Malenadu Mitra
ರಾಜ್ಯಶಿವಮೊಗ್ಗ

ನಾಡ ಹಬ್ಬ ದಸರಾದಲ್ಲಿ ವಂದೇಮಾತರಂ ವಿವಾದ, ಕಾರ್ಯಕ್ರಮ ಬಹಿಷ್ಕರಿಸಿದ ಕಾಂಗ್ರೆಸ್ ಮುಖಂಡರು.

ಶಿವಮೊಗ್ಗ: ಶಿವಮೊಗ್ಗ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಪೂರ್ಣ ವಂದೇ ಮಾತರಂ ಹಾಡಿದ ವಿಚಾರ ವಿವಾದಕ್ಕೆ ಕಾರಣವಾಯಿತು. ಸರ್ಕಾರದ ಸುತ್ತೋಲೆಯನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್‌ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಕಾರ್ಯಕ್ರಮದಿಂದ ಹೊರ ನಡೆದರು.

ನಗರದ ಕೋಟೆ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ ನಟ ಶ್ರೀನಾಥ್‌ ಅವರು ದಸರಾ ಮಹೋತ್ಸವವನ್ನು ಉದ್ಘಾಟಿಸಿದರು. ಇದಕ್ಕೂ ಮುನ್ನ ವಂದೇ ಮಾತರಂ ಹಾಗೂ ನಾಡಗೀತೆ ಗಾಯನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ವಂದೇ ಮಾತರಂನ ಎರಡು ಚರಣಗಳಿಗೆ ಮಾತ್ರ ಸಂಗೀತ ಸಿದ್ಧಪಡಿಸಲಾಗಿತ್ತು. ಗಾಯಕಿಯರು ಎರಡು ಚರಣಗಳನ್ನು ಹಾಡಿದ ಬಳಿಕ ನಾಡಗೀತೆಯ ಸಂಗೀತ ಆರಂಭವಾಯಿತು. ಆದರೂ ಗಾಯಕಿಯರು ವಂದೇ ಮಾತರಂ ಗಾಯನ ಮುಂದುವರಿಸಿದರು. ಬಳಿಕ ಸಂಗೀತ ನಿಲ್ಲಿಸಲಾಯಿತು. ಗಾಯಕಿಯರು ಪೂರ್ಣ ವಂದೇ ಮಾತರಂ ಹಾಡಿದ ನಂತರ ನಾಡಗೀತೆ ಆರಂಭವಾಯಿತು.

ಆಯುಕ್ತರ ವಿರುದ್ಧ ಆಕ್ರೋಶ

ಸರ್ಕಾರದ ಸುತ್ತೋಲೆಯನ್ನು ಉಲ್ಲಂಘಿಸಿ ಪೂರ್ಣ ವಂದೇ ಮಾತರಂ ಹಾಡಿಸಲಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಎಚ್‌.ಸಿ. ಯೋಗೇಶ್‌ ಸೇರಿದಂತೆ ಕಾಂಗ್ರೆಸ್‌ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು. ಜವಳಿ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್‌ ಗೌಡ, ಸೂಡಾ ಅಧ್ಯಕ್ಷ ಮಧುಸೂದನ್‌, ಮಾಜಿ ಕಾರ್ಪೊರೇಟರ್‌ಗಳಾದ ನಾಗರಾಜ ಕಂಕಾರಿ, ಪಾಲಾಕ್ಷಿ, ಯಮುನಾ ರಂಗೇಗೌಡ, ರೇಖಾ ರಂಗನಾಥ್‌ ಸೇರಿದಂತೆ ಮುಖಂಡರು ಹಾಗೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಯೋಗೇಶ್‌ ಅವರು ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರನ್ನು ವೇದಿಕೆಯಲ್ಲಿಯೇ ತರಾಟೆಗೆ ತೆಗೆದುಕೊಂಡರು. ಬಳಿಕ ಕಾರ್ಯಕ್ರಮದಿಂದ ಹೊರ ನಡೆಯುವುದಾಗಿ ಘೋಷಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಯೋಗೇಶ್‌, ‘ಸರ್ಕಾರದ ಸುತ್ತೋಲೆಯನ್ನು ಧಿಕ್ಕರಿಸಿ ಪೂರ್ಣ ವಂದೇ ಮಾತರಂ ಹಾಡಿಸಲಾಗಿದೆ. ದಸರಾ ಉಸ್ತುವಾರಿ ವಹಿಸಿರುವ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕು. ನಾವು ದಸರಾ ವಿರೋಧಿಗಳಲ್ಲ. ಆದರೆ, ಸರ್ಕಾರದ ಸುತ್ತೋಲೆಗೆ ಬೆಲೆ ನೀಡದ ಕಾರ್ಯಕ್ರಮದಲ್ಲಿ ಇರುವುದಿಲ್ಲ’ ಎಂದರು.

‘ಕಸ್ತೂರಿರಂಗನ್ ವರದಿ ಕುರಿತು ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಜಿಲ್ಲೆಗೆ ಬಂದಾಗ ಆಟ ಆಡುದ್ಯಲ್ಲ ಚನ್ನಬಸಪ್ಪ. ವರದಿಗೆ ವಿರೋಧ ವ್ಯಕ್ತಪಡಿಸಲು ಜನರಿಗೆ ಅವಕಾಶ ಕಲ್ಪಿಸುವುದು ನಮ್ಮ ಉದ್ದೇಶವಾಗಿತ್ತು. ಆದರೆ, ಅಂದು ಅದಕ್ಕೆ ಅಡ್ಡಿಪಡಿಸಲಾಯಿತು. ನಾವು ದಸರಾ ಕಾರ್ಯಕ್ರಮಕ್ಕೆ ಅವಮಾನ ಮಾಡುತ್ತಿಲ್ಲ. ದೇವಿಯ ಬಗ್ಗೆ ನಮಗೆ ಗೌರವವಿದೆ. ದಸರಾ ಮಹೋತ್ಸವಕ್ಕೆ ಸರ್ಕಾರದಿಂದ ₹50 ಲಕ್ಷ ಅನುದಾನ ನೀಡುವಂತೆ ಮನವಿ ಮಾಡಿದ್ದೇವೆ. 11 ದಿನಗಳ ಕಾರ್ಯಕ್ರಮಕ್ಕೆ ನಮ್ಮ ಬೆಂಬಲವಿದೆ. ಆದರೆ, ಸರ್ಕಾರದ ಆದೇಶಕ್ಕೆ ಬೆಲೆ ಇಲ್ಲದಿದ್ದರೆ ನಾವು ನಿಮ್ಮೊಂದಿಗೆ ಏಕೆ ನಿಲ್ಲಬೇಕು? ಈ ವಿಚಾರವಾಗಿ ಮಹಾನಗರ ಪಾಲಿಕೆ ಆಯುಕ್ತರು ಮುಂದಿನ ದಿನಗಳಲ್ಲಿ ಉತ್ತರ ನೀಡಬೇಕು’ ಎಂದು ಹೇಳಿದರು.

ಬಳಿಕ ಮಹಾನಗರ ಪಾಲಿಕೆ ಹಾಗೂ ಶಾಸಕ ಚನ್ನಬಸಪ್ಪ ಅವರ ವಿರುದ್ಧ ಘೋಷಣೆ ಕೂಗಿದ ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ಕಾರ್ಯಕ್ರಮದಿಂದ ಹೊರ ನಡೆದರು.

Ad Widget

Related posts

ನೆಹರೂ ಕುಟುಂಬದ ಬಗ್ಗೆ ಮಾತನಾಡುವ ನೈತಿಕತೆ  ಸಿ.ಟಿ. ರವಿಗೆ ಇಲ್ಲ : ಬೇಳೂರು ಗೋಪಾಲ ಕೃಷ್ಣ

Malenadu Mirror Desk

ಬೂತ್ ಮಟ್ಟದಲ್ಲಿ ಗರಿಷ್ಟ ಲಸಿಕೆ ನೀಡಲು ಕ್ರಮ: ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ

Malenadu Mirror Desk

ಎಸಿಬಿ ಬಲೆಗೆ ಎಂಜಿನಿಯರ್

Malenadu Mirror Desk
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.