ಕೋವಿಡ್ ತಡೆಯುವ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ವರ್ತನೆಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಿಸಿದ್ದಾರೆ.
ಜಿಲ್ಲಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಭಾಂಗಣದಲ್ಲಿ ಸಿಮ್ಸ್ ಆಡಳಿತಾಧಿಕಾರಿಗಳು, ಕೊರೊನ ನಿಯಂತ್ರಣ ಕಾರ್ಯದಲ್ಲಿ ನಿರತವಾಗಿರುವ ವೈದ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು ತಮ್ಮ ಅಸಮಾಧಾನ ಹೊರಹಾಕಿದರು.
ಜಿಲ್ಲೆಯಲ್ಲಿ ಮಾರಣಾಂತಿಕ ಕೊರೊನ ಮಿತಿಮೀರುತ್ತಿದೆ. ಚುನಾಯಿತ ಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಆರೋಗ್ಯ ಇಲಾಖೆಯ ಸಮಸ್ತ ಸಿಬ್ಬಂದಿಗಳೊಂದಿಗೆ ಸೋಂಕು ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಈ ಸಂದರ್ಭದಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರುವ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ವರ್ತನೆ ಅಕ್ಷಮ್ಯ ಎಂದು ಕಿಡಿಕಾರಿದರು.
ಮಹತ್ವದ ಸಭೆಗೆ ಗೈರುಹಾಜರಾಗಿರುವ ವೈದ್ಯರಿಗೆ ಕಾರಣ ಕೇಳಿ ನೋಟೀಸ್ ಜಾರಿ ಮಾಡುವಂತೆ ಹಾಗೂ ಮುಂದಿನ ದಿನಗಳಲ್ಲಿ ಇದು ಪುನರಾವರ್ತನೆಯಾದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸಿಮ್ಸ್ ಆಡಳಿತಾಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಳಿ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುವ ಡಿ.ಗ್ರೂಪ್, ನರ್ಸ್ ಮತ್ತು ಇತರೆ ವಿಭಾಗಗಳ ಸಿಬ್ಬಂದಿಗಳ ಹಾಜರಾತಿಯನ್ನು ಸಂಬಂಧಿಸಿದ ಅಧಿಕಾರಿಗಳು ಗಮನಿಸಬೇಕು. ಸಕಾಲದಲ್ಲಿ ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗಳ ವಿರುದ್ಧ ಕ್ರಮ ಅನಿವಾರ್ಯವಾಗಲಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಕೋವಿಡ್ ಕಾರ್ಯಕ್ಕಾಗಿ ಬಳಕೆಯಾಗುತ್ತಿರುವ ಸಿಬ್ಬಂದಿಗಳು, ಲಭ್ಯವಿರುವ ಲಸಿಕೆ, ಹಾಸಿಗೆಗಳು, ಕೊರೊನವಲ್ಲದ ಇತರೆ ಕಾಯಿಲೆಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಗಮಿಸುವ ರೋಗಿಗಳ ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳ ಕುರಿತು ವೈದ್ಯಾಧಿಕಾರಿಗಳಿಂದ ಸಚಿವರು ಮಾಹಿತಿ ಪಡೆದರು.
ಪಿಪಿಟಿ ಕಿಟ್ ಸುಲಭವಾಗಿ ಸಿಗಬೇಕು
ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ದಾಖಲಾಗಿರುವ ಕೋವಿಡ್ ರೋಗಿಗಳನ್ನು ಸಂದರ್ಶಿಸಲು ಬರುವವರಿಗೆ ಪಿಪಿಟಿ ಕಿಟ್ ಧರಿಸುವುದು ಕಡ್ಡಾಯ. ಪ್ರತಿಬಾರಿ ಹೊಸ ಕಿಟ್ ಧರಿಸಬೇಕು. ಇದರ ಖರೀದಿ ಕಷ್ಟವಾಗುತ್ತದೆ. ಬಳಸಿದ್ದನ್ನೇ ಮತ್ತೆ ಬಳಸಿದರೆ ಸೋಂಕು ಹರಡುತ್ತದೆ ಆದ್ದರಿಂದ ಸಾರ್ವಜನಿಕರಿಗೆ ಈ ಕಿಟ್ಗಳು ಸರಳವಾಗಿ, ಸುಲಭ ಬೆಲೆಯಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು, ವೈದ್ಯಕೀಯ ಸಂಸ್ಥೆಯ ಆಡಳಿತಾಧಿಕಾರಿಗಳು, ನಿರ್ದೇಶಕರು ಹಾಗೂ ವೈದ್ಯಾಧಿಕಾರಿಗಳು ಸಭೆ ಸೇರಿ ತುರ್ತು ಮತ್ತು ಅಗತ್ಯ ನಿರ್ಣಯವನ್ನು ಕೈಗೊಂಡು ಮಾಹಿತಿ ನೀಡುವಂತೆ ಹಾಗೂ ಸರಳವಾಗಿ ಜನಸಾಮಾನ್ಯರಿಗೆ ಕಿಟ್ಗಳು ದೊರೆಯುವಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದರು.
ಆಹಾರ ಪೂರೈಕೆ
ಆಸ್ಪತ್ರೆಗೆ ಬರುವ ರೋಗಿಗಳ ಸಂಬಂಧಿಕರು ಹಾಗೂ ಚಿಕಿತ್ಸೆಗೆ ದಾಖಲಾದ ರೋಗಿಗಳಿಗೆ ಊಟೋಪಹಾರ ಮತ್ತು ಅಗತ್ಯ ಸಹಕಾರ ಒದಗಿಸಲು ಸ್ಥಳೀಯ ಸ್ವಯಂಸೇವಾ ಸಂಸ್ಥೆಗಳು ಮುಂದಾಗಿದ್ದು, ಆ ಸಂಸ್ಥೆಗಳು ಇನ್ನೂ ಒಂದೆರೆಡು ದಿನದಲ್ಲಿ ಕಾರ್ಯಾರಂಭ ಮಾಡಲಿವೆ. ಅವರಿಗೆ ಸಿಮ್ಸ್ ಆಡಳಿತ ಮಂಡಳಿ ಅಗತ್ಯ ಸಹಕಾರ ನೀಡಬೇಕೆಂದು ಸಚಿವ ಈಶ್ವರಪ್ಪ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್.ವೈಶಾಲಿ, ವಿಧಾನಪರಿಷತ್ ಸದಸ್ಯ ರುದ್ರೇಗೌಡ, ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಸಿಮ್ಸ್ ನಿರ್ದೇಶಕ ಡಾ. ಎಸ್.ಓ.ಸಿದ್ದಪ್ಪ, ಆಡಳಿತಾಧಿಕಾರಿ ಶಿವಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜೇಶ್ ಸುರಗೀಹಳ್ಳಿ, ಜಿಲ್ಲಾ ಸರ್ಜನ್ ಡಾ.ಶ್ರೀನಿವಾಸ್, ಡಾ.ಶ್ರೀಧರ್ ಮತ್ತಿತರರಿದ್ದರು.