Malenadu Mitra
ರಾಜ್ಯಶಿವಮೊಗ್ಗಸಾಗರ

ಗೋವರ್ಧನ ಟ್ರಸ್ಟ್‌; ಅ.7ರಂದು ‘ಗೋ ಸಂಜೀವಿನಿ ಧಾಮ’ಕ್ಕೆ ಶಂಕುಸ್ಥಾಪನೆ; ಅ.8ರಂದು ಗೋಸೇವಾ ಸಂಭ್ರಮ: ಕೆ.ಈ.ಕಾಂತೇಶ್ 

ಶಿವಮೊಗ್ಗ: ಗೋವರ್ಧನ ಟ್ರಸ್ಟ್‌ನ ಒಂದು ವರ್ಷದ ಗೋಸೇವಾ ಪಯಣದ ಅಂಗವಾಗಿ ಅ.7ರಂದು ಅಬ್ಬಲಗೆರೆಯ ನವ್ಯಶ್ರೀ ಈಶ್ವರ ವನದಲ್ಲಿ ‘ಗೋ ಸಂಜೀವಿನಿ ಧಾಮ’ ಅಶಕ್ತ ಗೋವುಗಳ ಆರೈಕೆ ಕೇಂದ್ರಕ್ಕೆ ಶಂಕುಸ್ಥಾಪನೆ ಹಾಗೂ ಅ.8ರಂದು ಶುಭಮಂಗಳ ಸಮುದಾಯ ಭವನದಲ್ಲಿ ‘ಗೋ ಸೇವಾ ಸಂಭ್ರಮ–2026’ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಕೆ.ಈ.ಕಾಂತೇಶ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಲ್ಲಿ ಸಾವಿರಾರು ಮಂದಿ ಪ್ರತಿ ತಿಂಗಳು ₹100ರಂತೆ ಕೊಡುಗೆ ನೀಡುವ ಮೂಲಕ ಗೋಸೇವಾ ಕಾರ್ಯಕ್ಕೆ ಕೈಜೋಡಿಸಿದ್ದಾರೆ. ಗೋವುಗಳ ರಕ್ಷಣೆ, ಪೋಷಣೆ, ಗೋಶಾಲೆಗಳಿಗೆ ನೆರವು, ಮೇವು ಪೂರೈಕೆ, ಸಾವಯವ ಕೃಷಿ ಹಾಗೂ ಗೋ ಉತ್ಪನ್ನಗಳ ಪ್ರಚಾರ ಸೇರಿದಂತೆ ಹಲವು ಕಾರ್ಯಗಳನ್ನು ಟ್ರಸ್ಟ್‌ ಕೈಗೊಂಡಿದೆ ಎಂದರು.

ಗಾಯಗೊಂಡ ಹಾಗೂ ಅನಾರೋಗ್ಯಕ್ಕೊಳಗಾದ ಗೋವುಗಳಿಗೆ ಗೋ ಅಂಬುಲೆನ್ಸ್‌ ಮೂಲಕ ವೈದ್ಯಕೀಯ ನೆರವು ಮತ್ತು ಚಿಕಿತ್ಸೆ ನೀಡಲಾಗಿದೆ. ರಕ್ಷಿಸಲಾದ ಗೋವುಗಳನ್ನು ಮಾಲೀಕರು ವಾಪಸ್‌ ಪಡೆಯದ ಸಂದರ್ಭಗಳಲ್ಲಿ ಅವುಗಳ ಆರೈಕೆ ಮತ್ತು ಚಿಕಿತ್ಸೆಗೆ ‘ಗೋ ಸಂಜೀವಿನಿ ಧಾಮ’ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಅ.7ರಂದು ಮಧ್ಯಾಹ್ನ 1ರಿಂದ 2ರವರೆಗೆ ನಡೆಯುವ ಶಂಕುಸ್ಥಾಪನೆಯನ್ನು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನೆರವೇರಿಸುವರು. ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅಧ್ಯಕ್ಷತೆ ವಹಿಸುವರು ಎಂದರು.

ಅ.8ರಂದು ಬೆಳಿಗ್ಗೆ 10.30ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿ ನಡೆಯುವ ಗೋ ಸೇವಾ ಸಂಭ್ರಮದಲ್ಲಿ ಉಪನ್ಯಾಸ, ಸಂವಾದ, ವಿವಿಧ ಗೋ ತಳಿಗಳ ಪ್ರದರ್ಶನ, ಗೋ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಇರಲಿದೆ. ‘ಅಶ್ವಶಕ್ತಿ’ ಹಾಗೂ ವಿಶ್ವಬಂಧು ಗೋಶಾಲೆಯಲ್ಲಿ ತಯಾರಿಸಿದ ಸಾವಯವ ಗೊಬ್ಬರವನ್ನು ಲೋಕಾರ್ಪಣೆ ಮಾಡಲಾಗುವುದು ಎಂದರು.

ಅಶ್ವಶಕ್ತಿ ಗೊಬ್ಬರವನ್ನು ಕುದುರೆಗಳ ಸಗಣಿಯಿಂದ ವೈಜ್ಞಾನಿಕವಾಗಿ ತಯಾರಿಸಲಾಗುತ್ತಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಮಾರುಕಟ್ಟೆ ವಿಸ್ತರಣೆಗೆ ಯೋಜಿಸಲಾಗಿದೆ. ವಿಶ್ವಬಂಧು ಗೋಶಾಲೆಯಲ್ಲಿ ಗೋವುಗಳ ಸಗಣಿ ಸೇರಿದಂತೆ ವಿವಿಧ ಉತ್ಪನ್ನಗಳಿಂದ ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ ಎಂದರು.

ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ರೈತರೊಂದಿಗೆ ಸಂವಾದ ನಡೆಯಲಿದೆ. ಸಾವಯವ ಕೃಷಿ, ಮಣ್ಣಿನ ಫಲವತ್ತತೆ, ಗೊಬ್ಬರ ಹಾಗೂ ರೈತರ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದು ಎಂದರು.

ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಉಮೇಶ್ ಆರಾಧ್ಯ, ಕಾರ್ಯದರ್ಶಿಗಳಾದ ರಮೇಶ್ ಬಾಬು, ನಾಗೇಶ್ ಎಂ., ಖಜಾಂಚಿ ಎಸ್.ಕೆ. ಶೇಷಾಚಲ, ಸೀತಾರಾಂ, ನಾಗರಾಜ್, ಜಯಸ್ವಾಮಿ, ಉದಯ್ ಕುಮಾರ್, ಶ್ರೀಕಾಂತ್, ಶುಭ ರಾಘವೇಂದ್ರ, ಉಷಾ ಅರುಣ್ ಇದ್ದರು.

ಗೋವುಗಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ: ನವ್ಯಶ್ರೀ ನಾಗೇಶ್

ಶಿವಮೊಗ್ಗದಲ್ಲಿ ಪಶುವೈದ್ಯಕೀಯ ಮಹಾವಿದ್ಯಾಲಯ ಹಾಗೂ ಪಶುವೈದ್ಯಕೀಯ ಪಾಲಿಟೆಕ್ನಿಕ್‌ ಇದ್ದರೂ ಗೋವುಗಳಿಗೆ ಅಗತ್ಯ ಪ್ರಮಾಣದಲ್ಲಿ ಚಿಕಿತ್ಸಾ ಸೌಲಭ್ಯ ದೊರೆಯುತ್ತಿಲ್ಲ. ಬೆಕ್ಕು, ನಾಯಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಗೋವುಗಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವತ್ತ ಸರ್ಕಾರ ಗಮನಹರಿಸಬೇಕು ಎಂದು ಟ್ರಸ್ಟ್ ಕಾರ್ಯದರ್ಶಿ ನವ್ಯಶ್ರೀ ನಾಗೇಶ್ ಒತ್ತಾಯಿಸಿದರು.

ಗೋವುಗಳ ಸಾವಿಗೆ ಪ್ಲಾಸ್ಟಿಕ್‌ ಸೇವನೆಯೂ ಪ್ರಮುಖ ಕಾರಣವಾಗಿದೆ. ಸಾರ್ವಜನಿಕರು ಉಳಿದ ಹಾಗೂ ಹಳಸಿದ ಆಹಾರವನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ಕಟ್ಟಿ ರಸ್ತೆಬದಿಯಲ್ಲಿ ಎಸೆಯಬಾರದು. ಗೋವುಗಳಿಗೆ ಆಹಾರ ನೀಡುವಾಗಲೂ ಪ್ಲಾಸ್ಟಿಕ್‌ ಕವರ್‌ ಸಮೇತ ನೀಡದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದರು.

ವಿಶ್ವಬಂಧು ಗೋಶಾಲೆಯಲ್ಲಿ ಸಾವಯವ ಗೊಬ್ಬರ

ರಾಸಾಯನಿಕ ಗೊಬ್ಬರದ ಅತಿಯಾದ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಗೋವರ್ಧನ ಟ್ರಸ್ಟ್‌ನ ಮಾರ್ಗದರ್ಶನದಲ್ಲಿ ವಿಶ್ವಬಂಧು ಗೋಶಾಲೆಯಲ್ಲಿ ಸಾವಯವ ಗೊಬ್ಬರ ತಯಾರಿಕೆ ಆರಂಭಿಸಲಾಗಿದೆ ಎಂದು ಗೋಶಾಲೆಯ ಉದಯಕುಮಾರ್ ಹಾಗೂ ಜಯಸ್ವಾಮಿ ತಿಳಿಸಿದರು.

ಗೋವುಗಳಿಂದ ದೊರೆಯುವ ಸಗಣಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ಬಳಸಿ ಗೊಬ್ಬರ ತಯಾರಿಸಲಾಗುತ್ತಿದೆ. ಕನ್ನೇರಿ ಮಠದಲ್ಲಿ ತರಬೇತಿ ಹಾಗೂ ಮಾರ್ಗದರ್ಶನ ಪಡೆದ ಬಳಿಕ ಸುಮಾರು 2.5ರಿಂದ 3 ಎಕರೆ ಪ್ರದೇಶದಲ್ಲಿ ಗೋಶಾಲೆ ಆರಂಭಿಸಲಾಗಿದೆ ಎಂದರು.

“ಅಪಘಾತಕ್ಕೊಳಗಾದ ಹಾಗೂ ಅಶಕ್ತ ಗೋವುಗಳನ್ನು ಮಾಲೀಕರು ವಾಪಸ್‌ ಪಡೆಯದ ಸಂದರ್ಭಗಳಲ್ಲಿ ಅವುಗಳ ಆರೈಕೆ ಮತ್ತು ಚಿಕಿತ್ಸೆಗೆ ‘ಗೋ ಸಂಜೀವಿನಿ ಧಾಮ’ ಆರಂಭಿಸಲಾಗುತ್ತಿದೆ.”

— ಕೆ.ಎಸ್. ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ

—————

ಎಸ್‌ಐಆರ್‌ ರಾಜಕೀಯ ಅಸ್ತ್ರವಾಗಬಾರದು: ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ: ವಿಶೇಷ ತೀವ್ರ ಪರಿಷ್ಕರಣೆ(ಎಸ್‌ಐಆರ್‌) ಬಗ್ಗೆ ಇಷ್ಟೊಂದು ಚರ್ಚೆ ನಡೆಯುತ್ತಿರುವುದು ದುರದೃಷ್ಟಕರ. ಮತದಾನದ ಹಕ್ಕನ್ನು ಕಸಿದುಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಎಸ್‌ಐಆರ್‌ ಅನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಬೇರೆ ಜಿಲ್ಲೆ, ರಾಜ್ಯಗಳಿಗೆ ಸ್ಥಳಾಂತರಗೊಂಡವರು ಹಾಗೂ ಮೃತಪಟ್ಟವರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಉಳಿಯಬಾರದು. ಶಿವಮೊಗ್ಗದಲ್ಲಿ ಸುಮಾರು 56 ಸಾವಿರ ಮತದಾರರು ಸ್ಥಳಾಂತರಗೊಂಡಿರುವುದು ಕಂಡುಬಂದಿದೆ. ಅವರಲ್ಲಿ ಮೃತಪಟ್ಟವರೂ ಇದ್ದಾರೆ. ಅಂತಹ ಹೆಸರುಗಳನ್ನು ಪರಿಶೀಲಿಸಿ ತೆಗೆದುಹಾಕಬೇಕಲ್ಲವೇ?” ಎಂದು ಪ್ರಶ್ನಿಸಿದರು.

“ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅವರು ಮುಸ್ಲಿಂ ಹಾಗೂ ದಲಿತ ಮತದಾರರ ಹೆಸರುಗಳನ್ನು ಕೈಬಿಡುವಂತೆ ತಾವು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಇಲ್ಲದ ಮತದಾರರ ಹೆಸರುಗಳನ್ನು ಕೈಬಿಡುವಂತೆ ಮಾತ್ರ ಪತ್ರ ನೀಡಿರುವುದಾಗಿ ಹೇಳಿದ್ದಾರೆ. ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ” ಎಂದರು.

“ಮುಖ್ಯಮಂತ್ರಿಗಳು ಹಲವು ವಿಚಾರಗಳಲ್ಲಿ ವಿಫಲರಾಗುತ್ತಿದ್ದಾರೆ. ಅದನ್ನು ಮುಚ್ಚಿಹಾಕಲು ಎಸ್‌ಐಆರ್‌ ಅನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆ. ಸಾಧು–ಸಂತರ ಸಭೆಯಲ್ಲಿ ‘ನೀವೆಲ್ಲರೂ ನನ್ನ ರಾಯಭಾರಿಗಳು, ನನ್ನ ಸೇವೆ ಮಾಡಬೇಕು’ ಎಂದು ಮುಖ್ಯಮಂತ್ರಿ ಹೇಳಿರುವುದು ಸರಿಯಲ್ಲ” ಎಂದು ಟೀಕಿಸಿದರು.

“ಬಿ.ಕೆ. ಹರಿಪ್ರಸಾದ್‌ ಅವರು ಆರ್‌ಎಸ್‌ಎಸ್‌ ನಿಷೇಧದ ಬಗ್ಗೆ ಮಾತನಾಡಿದ್ದಾರೆ. ಅವರ ಅಪ್ಪನಿಂದಲೂ, ಅಜ್ಜನಿಂದಲೂ ಆಗಲಿಲ್ಲ; ಇವರಿಂದ ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.

“ಎಸ್‌ಐಆರ್‌ ಮತದಾರರ ಪಟ್ಟಿಯನ್ನು ಜರಡಿ ಹಿಡಿಯುವ ಪ್ರಕ್ರಿಯೆ. ಮೃತರು ಹಾಗೂ ಸ್ಥಳಾಂತರಗೊಂಡವರ ಹೆಸರುಗಳನ್ನು ಪರಿಶೀಲಿಸಿ ತೆಗೆದುಹಾಕಬೇಕು. ಅದೇ ವೇಳೆ ಅರ್ಹ ಮತದಾರರ ಹೆಸರುಗಳು ಕೈಬಿಡದಂತೆ ನೋಡಿಕೊಳ್ಳಬೇಕು. ಯಾರಾದರೂ ತಮ್ಮ ಹೆಸರು ಪಟ್ಟಿಯಿಂದ ಬಿಟ್ಟಿರುವುದಾಗಿ ತಿಳಿಸಿದರೆ ನಮ್ಮ ಬಳಿ ಬರಲಿ. ಹೆಸರು ಸೇರ್ಪಡೆಗೆ ನಾವು ಪ್ರಯತ್ನಿಸುತ್ತೇವೆ” ಎಂದು ಹೇಳಿದರು.

“ಯಾರ ಹೆಸರನ್ನಾದರೂ ಕೈಬಿಡುವಂತೆ ಪತ್ರ ಬಂದಿದ್ದರೆ, ಅದರ ಸತ್ಯಾಸತ್ಯತೆ ಪರಿಶೀಲಿಸದೆ ಕ್ರಮ ಕೈಗೊಳ್ಳಬಾರದು. ಎಸ್‌ಐಆರ್‌ ಅನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಂಡು ಜನರಲ್ಲಿ ಗೊಂದಲ ಮೂಡಿಸುವುದನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ” ಎಂದರು.

Ad Widget

Related posts

ಹರತಾಳು ಹಾಲಪ್ಪರ ಅಳಿಯ ಡಾ.ರಾಜ್‌ಕುಮಾರ್ ಸಂಬಂಧಿ

Malenadu Mirror Desk

ಭದ್ರಾವತಿಯಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ರಘು ಶವ ಪತ್ತೆ.

Malenadu Mirror Desk

11 ನೇ ರಾಷ್ಟ್ರೀಯ ಕೂಡೋ ಚಾಂಪಿಯನ್ ಷಿಪ್ ನಲ್ಲಿ ಕರ್ನಾಟಕ ತಂಡದ ಅದ್ಬುತ ಸಾಧನೆ

Malenadu Mirror Desk
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.