ಶಿವಮೊಗ್ಗ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಉಳಿದ ನಾಲ್ಕು ಕ್ಷೇತ್ರಗಳಲ್ಲಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಹಾಗೂ ಪಕ್ಷದ ಹಿರಿಯ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು.
ಗೋಷ್ಠಿಯಲ್ಲಿ ಕೆಪಿಸಿಸಿ ವೀಕ್ಷಕರಾದ ಡಾ. ತಿಪ್ಪೇಸ್ವಾಮಿ, ಜ್ಯೋತಿ ಪಾಟೀಲ್, ಲೋಕೇಶ್ ನಾಯಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ. ಯೋಗೇಶ್, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಮಾಜಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್. ರಮೇಶ್, ರಾಜ್ಯ ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ. ಗೌಡ, ಸೂಡಾ ಅಧ್ಯಕ್ಷ ಮಧುಸೂದನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಟಿ. ಹಾಲಪ್ಪ, ಮುಖಂಡರಾದ ಎಸ್. ರವಿಕುಮಾರ್, ಧೀರರಾಜ್ ಹೊನ್ನವಿಲೆ, ಎಸ್.ಪಿ. ದಿನೇಶ್, ಶಿವಾನಂದ್, ಬಾಬು ಇದ್ದರು.
ಕಾಗೋಡು ತಿಮ್ಮಪ್ಪ, ಮಂಜುನಾಥ್ ಭಂಡಾರಿ ಸೇರಿದಂತೆ ಹಿರಿಯ ನಾಯಕರು, ವಿಧಾನ ಪರಿಷತ್ ಸದಸ್ಯರು, ಶಾಸಕರು, ಮಾಜಿ ಶಾಸಕರು ಹಾಗೂ ಸೋತ ಅಭ್ಯರ್ಥಿಗಳನ್ನೂ ಒಳಗೊಂಡಂತೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟಿಸಬೇಕಾಗಿದೆ. ಮುಂದಿನ ಚುನಾವಣೆಯಲ್ಲಿ ಜಿಲ್ಲೆಯ ಏಳು ಕ್ಷೇತ್ರಗಳಲ್ಲೂ ಪಕ್ಷದ ಗೆಲುವಿನ ಗುರಿ ಹೊಂದಲಾಗಿದೆ
-ಹರೀಶ್ ಕುಮಾರ್ ಕೆಪಿಸಿಸಿ ವೀಕ್ಷಕ


