Malenadu Mitra
ರಾಜ್ಯಶಿವಮೊಗ್ಗ

ರಾಜ್ಯದಲ್ಲಿ ಮೂರನೇ ಸಿಎಂ ಸಾಧ್ಯತೆ , ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈವಿಜಯೇಂದ್ರ ಹೇಳಿಕೆ

ಹೊಸನಗರ: ಸ್ಟಿಂಗ್‌ ಆಪರೇಷನ್‌ ಮತ್ತು ಅದರ ಹಿನ್ನೆಲೆಯಲ್ಲಿ ನಡೆಎಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ರಾಜ್ಯ ಕಾಂಗ್ರೆಸ್‌ ಸರಕಾರದಲ್ಲಿ ಮೂರನೇ ಸಿಎಂ ಬಂದ್ರೂ ಆಶ್ಚರ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಬಿಜೆಪಿ ಸೇವಾ ಸಂಕಲ್ಪ ಅಭಿಯಾನ ಸಮಾರೋಪ ಸಮಾರಂಭ ಬಳಿಕ ಬುಧವಾರ ಹೊಸನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಹೇಳೋದು ನಿಮಗೆ ಉಡಾಫೆ ಅನಿಸಬಹುದು. ಆದರೆ ಅದು ಸತ್ಯ 3ನೇ ಸಿಎಂ ಬಂದ್ರೂ ಆಶ್ಚರ್ಯವಿಲ್ಲ, ಆ ರೀತಿ ಗೊಂದಲ ಕಾಂಗ್ರೆಸ್ ಪಕ್ಷದಲ್ಲಿದೆ. ಕಾಂಗ್ರೆಸ್‌ನಲ್ಲಿ ಆಂತರಿಕ ಸಮಸ್ಯೆಗಳು ಉಲ್ಬಣವಾಗಿದ್ದು ಅದು ಯಾವ ಹಂತಕ್ಕೆ ಬೇಕಾದರೂ ಹೋಗಬಹುದು ಎಂದು ಅವರು ಹೇಳಿದರು.

ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಬರುತ್ತಾರೆ ಎಂದು ನಾನು ಹಿಂದೆ ಹೇಳಿದ್ದು, ಅದರರ್ಥ ನಾವು ಈ ಸರ್ಕಾರವನ್ನ ಕೆಡವಿ ಅಧಿಕಾರಕ್ಕೆ ಬರ್ತೇವೆ ಅಂತಾ ಹೇಳ್ತಿಲ್ಲ. ನಾಳೆ ಚುನಾವಣಾ ಘೋಷಣೆಯಾದ್ರೂ ಕನಿಷ್ಟ 20- 25 ಜನ ಬಿಜೆಪಿಗೆ ಬರ್ತಾರೆ. ಆಡಳಿತ ಪಕ್ಷದ ಶಾಸಕರು ಬಂದು ಸೇರ್ತಾರೆ. ಆ ರೀತಿಯ ವಾತಾವರಣ ಇದೆ. ಕಾಂಗ್ರೆಸ್ ಬಗ್ಗೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ವಿಜಯೇಂದ್ರ ತಮ್ಮ ಹೇಳಿಕೆಯನ್ನು ವ್ಯಾಖ್ಯಾನಿಸಿದರು. ರಾಜ್ಯದ ಹಣಕಾಸು ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದ್ರೇ ಕೆಎಸ್ಆರ್ಟಿಸಿ ಬಸ್ ಗೆ ಡಿಸೇಲ್ ಇಲ್ಲ. ಸಿಎಂ ಕರಾವಳಿಗೆ ಹೋಗಿ, 34 ಸಾವಿರ ಕೋಟಿ ಘೋಷಣೆ ಮಾಡಿದ್ರು. ಅದರ ಮರುದಿನವೇ ಆರ್ಥಿಕ ಇಲಾಖೆ ಸಿಎಂಗೆ ಪತ್ರ ಬರೆದು ಎಚ್ಚರಿಸಿತು. ರಾಜ್ಯದ ಖಜಾನೆ ಸಂಪೂರ್ಣ ಖಾಲಿಯಾಗಿದೆ‌. ಸರ್ಕಾರ ದಿವಾಳಿಯಾಗಿದೆ ಎಂದು ಘೋಷಣೆ ಮಾಡೋದು ಬಾಕಿ ಇದೆ ಎಂದರು.

ಸಿದ್ದರಾಮಯ್ಯರಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂತೋ ಅಂತಹ ನಾಯಕನನ್ನು ಮೂಲೆಗುಂಪು ಮಾಡುವ ಷಡ್ಯಂತ್ರ ಕಾಂಗ್ರೆಸ್‌ನಲ್ಲಿ ನಡೆಯುತ್ತಿದೆ. ಇದರ ಪರಿಣಾಮವೇ ಸ್ಟಿಂಗ್ ಆಪರೇಶನ್. ಸಿದ್ದರಾಮಯ್ಯ ಕೂಡ ಹೈಕೋರ್ಟ್ ಗೆ ಹೋಗಿ ಸ್ಟೆ ತಗೋಳುವ ಪರಿಸ್ಥಿತಿ ನಿರ್ಮಾಣ ಆಗಿದೆ. ಇವತ್ತು ಕಾಂಗ್ರೆಸ್ ಪಕ್ಷದಲ್ಲಿ ಮಂತ್ರಿಗಳು, ಶಾಸಕರು ಭಯಭೀತರಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸ್ಟಿಂಗ್ ನಿರ್ಮಾತೃಗಳಿದ್ದಾರೆ. ಮಾಜಿ ಸಚಿವ ರಾಜಣ್ಣರ ಹೇಳಿಕೆಯನ್ನ ಎಲ್ಲರೂ ಗಮನಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು, ಮಾಜಿ ಸಚಿವರು ಇದನ್ನ ಅಲ್ಲಗೆಳೆಯುತ್ತಿಲ್ಲ. ಇದರ ಪ್ರೊಡ್ಯೂಸರ್, ಡೈರೆಕ್ಟರ್ ಯಾರು ಅಂತಾ ಕಾಂಗ್ರೆಸ್ ಪಕ್ಷದವರೇ ತಿಳಿಸ್ತಾರೆ. ಎಂದು ವಿಜಯೇಂದ್ರ ಟೀಕಿಸಿದರು.


ವಿಜಯೇಂದ್ರ ಸಿಎಂ ಆಗ್ತಾರೆ: ಹಾಲಪ್ಪ

ಶಿವಮೊಗ್ಗ ಜಿಲ್ಲೆ ರಾಜ್ಯಕ್ಕೆ ನಾಲ್ಕು ಮಂದಿ ಮುಖ್ಯಮಂತ್ರಿಗಳನ್ನು ನೀಡಿರುವ ಹೆಗ್ಗಳಿಕೆ ಹೊಂದಿದೆ. ಐದನೇ ಮುಖ್ಯಮಂತ್ರಿಯಾಗಿ ವಿಜಯೇಂದ್ರ ಅಯ್ಕೆಯಾಗಬೇಕು ಆಗೇ ಆಗುತ್ತೀರಾ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು. ಬಿಜೆಪಿ ಸೇವಾ ಸಂಕಲ್ಪ ಅಭಿಯಾನ ಸಮಾರೋಪದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಅವರು ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಮೂರು ವರ್ಷದಲ್ಲಿ ಮೂರು ಲಕ್ಷ ಕಿಲೋಮೀಟರ್‌ ಪ್ರವಾಸ ಮಾಡಿದ್ದಾರೆ. ಜನರ ಸಮಸ್ಯೆಗಳಿಗೆ ಪಕ್ಷ ಸ್ಪಂದಿಸುತ್ತಿದೆ. ಮುಂದಿನ ಮುಖ್ಯಮಂತ್ರಿ ಅವರಾಗಲಿ ಎಂದು ಹಾರೈಸಿದರು.
ರಾಜ್ಯ ಸರಕಾರ ಅಧಿಕಾರಕ್ಕೆ ಬಬಂದು ಮೂರು ವರ್ಷಗಳಲ್ಲಿ ಬಡವರಿಗೆ ಒಂದೂ ಮನೆಯನ್ನು ನೀಡಿಲ್ಲ. ಬಿಜೆಪಿ ಸರಕಾರ ಇದ್ದಾಗ ರೈತರಿಗಾಗಿ ಬಜೆಟ್‌ ಮಂಡನೆ ಮಾಡಿದ್ದರು. ಯಡಿಯೂರಪ್ಪ ಅವರು ಮಕ್ಕಳಿಗೆ ಸೈಕಲ್‌ ನೀಡಿದ್ದರಿಂದ ಹೆಣ್ಣುಮಕ್ಕಳು ಶಿಕ್ಷಿತರಾದರು. ಸಾಗರ ಶಾಸಕರು ಯಾವ ಸೇತುವೆ ಮತ್ತು ಕಾಲುಸಂಕ ತಂದಿದ್ದಾರೆ ಎಂಬುದನ್ನು ಹೇಳಬೇಕು. ಮೂರು ವರ್ಷದಲ್ಲಿ ಹಸಿರುಮಕ್ಕಿಯಲ್ಲಿ ಮೂರು ಪಿಲ್ಲರ್‌ ನಿರ್ಮಾಣ ಮಾಡಿದ್ದಾರೆ ಎಂದು ಹಾಲಪ್ಪ ವ್ಯಂಗ್ಯವಾಡಿದರು.

ಜಿಲ್ಲಾ ಮಂತ್ರಿಗೆ ಆಡಳಿತದ ಅನುಭವವೇ ಇಲ್ಲ. ಒಂದು ಅಡಕೆ ಮರಕ್ಕೆ 16 ರೂ. ಪರಿಹಾರ ಕೊಡಿಸಿದ್ದಾರೆ. ಈಗ ಒಂದು ಅಡಕೆ ಸಸಿಗೆ 60 ರೂ. ಇದೆ. ಬಾಯಿಗೆ ಬಂದಂಗೆ ಠೇಂಕಾರದ ಮಾತನಾಡುವುದೇ ಅವರ ಸಾಧನೆಯಾಗಿದೆ. ಶಿಕಾರಿಪುರದಲ್ಲಿ ಹೋಗಿ ಯಡಿಯೂರಪ್ಪ ಮತ್ತು ಹಾಲಪ್ಪ ಜೈಲಿಗೆ ಹೋದವರು ಎಂದು ಹೇಳುತ್ತಾರೆ. ನಾವು ಕೋರ್ಟ್‌ ಮುಖಾಂತರ ಕೇಸು ಗೆದ್ದು ಬಂದಿದ್ದೇವೆ ಆದರೆ ಕೋರ್ಟ್‌ಗೆ ಹೋಗಿ ಸ್ಟೇ ತಂದಿಲ್ಲ ಎಂದು ಹಾಲಪ್ಪ ಹೇಳಿದರು.

ಸಮಾವೇಶದಲ್ಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಬಿ.ಸ್ವಾಮಿರಾವ್‌, ಎಂಎಲ್ಸಿ ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ಮಾಜಿ ಎಂಎಲ್ಸಿ ಭಾರತಿಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ, ಒಬಿಸಿ ಮೋರ್ಚಾ ಅಧ್ಯಕ್ಷ ಎಂ.ಎನ್.ಸುಧಾಕರ್‌, ದೇವಾನಂದ್‌ ಸೇರಿ ಬಿಜೆಪಿ ಮುಖಂಡರು ಭಾಗವಹಿಸಿದ್ದರು.ಸೇವಾ ಸಂಕಲ್ಪದ ಅಂಗವಾಗಿ ಹೊಸನಗರದಲ್ಲಿ ಬೈಕ್‌ ರ್ಯಾಲಿ ಹಾಗೂ ಈಡಿಗ ಭವನದಲ್ಲಿ ಮಹಿಳಾ ಆರೋಗ್ಯ ಜಾಗೃತಿ ಅಂಗವಾಗಿ ಮಹಿಳೆಯರಿಗೆ ಗರ್ಭಕಂಠ ಕ್ಯಾನ್ಸರ್‌ ಕುರಿತು ಮಾಹಿತಿ ನೀಡಲಾಯಿತು.


ಪಂಚಾಯತ್‌ ಚುನಾವಣೆ ಹೊಂದಾಣಿಕೆ

ರಾಜ್ಯದಲ್ಲಿ ಬಿಜೆಪಿ ಪರವಾದ ವಾತವರಣ ಇದೆ. ಈಗಾಗಲೇ ಕುಮಾರಸ್ವಾಮಿ ಅವರ ಜೊತೆ ಮಾತಾಡಿದ್ದೇನೆ. ಜಿ.ಪಂ. ತಾ.ಪಂ ಹೊಂದಾಣಿಕೆ ಬಗ್ಗೆ ಚರ್ಚೆ ನಡೆದಿದೆ. ಚುನಾವಣೆ ಸಂದರ್ಭ ಗೊಂದಲ ಬೇಡ. ಯಾವ ಕಾರ್ಯಕರ್ತರಿಗೂ ಅನ್ಯಾಯ ಆಗಬಾರದು. ಸಂಘಟನೆಗಾಗಿ ಎಲ್ಲರೂ ಕೆಲಸ ಮಾಡಬೇಕೆಂದು ವಿಜಯೇಂದ್ರ ಕಾರ್ಯಕರ್ತರಿಗೆ ಕರೆ ನೀಡಿದರು.

ಬಿಜೆಪಿಯಲ್ಲಿ ಐಟಿ ಸೆಲ್‌ ಇರುವಂತೆ ಕಾಂಗ್ರೆಸ್‌ನಲ್ಲಿ ಸ್ಟಿಂಗ್‌ ಸೆಲ್‌ ಇದೆ. ಕಳೆದ 2-3 ವರ್ಷದಿಂದ ಸ್ಟಿಂಗ್ ಸೆಲ್ ಕೆಲಸ ಮಾಡಿದೆ. ಅಧಿಕಾರಕ್ಕೆ ಬರುವ ಹಪಾಹಪಿಯಿಂದ ಸ್ಟಿಂಗ್ ಮಾಡಿದ್ದಾರೆ. ಇದು ಮುಂದೆ ಎಲ್ಲಿಗೆ ಹೋಗಿ ನಿಲ್ಲುತ್ತೊ ಗೊತ್ತಿಲ್ಲ


ಸಾಗರ ಶಾಸಕರು ಅಧಿಕಾರಿಗಳು, ಲೇಔಟ್‌ನವರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಪೊಲೀಸರು ಹಣಕೊಟ್ಟು ಬಂದು ಮರಳು ,ಕಲ್ಲುಕ್ವಾರಿಯವರಿಂದ ವಸೂಲಿ ಮಾಡಬೇಕು. ಮೆಸ್ಕಾಂನವರಿಂದಲೂ ಹಣ ವಸೂಲಿ ಮಾಡುತ್ತಿದ್ದಾರೆ. ಇದನ್ನು ಈಗಿನ ಸಿಎಂ ಪವರ್‌ ಮಿನಿಸ್ಟರ್‌ ಆಗಿದ್ದಾಗ ಆರಂಭಿಸಿದ್ದರು. ಹಣಕೊಡಲಾಗದೆ ಹೊಸನಗರಕ್ಕೆ ಎಕ್ಸಿಕ್ಯುಟಿವ್‌ ಎಂಜನಿಯರ್‌, ಸಾಗರಕ್ಕೆ ಪಿಎಸ್‌ಐ ಬರುತ್ತಿಲ್ಲ.

–ಹರತಾಳು ಹಾಲಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷರು

Ad Widget

Related posts

ಬಿ.ವೈ ವಿಜಯೇಂದ್ರಗೆ ಅದ್ದೂರಿ ಸ್ವಾಗತ, ಈಶ್ವರಪ್ಪ-ಸಂಘದ ಪ್ರಮುಖರ ಮನೆಗೆ ಭೇಟಿ:ತೆರೆದ ವಾಹನದಲ್ಲಿ ಮೆರವಣಿಗೆ

Malenadu Mirror Desk

ಇಂಗುಗುಂಡಿಗಳಿಂದ ಅಂತರ್ಜಲ ಅಭಿವೃದ್ಧಿ: ಎಸ್.ಎಂ.ನೀಲೇಶ್

Malenadu Mirror Desk

ವಿಮಾನ ನಿಲ್ದಾಣ ಉದ್ಘಾಟನೆ ಜಿಲ್ಲಾಡಳಿತದ ಕಾರ್ಯಕ್ರಮವಾಗಬೇಕು

Malenadu Mirror Desk
error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.