Malenadu Mitra
ರಾಜ್ಯಶಿವಮೊಗ್ಗ

ಶಿವಮೊಗ್ಗ ದಸರಾಕ್ಕೆ ಭರ್ಜರಿ ಸಿದ್ಧತೆ: ೧೧ ದಿನಗಳ ಕಾಲ ವೈಭವದ ನಾಡಹಬ್ಬ

ಶಿವಮೊಗ್ಗ: ಶಿವಮೊಗ್ಗ ದಸರಾ ನಾಡಹಬ್ಬವನ್ನು ಈ ಬಾರಿ ಮತ್ತಷ್ಟು ವೈಭವ ಹಾಗೂ ವಿಭಿನ್ನ ಕಾರ್ಯಕ್ರಮಗಳೊಂದಿಗೆ ಆಚರಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಸಜ್ಜಾಗಿದೆ. ಕಳೆದ ಎರಡು ತಿಂಗಳಿನಿಂದ ದಸರಾ ಆಚರಣೆಗೆ ಪೂರ್ವಭಾವಿ ಸಿದ್ಧತೆಗಳನ್ನು ನಡೆಸಲಾಗಿದ್ದು, ಜಿಲ್ಲೆಯ ಪಾರಂಪರಿಕ, ಸಾಂಸ್ಕೃತಿಕ ಹಾಗೂ ವೈವಿಧ್ಯಮಯ ಪರಂಪರೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದ

ಅ.೧೧ ರಂದು ಮಹಾನಗರ ಪಾಲಿಕೆ ಆವರಣದಿಂದ ತಾಯಿ ಚಾಮುಂಡೇಶ್ವರಿಯ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಯು ನಗರದ ಪ್ರಮುಖ ಮಾರ್ಗಗಳ ಮೂಲಕ ಕೋಟೆ ಚಂಡಿಕಾ ಪರಮೇಶ್ವರಿ ದೇವಸ್ಥಾನ ತಲುಪಲಿದೆ. ಇದೇ ಸಂದರ್ಭದಲ್ಲಿ ದೇವಿಯ ಉತ್ಸವಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗುವುದು. ದಸರಾ ಮೆರವಣಿಗೆಯಲ್ಲಿ ಬೆಳ್ಳಿ ಮಂಟಪದಲ್ಲಿ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ದೇವಿಯ ಮುಖವನ್ನು ಚಿನ್ನದಿಂದ ಅಲಂಕರಿಸುವ ವಿಶೇಷ ಯೋಜನೆ ರೂಪಿಸಲಾಗಿದ್ದು, ಚಾಮುಂಡೇಶ್ವರಿಯ ಮೆರವಣಿಗೆಯು ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಶಾಸಕರು ಹಾಗೂ ದಸರಾ ಸಮಿತಿ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಖ್ಯಾತ ನಟ ಶ್ರೀನಾಥ್ ಅವರು ಆಗಮಿಸಲಿದ್ದಾರೆ. ಅವರ ಉಪಸ್ಥಿತಿಯು ದಸರಾ ಉದ್ಘಾಟನಾ ಸಮಾರಂಭಕ್ಕೆ ಮೆರುಗು ತರಲಿದ್ದು, ಅಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ನಿರೀಕ್ಷೆ ಮೂಡಿಸಿದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಸರಾ ಸಂಭ್ರಮಕ್ಕೆ ಅದ್ದೂರಿ ಚಾಲನೆ ನೀಡಲು ಸಿದ್ಧತೆ ನಡೆದಿದೆ ಎಂದರು.


ಚಾಮುಂಡೇಶ್ವರಿ ಮೆರವಣಿಗೆಗೆ ಗಜವೈಭವ


ಸಕ್ರೆಬೈಲ್‌ನ ಆನೆ ಬಿಡಾರದ ಬಹದ್ದೂರ್, ಸೋಮಣ್ಣ ಹಾಗೂ ಸಾಗರ್ ಎಂಬ ಮೂರು ಆನೆಗಳು ಚಾಮುಂಡೇಶ್ವರಿಯನ್ನು ಹೊತ್ತು ಸಾಗಲಿವೆ. ಮೂರು ಆನೆಗಳ ಗಜವೈಭವ ದಸರಾ ಮೆರವಣಿಗೆಗೆ  ಮೆರುಗು ನೀಡಲಿದೆ. ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಬೆಳ್ಳಿ ಮಂಟಪದಲ್ಲಿ ಚಾಮುಂಡೇಶ್ವರಿಯನ್ನು ಪ್ರತಿಷ್ಠಾಪಿಸಿ ಭವ್ಯ ಮೆರವಣಿಗೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ದೇವಿಯ ಮುಖವಾಡವನ್ನು ಚಿನ್ನದಿಂದ ಅಲಂಕರಿಸುವ ವಿಶೇಷ ಯೋಜನೆ ರೂಪಿಸಲಾಗಿದ್ದು, ಮುಂದಿನ ವರ್ಷ ಸುಮಾರು ಒಂದೂವರೆ ಕೋಟಿ ರೂ. ವೆಚ್ಚದ ಈ ಯೋಜನೆ ಕಾರ್ಯಗತಗೊಳ್ಳಲಿದೆ. ಚಾಮುಂಡೇಶ್ವರಿಯ ಮೆರವಣಿಗೆಯು ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾಗಲಿದೆ. ಈ ಬಾರಿ ಒಟ್ಟು ೬ ಚಿನ್ನದ ಬಳೆಗಳನ್ನು ಚಾಮುಂಡೇಶ್ವರಿ ದೇವಿಗೆ ಅರ್ಪಿಸಲಾಗುವುದು ಎಂದರು.

೧೧ ದಿನಗಳ ಕಾಲ ದಸರಾ ಸಂಭ್ರಮ


ದಸರಾ ಈ ಬಾರಿ ೧೧ ದಿನಗಳ ಕಾಲ ನಡೆಯಲಿದೆ. ಸಾಮಾನ್ಯವಾಗಿ ೧೦ ದಿನಗಳ ಕಾಲ ನಡೆಯುತ್ತಿದ್ದ ನವರಾತ್ರಿ ಹಾಗೂ ವಿಜಯದಶಮಿ ಉತ್ಸವವನ್ನು ಹೆಚ್ಚುವರಿ ಒಂದು ದಿನ ವಿಸ್ತರಿಸಲಾಗಿದ್ದು, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಗರದಾದ್ಯಂತ ದಸರಾ ಸಂಭ್ರಮವನ್ನು  ವೈಭವಯುತವಾಗಿ ಆಚರಿಸಲು ಸಿದ್ಧತೆ ನಡೆದಿದೆ.
ಶಿವಪ್ಪನಾಯಕ ಅರಮನೆಯಿಂದ ದೇವಾನುದೇವತೆಗಳ ಮೆರವಣಿಗೆ
ಶಿವಮೊಗ್ಗ ದಸರಾ ಅಂಗವಾಗಿ ಶಿವಪ್ಪನಾಯಕ ಅರಮನೆಯಿಂದ ಸಕಲ ದೇವಾನುದೇವತೆಗಳ ಭವ್ಯ ಮೆರವಣಿಗೆ ನಡೆಯಲಿದೆ. ೨೦೦ಕ್ಕೂ ಹೆಚ್ಚು ವಿವಿಧ ದೇವಾಲಯಗಳ ದೇವರುಗಳ ಉತ್ಸವ ಮೂರ್ತಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಇದು ರಾಜ್ಯದಲ್ಲೇ ವಿಶೇಷವಾಗಿದೆ. ದಸರಾ ಸಂಭ್ರಮಕ್ಕೆ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.


 ಜನಸಾಗರದ ನಿರೀಕ್ಷೆ
ಶಿವಮೊಗ್ಗದಲ್ಲಿ ನಡೆಯಲಿರುವ ವಿಜಯದಶಮಿ ಹಾಗೂ ಬನ್ನಿ ಮುಡಿಯುವ ಸಂಭ್ರಮಕ್ಕೆ ಲಕ್ಷಾಂತರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ದಸರಾ ಮೆರವಣಿಗೆ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜಯದಶಮಿ ಉತ್ಸವ ನಡೆಯಲಿದ್ದು, ನಗರದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದಸರಾ ಸಂಭ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

 ಪುರಾತನ ನಾಣ್ಯ  ಪ್ರದರ್ಶನ


ಶಿವಮೊಗ್ಗ ದಸರಾ ಅಂಗವಾಗಿ ವೀರಶೈವ ಕಲ್ಯಾಣ ಮಂದಿರದಲ್ಲಿ ನಾಣ್ಯ  ಪ್ರದರ್ಶನ ಆಯೋಜಿಸಲಾಗಿದೆ. ಪುರಾತನ ನಾಣ್ಯ ಸಂಗ್ರಹದಲ್ಲಿ ಆಸಕ್ತಿ ಹೊಂದಿರುವವರನ್ನು ಗುರುತಿಸಿ, ಅವರ ಅಪರೂಪದ ಹಾಗೂ ವೈವಿಧ್ಯಮಯ ನಾಣ್ಯ ಸಂಗ್ರಹವನ್ನು ಸಾರ್ವಜನಿಕರಿಗೆ ಪರಿಚಯಿಸುವ ಉದ್ದೇಶ ಹೊಂದಲಾಗಿದೆ. ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉದ್ಘಾಟಿಸಲಿದ್ದಾರೆ. ದಸರಾ ಕಾರ್ಯಕ್ರಮಗಳಲ್ಲಿನ ಈ ವಿಶೇಷ ಪ್ರದರ್ಶನ ಸಾರ್ವಜನಿಕರ ಗಮನ ಸೆಳೆಯಲಿದೆ.
 ರವಿಚಂದ್ರನ್‌ರಿಂದ ಸಾಂಸ್ಕೃತಿಕ ಸಂಭ್ರಮ

ಶಿವಮೊಗ್ಗ ದಸರಾ ಅಂಗವಾಗಿ ಅ.೨೦ ರಂದು ಯುವ ದಸರಾ ಮ್ಯೂಸಿಕಲ್ ನೈಟ್ ಕಾರ್ಯಕ್ರಮ ನಡೆಯಲಿದ್ದು, ಅಂದು ಸಂಜೆ ೫.೦೦ ಗಂಟೆಗೆ ಖ್ಯಾತ ಚಲನಚಿತ್ರ ನಟ ರವಿಚಂದ್ರನ್ ಅವರು ಭಾಗವಹಿಸಲಿದ್ದಾರೆ. ಯುವ ದಸರಾದಲ್ಲಿ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ರವಿಚಂದ್ರನ್ ಅವರ ಉಪಸ್ಥಿತಿಯಲ್ಲಿ ರಂಗು ಪಡೆಯಲಿವೆ. ಯುವಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಪಾಲಿಕೆ ಕಟ್ಟಡಕ್ಕೆ ವಿಶೇಷ ಅಲಂಕಾರ
ಶಿವಮೊಗ್ಗ ದಸರಾ ಅಂಗವಾಗಿ ಮಹಾನಗರ ಪಾಲಿಕೆ ಕಟ್ಟಡಕ್ಕೆ ಹಾಗೂ ಆವರಣದಲ್ಲಿ ವಿಶೇಷ ಅಲಂಕಾರ ಮಾಡಲಾಗುತ್ತಿದೆ. ನಗರದ ಪ್ರಮುಖ ಸ್ಥಳಗಳಲ್ಲಿಯೂ ದಸರಾ ಸಂಭ್ರಮವನ್ನು ಬಿಂಬಿಸುವ ಅಲಂಕಾರಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ. ಪತ್ರಿಕಾಗೋಷ್ಠಿಯಲ್ಲಿ ದಸರಾ ಉತ್ಸವ ಸಮಿತಿ ಪದಾಧಿಕಾರಿಗಳು ಇದ್ದರು.

Ad Widget

Related posts

ಭೀಮನ ಅಮವಾಸ್ಯೆ ಸಿಗಂದೂರು ದೇವಿಗೆ ವಿಶೇಷ ಅಲಂಕಾರ, ಹರಿದು ಬಂದ ಭಕ್ತಸಾಗರ

Malenadu Mirror Desk

ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಿ ಆಕ್ರೋಶ, ಯಡಿಯೂರಪ್ಪ ಜನ್ಮದಿನಕ್ಕೆ ಹಂಚಿದ್ದ ಸೀರೆ ಸುಟ್ಟು ಪ್ರತಿಭಟಿಸಿದರು

Malenadu Mirror Desk

ಜಿಲ್ಲೆಯಲ್ಲಿ ಹರ್ ಘರ್ ತಿರಂಗ್ ಅಭಿಯಾನ ಯಶಸ್ವಿಗೆ ಸಿದ್ಧತೆ: ಜಿಲ್ಲಾಧಿಕಾರಿ ಆರ್.ಸೆಲ್ವಮಣಿ

Malenadu Mirror Desk
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.