Malenadu Mitra
ರಾಜ್ಯಶಿವಮೊಗ್ಗಸಾಗರಸೊರಬ

ಕಾಗೋಡು ತಿಮ್ಮಪ್ಪರಿಗೆ ರಾಜ್ಯೋತ್ಸವ ಪ್ರಶಸ್ತಿ , ಜನ ಸೇವೆಗೆ ಸಂದ ಗೌರವ

ಶಿವಮೊಗ್ಗ: ಹಿರಿಯ ಸಮಾಜವಾದಿ ರಾಜಕೀಯ ಮುತ್ಸದ್ದಿಯಾದ ಮಾಜಿ ಸಚಿವರು ಹಾಗೂ ಮಾಜಿ ಸ್ಪೀಕರ್‌ ಆದ ಕಾಗೋಡು ತಿಮ್ಮಪ್ಪ ಅವರಿಗೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ. ಸುಧೀರ್ಘ ರಾಜಕಾರಣದಲ್ಲಿ ಅವರು ಸಲ್ಲಿಸಿರುವ ಸಮಾಜ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ ಈ ಗೌರವ ಸಲ್ಲಿಸಿದೆ. ವಕೀಲರಾಗಿ ರಾಜಕೀಯ ಕ್ಷೇತ್ರಕ್ಕೆ ಬಂದ ಕಾಗೋಡು ತಿಮ್ಮಪ್ಪ ಅವರು ಮೊದಲು ಪ್ರಜಾ ಸೋಷಿಯಲಿಸ್ಟ್‌ ಪಾರ್ಟಿಯಿಂದ ಚುನಾವಣಾ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು. ಬಳಿಕ ಕಾಂಗ್ರೆಸ್‌ ಪಕ್ಷ ಸೇರಿ ಅವರು ಶಾಸಕರಾಗಿ, ವಿಧಾನ ಪರಿಷತ್‌ ಸದಸ್ಯರಾಗಿ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾಗಿ, ಸಚಿವರಾಗಿ ವಿಧಾನ ಸಭೆ ಸ್ಪೀಕರ್‌ ಆಗಿ ಕಾರ್ಯನಿರ್ವಹಿಸಿದ್ದರು.

ಶಾಂತವೇರಿ ಗೋಪಾಲಗೌಡರ ಗರಡಿಯಲ್ಲಿ ಪಳಗಿದ ಕಾಗೋಡು ತಿಮ್ಮಪ್ಪ ಅವರು, ಸಮಾಜವಾದಿ ಸಿದ್ಧಾಂತದಡಿಯಲ್ಲಿ ರಾಜಕೀಯ ಹೋರಾಟ ಮತ್ತು ಸಮಾಜ ಸೇವೆಯನ್ನು ಮಾಡಿದವರು. ಐತಿಹಾಸಿಕ ಕಾಗೋಡು ಚಳವಳಿಯ ಕಾರಣದಿಂದ ಜಾರಿಗೆ ಬಂದ ಭೂ ಸುಧಾರಣಾ ಕಾಯಿದೆ ಜಾರಿಯಲ್ಲಿ ಕಾಗೋಡು ತಿಮ್ಮಪ್ಪ ಅವರ ಪಾತ್ರ ಪ್ರಮುಖವಾದುದಾಗಿದೆ. ಭೂ ಸುಧಾರಣಾ ಕಾಯಿದೆ ಜಾರಿಗೆ ಅಂದಿನ ದೇವರಾಜು ಅರಸು ಸರ್ಕಾರ ರಚನೆ ಮಾಡಿದ್ದ ಸದನ ಸಮಿತಿ ಸದಸ್ಯರಾಗಿದ್ದ ಕಾಗೋಡು ತಿಮ್ಮಪ್ಪ ಅವರು ಈ ಕಾಯಿದೆ ರೂಪಿಸುವಲ್ಲಿ ಪ್ರಮುಖ ಪಾತ್ರದಾರಿಯಾಗಿದ್ದರು.

ಸಾಮಾಜಿಕ ನ್ಯಾಯದ ತಳಹದಿಯ ಮೇಲೆಯೇ ಇಡೀ ರಾಜಕೀಯ ಜೀವನ ಸಾಗಿಸಿದ್ದ ಕಾಗೋಡು ತಿಮ್ಮಪ್ಪರ ಅವಧಿಯಲ್ಲಿ ಸೂರಿಲ್ಲದವರಿಗೆ ಸೂರು, ಭೂ ರಹಿತರಿಗೆ ಭೂಮಿ ಕೊಡಿಸಿದ್ದಾರೆ. ಕಂದಾಯ ಸಚಿವರಾಗಿದ್ದ ಅವಧಿಯಲ್ಲಿ ವಾಸಿಸುವವನೆ ಮನೆಯೊಡೆಯ ಎಂಬ ಕ್ರಾಂತಿಕಾರಿ ಕಾನೂನು ಜಾರಿಗೆ ತಂದಿದ್ದರು. ಅಜಲು ಪದ್ಧತಿ ನಿವಾರಣೆ, ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸುವ ಮೂಲಕ ಸಮಾಜದ ಕಟ್ಟಕಡೆಯ ಜನರಿಗೂ ನ್ಯಾಯ ಕೊಡಿಸುವಲ್ಲಿ ಕಾಗೋಡು ತಿಮ್ಮಪ್ಪ ತಮ್ಮ ಬದ್ಧತೆಯನ್ನು ತೋರಿದ್ದರು. ರಾಜಕೀಯ ಅಧಿಕಾರ ಇರಲಿ, ಬಿಡಲಿ ಯಾವತ್ತೂ ಜನರೊಂದಿಗೆ ಇರುವ ಕಾಗೋಡು ತಿಮ್ಮಪ್ಪ ಅವರು, ಬಡಜನರ ಧ್ವನಿಯಾಗಿ ಕೆಲಸ ಮಾಡಿದವರು.
ವಿಧಾನ ಸಭೆ ಸ್ಪೀಕರ್‌ ಆಗಿಯೂ ತಮ್ಮ ಚಾಪು ಮೂಡಿಸಿರುವ ಕಾಗೋಡು ತಿಮ್ಮಪ್ಪ ಅವರು, ಸರ್ಕಾರ ಸರದಿಕ್ಕಿನಲ್ಲಿ ಕೆಲಸ ಮಾಡುವಂತೆ ಮಾಡುವುದಲ್ಲದೆ, ಶಾಸಕರು ಮತ್ತು ಸಚಿವರುಗಳಿಗೆ ಹೆಡ್‌ ಮಾಸ್ಟರ್‌ ರೀತಿ ಆಡಳಿತ ಮತ್ತು ಕಾನೂನಿನ ಪಾಠ ಮಾಡಿ ಗಮನ ಸೆಳೆದಿದ್ದರು. ಜೀವನದ ಸಂಧ್ಯಾಕಾಲದಲ್ಲಿಯೂ ಬಡಜನರ ಬಗ್ಗೆ ಚಿಂತನೆ ಮಾಡುವ ಮತ್ತು ಕಿರಿಯ ತಲೆಮಾರಿನ ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡುವ ಕಾಗೋಡು ತಿಮ್ಮಪ್ಪ ಅವರ ಹೋರಾಟ ಮತ್ತು ಬದ್ಧತೆಯ ಸಮಾಜಸೇವೆಗೆ ಈಗ ರಾಜ್ಯೋತ್ಸವ ಪ್ರಶಸ್ತಿಯ ಗರಿ ಮೂಡಿದೆ.

ಸಮಾಜದ ಕಟ್ಟಕಡೆಯ ವ್ಯಕ್ತಿಯ ಹಕ್ಕುಗಳಿಗಾಗಿ ಹೋರಾಡಿದ ಕಾಗೋಡು ತಿಮ್ಮಪ್ಪ ಅವರು, ಜನಪರ ಚಿಂತನೆ, ಸಾಮಾಜಿಕ ನ್ಯಾಯದ ಬದ್ಧತೆ ಹಾಗೂ ಸರಳ ಜೀವನದ ಮೂಲಕ ರಾಜಕೀಯ ಕ್ಷೇತ್ರದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಅವರ ದೀರ್ಘಕಾಲದ ಸಾರ್ವಜನಿಕ ಸೇವೆ ಮತ್ತು ಹೋರಾಟದ ಬದುಕಿಗೆ ರಾಜ್ಯೋತ್ಸವ ಪ್ರಶಸ್ತಿ ಸಂದಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ಹಿರಿಯ ನಾಯಕನನ್ನು ಅಭಿನಂದಿಸಿದ ಸಚಿವ ಮಧುಬಂಗಾರಪ್ಪ

ಸಾಗರ: ಸರಳತೆ, ಜನಪರ ಕಾಳಜಿ ಮತ್ತು ಹೋರಾಟದ ಬದುಕಿನ ಪ್ರತೀಕವಾಗಿರುವ ಕಾಂಗ್ರೆಸ್‌ನ ಹಿರಿಯ ನಾಯಕ, ಮಾಜಿ ಸಚಿವ ಹಾಗೂ ವಿಧಾನಸಭೆಯ ಮಾಜಿ ಸ್ಪೀಕರ್ ಡಾ. ಕಾಗೋಡು ತಿಮ್ಮಪ್ಪ ಅವರಿಗೆ ರಾಜ್ಯದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿರುವ ಹಿನ್ನೆಲೆಯಲ್ಲಿ, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಇಂದು ಸಾಗರದಲ್ಲಿರುವ ಕಾಗೋಡು ತಿಮ್ಮಪ್ಪ ಅವರ ನಿವಾಸಕ್ಕೆ ತೆರಳಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಸಚಿವ ಮಧು ಬಂಗಾರಪ್ಪ ಅವರು ವಿಡಿಯೋ ಕರೆ ಮಾಡಿ, ಕಾಗೋಡು ತಿಮ್ಮಪ್ಪ ಅವರೊಂದಿಗೆ ಮಾತನಾಡಿಸಿದರು. ಹಿರಿಯ ನಾಯಕನಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದಕ್ಕೆ ಮುಖ್ಯಮಂತ್ರಿ ಶುಭಾಶಯ ತಿಳಿಸಿ, ರಾಜಕೀಯ ಕ್ಷೇತ್ರದಲ್ಲಿ ಕಾಗೋಡು ತಿಮ್ಮಪ್ಪ ಅವರ ಸೇವೆ ಅನುಕರಣೀಯವಾಗಿದೆ. ಭಗವಂತ ನಿಮಗೆ ಉತ್ತಮ ಆರೋಗ್ಯ ನೀಡಲಿ. ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಹಾರೈಸಿದರು.

ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಲು ಬೆಂಗಳೂರಿಗೆ ಆಗಮಿಸುವುದು ಕಷ್ಟವಾಗಬಹುದೆಂಬ ಹಿನ್ನೆಲೆಯಲ್ಲಿ, ಹೆಲಿಕಾಪ್ಟರ್ ವ್ಯವಸ್ಥೆ ಮಾಡಬೇಕೇ ಎಂದು ಮುಖ್ಯಮಂತ್ರಿ ವಿಚಾರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಗೋಡು ತಿಮ್ಮಪ್ಪ ಅವರು, “ಬೇಡ, ನಾನು ಹೇಗೋ ಬರುವೆ” ಎಂದು ತಮ್ಮ ಸರಳ ಸ್ವಭಾವವನ್ನು ಮತ್ತೊಮ್ಮೆ ಮೆರೆದರು.

ಕಾಗೋಡು ಅವರ ಮನೆಗೆ ತೆರಳಿ ಪ್ರಶಸ್ತಿ ಪ್ರದಾನ: ಮಧು ಬಂಗಾರಪ್ಪ

ವಯೋಸಹಜ ಅನಾರೋಗ್ಯದ ಹಿನ್ನೆಲೆಯಲ್ಲಿ ಕಾಗೋಡು ತಿಮ್ಮಪ್ಪ ಅವರು ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಬೆಂಗಳೂರಿಗೆ ಬಂದು ಪ್ರಶಸ್ತಿ ಸ್ವೀಕರಿಸಲು ಅವರಿಗೆ ತೊಂದರೆಯಾಗಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರವೇ ಅವರ ಮನೆಗೆ ತೆರಳಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಈ ಸಂದರ್ಭದಲ್ಲಿ ಕಾಗೋಡು ತಿಮ್ಮಪ್ಪ ಅವರು ಸಚಿವ ಮಧು ಬಂಗಾರಪ್ಪ ಅವರ ಕೈಗೆ ಮುತ್ತಿಟ್ಟು ಪ್ರೀತಿಯಿಂದ ಮಾತನಾಡಿ, “ಸಣ್ಣ ವಯಸ್ಸಿನಲ್ಲೇ ಸಚಿವರಾಗಿದ್ದೀರಿ. ಒಳ್ಳೆಯ ಕೆಲಸ ಮಾಡಿ, ರಾಜಕೀಯದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಿರಿ” ಎಂದು ಹಾರೈಸಿದರು. ಹಿರಿಯ ನಾಯಕನ ಈ ಪ್ರೀತಿ ಮತ್ತು ಆಶೀರ್ವಾದದ ಕ್ಷಣ ಎಲ್ಲರ ಗಮನ ಸೆಳೆಯಿತು.

ಕಾಗೋಡು ತಿಮ್ಮಪ್ಪರೊಂದಿಗೆ ಮಾತನಾಡುವ ಸಂದರ್ಭದಲ್ಲಿ ಸಚಿವ ಶ್ರೀ ಮಧು ಬಂಗಾರಪ್ಪ ಅವರು, ʻʻಶರಾವತಿ ಸಂತ್ರಸ್ತರಿಗೆ ಭೂಹಕ್ಕು ನೀಡುವ ಸಂಬಂಧ ಸಮಗ್ರವಾಗಿ ಪರಿಶೀಲನೆ ನಡೆಸಿ ಪ್ರಸ್ತಾವನೆ ಸಿದ್ಧಪಡಿಸಿದ್ದೇವೆ. ಸದ್ಯವೇ ಇದಕ್ಕೆ ಸಚಿವ ಸಂಪುಟದ ಒಪ್ಪಿಗೆ ಪಡೆದು, ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ. ಶೀಘ್ರದಲ್ಲೇ ಅವರಿಗೆಲ್ಲಾ ಹಕ್ಕು ಪತ್ರ ದೊರೆಯುವಂತೆ ಮಾಡಿ, ನಿಮ್ಮ ಬಹುದಿನಗಳ ಕನಸು ಈಡೇರುವಂತೆ ಮಾಡುತ್ತೇವೆʼʼ ಎಂದು ತಿಳಿಸಿದರು.

Ad Widget

Related posts

ನ್ಯಾಯಯುತ ಹಕ್ಕುಗಳನ್ನು ಪಡೆಯಲು ಈಡಿಗ ಸಮಾಜ ಸಂಘಟಿತವಾಗಬೇಕು, ಸಾರಗನ ಜಡ್ಡು ಕಾರ್ತಿಕೇಯ ಕ್ಷೇತ್ರದ ಯೋಗೇಂದ್ರ ಗುರೂಜಿ ಅಭಿಮತ

Malenadu Mirror Desk

ನೈಜ ಕತೆಯ ಸಿನಿಮಾಯಶಸ್ವಿಯಾಗುತ್ತದೆ ಸಂವಾದದಲ್ಲಿ ಚಿತ್ರನಟ ದೊಡ್ಡಣ್ಣ ಅಭಿಮತ

Malenadu Mirror Desk

ಸಿಎಂ ನಿವಾಸಕ್ಕೆ ರಂಭಾಪುರಿ ಶ್ರೀಗಳ ಭೇಟಿ

Malenadu Mirror Desk
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.